ವಿಜಯಪುರ ದರಬಾರ ಪ್ರೌಡಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ | ಗುರು-ಶಿಷ್ಯರ ಮಹಾಸಂಗಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗುರು ಶಿಷ್ಯರ ನಡುವಿನ ಸಂಬಂಧ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದದ್ದು. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು, ಗುರು ಶಿಷ್ಯರ ನಡುವಿನ ಸಂಬಂಧದ ಶ್ರೇಷ್ಠತೆಯನ್ನು ಇಂದಿನ ಯುವ ಜನಾಂಗ ಅರಿಯಬೇಕು ಎಂದು ಡಾ. ಆರ್.ಬಿ.ಚೌಧರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಗೌತಮ್ ಆರ್. ಚೌಧರಿ ಹೇಳಿದರು.
ನಗರದ ವಿ.ಭ.ದರಬಾರ ಪ್ರೌಡಶಾಲೆಯ ೧೯೮೬-೮೭ ನೇ ಸಾಲಿನ ೧೦ನೇ ತರಗತಿಯ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡ ತಮ್ಮ ಅಂದಿನ ಶಾಲಾ ಗುರುಗಳಿಗೆ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಇಂದು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆದಿದ್ದರೆ ಅದರ ಹಿಂದೆ ನಮಗೆ ಅಕ್ಷರ ಜ್ಞಾನ ನೀಡಿದ ಗುರುವಿನ ಶ್ರಮ ಅಡಗಿರುತ್ತದೆ. ಅವರಿಂದಲೇ ನಾವು ಈ ಸ್ಥಾನಕ್ಕೇರಿದ್ದೇವೆ ಎಂಬುದನ್ನು ಯಾವತ್ತೂ ಮರೆಯಬಾರದು ಎಂದರಲ್ಲದೆ, ತಮಗೆ ವಿದ್ಯಾದಾನ ನೀಡಿದ ಗುರುವೃಂದಕ್ಕೆ ಉಚಿತ ವೈದ್ಯಕೀಯ ಸೇವೆ ನೀಡಲು ಹಾಗೂ ತಾವು ಕಲಿತ ಈ ಶಾಲೆಯ ಅಬಿವೃದ್ಧಿಗೆ ಸದಾ ಬದ್ದನಾಗಿರುವೆ ಎಂದು ಡಾ.ಗೌತಮ್ ಚೌಧರಿ ಭರವಸೆ ನೀಡಿದರು.
ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಲ್ಲ ಗುರುವೃಂದ, ತಮ್ಮ ವಿದ್ಯಾರ್ಥಿಗಳಿಂದ ಸನ್ಮಾನ ಸ್ವೀಕರಿಸಿ ಭಾವುಕರಾದರು.
ಎಂದೋ ಓದಿ ಉನ್ನತ ಮಟ್ಟದ ಹುದ್ದೆ ಅಲಂಕರಿಸಿದ, ಇಂದು ತಮ್ಮ ಗುರುಗಳನ್ನು ನೆನೆದು ಓದಿದ ಶಾಲೆಗೆ ಅಕ್ಷರ ತೋರಣ ಕಟ್ಟಿದ ಹಳೆಯ ವಿದ್ಯಾರ್ಥಿಗಳ ಕಾರ್ಯ ಅಭಿನಂದನೀಯ ಹಾಗೂ ಅನುಕರಣೀಯವಾಗಿದ್ದು ಎಂದು ಮನದುಂಬಿ ಶ್ಲಾಘಿಸಿದರು.
ಪ್ರಾಚಾರ್ಯೆ ವಿ.ಆರ್.ಕುಲಕರ್ಣಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ನಮ್ಮ ಶಾಲೆಯ ಹೆಮ್ಮೆ. ತಾವು ಆಗಾಗ ಇಲ್ಲಿಗೆ ಬಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕೆಂದು ಸಲಹೆ ನೀಡಿದರು.
ಸ್ವಾಮಿ ವಿವೇಕಾನಂದ ಸೇನೆ ರಾಜ್ಯಾಧ್ಯಕ್ಷ ರಾಘು ಅಣ್ಣಿಗೇರಿ ಪ್ರಾಸ್ತಾವಿಕ ಮಾತುಗಳಾಡಿದರು.
ರಾಜಶೇಕರ ಸಂಜವಾಡಮಠ ಪ್ರಾರ್ಥಿಸಿದರು. ಡಾ. ಡಿ.ಎನ್.ಧರಿ ಸ್ವಾಗತಿಸಿ, ನಿರೂಪಿಸಿದರು. ಮಂಜುನಾಥ ಬಿದರಿ ವಂದಿಸಿದರು.
ಸುಮಾರು ೭೦ ಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಗುರುವೃಂದವನ್ನು ಪೂಜ್ಯ ಭಾವದಿಂದ ಕಣ್ತುಂಬಿಕೊಂಡರು.

ಧನ್ಯತೆ ಮತ್ತು ಸಾರ್ಥಕತೆ ಭಾವ
ಒಂದು ಕಾಲದ ಗುರುಗಳನ್ನು ಕಂಡು ಗತ ಕಾಲದತ್ತ ಸರಿದು ಹೋದ ಶಿಷ್ಯರ ಮೊಗದಲ್ಲಿ ಧನ್ಯತಾ ಭಾವ ಮೂಡಿದ್ದರೆ, ಶಿಷ್ಯರ ಅಂದಿನ ಒಡನಾಟವನ್ನು ತಮ್ಮ ಸ್ಮೃತಿಪಟಲದ ಮೇಲೆ ಮೂಡಿಸಿಕೊಳ್ಳುತ್ತ ಅವರ ಪ್ರೀತಿ – ಅಭಿಮಾನದ ಸುರಿಮಳೆಯಲ್ಲಿ ಒದ್ದೆಯಾದ ಗುರುಗಳ ಮೊಗದಲ್ಲಿ ಸಾರ್ಥಕ ಭಾವ ಮೂಡಿತ್ತು. ಎಲ್ಲರ ಕಣ್ಣಲ್ಲೂ ಆನಂದಭಾಷ್ಪ ಇಣುಕುತ್ತಿತ್ತು.
ಪಾಲ್ಗೊಂಡ ಗುರುವೃಂದ
ಶ್ರೀಮತಿ ಯು.ಎಂ.ಬಾಡಗಂಡಿ
ಶ್ರೀ ಎಸ್.ಟಿ.ಪುಣೇಕರ
ಶ್ರೀ ಕೆ.ಸಿ.ನಡಕಟ್ಟಿ
ಶ್ರೀ ಎಂ.ಆರ್.ಪಾಟೀಲ
ಶ್ರೀ ಕೆ.ಜಿ.ಕುಲಕರ್ಣಿ
ಶ್ರೀ ಎಂ.ಕೆ.ಪತ್ತಾರ
ಶ್ರೀ ಜಿ.ಎನ್.ದೇಶಪಾಂಡೆ
ಶ್ರೀ ಬಿ.ಆರ್.ಪಾಟೀಲ
ಶ್ರೀಮತಿ ನಿರ್ಮಲಾ ಧಿಟೆ
ಪ್ರಾಚಾರ್ಯೆ ವ್ಹಿ.ಆರ್.ಕುಲಕರ್ಣಿ
ಅರ್ಥಪೂರ್ಣ ಆಯೋಜನೆ
ಕಾರ್ಯಕ್ರಮದ ಯಶಸ್ಸಿಗಾಗಿ ಅವಿರತ ಶ್ರಮಿಸಿದ ಹಳೆಯ ವಿದ್ಯಾರ್ಥಿಗಳಾದ ಎಲ್.ಪಿ.ಕುಲಕರ್ಣಿ, ಶಿವು ವಾರನಕೋಡಿ, ರಾಜು ಓತಿಹಾಳ, ಸಿದ್ದು ಹಂಜಿ, ಅಶೋಕ ಮಾಡಗಿ ಮೊದಲಾದವರು ಸಮಾರಂಭವನ್ನು ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ಆಯೋಜಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಪುಷ್ಪವೃಷ್ಟಿರೊಂದಿಗೆ ಮೆರವಣಿಗೆ
ಸಭೆಗೂ ಮುನ್ನ ಶಿಷ್ಯವೃಂದವು ತಮ್ಮೆಲ್ಲ ಗುರುವೃಂದವನ್ನು ಕರಡಿಮಜಲಿನ ಸಾಂಪ್ರದಾಯಕ ವಾದ್ಯಮೇಳದೊಂದಿಗೆ ಮೆರವಣಿಗೆಯಲ್ಲಿ ಸಂಭಾಂಗಣಕ್ಕೆ ಗೌರವಪೂರ್ವಕವಾಗಿ ಕರೆತರಲಾಯಿತು.
ದಾರಿಯುದ್ದಕ್ಕೂ ಗುರುಗಳ ಮೇಲೆ ಶಿಷ್ಯವೃಂದವು ಪುಷ್ಪವೃಷ್ಟಿಗೈಯುತ್ತ ಸಾಗಿದ್ದು ವಿಶೇಷವಾಗಿತ್ತು.
ಗುರು-ಶಿಷ್ಯರ ಸಮ್ಮಿಲನದ ಸ್ಮರಣೆಗಾಗಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು ಪರಿಸರ ಪ್ರೇಮ ಮೆರೆಯಲಾಯಿತು.

