ನಾಗನೂರ ಗ್ರಾಮದಲ್ಲಿ ಪ್ರತಿಭಾ ಕಾರಂಜಿ | ಕಲೋತ್ಸವ ಕಲರವ | ಮಕ್ಕಳ ನೃತ್ಯ, ವೇಷ ಭೂಷಣ ವೈಭವ
ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಮುಗ್ದ ಮನಸ್ಸಿನ ಮಕ್ಕಳ ಮನಭಾವದಲ್ಲಿ ಹುದುಗಿರುವ ಕಲಾ,ಕೌಶಲ್ಯದ ಸುಪ್ತಾವಸ್ಥೆಯ ಪ್ರತಿಭೆ ಹೊರಗಟ್ಟಲು ಪ್ರತಿಭಾ ಕಾರಂಜಿ, ಕಲೋತ್ಸವ ಅತ್ಯುತ್ತಮ ವೇದಿಕೆಯಾಗಿದೆ ಎಂದು ಹಿರೇಪಡಸಲಗಿ ವಲಯದ ಸಿ.ಆರ್.ಪಿ. ರಾಚಣ್ಣ ಹಣಮಂತ ಮುದ್ನೂರ ಹೇಳಿದರು.
ಸಮೀಪದ ನಾಗನೂರ ಗ್ರಾಮದ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಶಾಲಾ ಶಿಕ್ಷಣ ಇಲಾಖೆ, ಜಿಪಂ ಬಾಗಲಕೋಟ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾಯಾ೯ಲಯ ಜಮಖಂಡಿ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಹಿರೇಪಡಸಲಗಿ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿ ಮಗುವಿನಲ್ಲಿ ಒಂದಿಲ್ಲೊಂದು ರೀತಿಯ ಕೌಶಲ್ಯಗಳಿವೆ. ಹಲ ಮಕ್ಕಳು ತಮ್ಮಲ್ಲಿ ಅಡಗಿರುವ ಪ್ರತಿಭೆ ಹೊರಹಾಕಲು ಭಯ ಪಡುತ್ತಾರೆ. ಅಧೈರ್ಯದಿಂದ ಹಿಂಜರಿದು ಕಲಾತ್ಮಕ ಕಲಾ, ಕಲೆ ಕಮರಿಸಿಕೊಂಡು ದೂರುಳಿಯುತ್ತಲ್ಲಿದ್ದಾರೆ. ಇಂಥ ಯುವ ಮಕ್ಕಳ ಭಾವಗಳನ್ನು ಪೋಷಕರು, ಶಿಕ್ಷಕರು ಗುರುತಿಸಿ ಅವುಗಳನ್ನು ಪ್ರೋತ್ಸಾಹಿಸಿ ಹುರಿದುಂಬಿಸಿದರೆ ಉತ್ತಮ ಸಾಧನೆಗೆ ಸಹಕಾರಿಯಾಗಲಿದೆ ಎಂದರು.
ಪ್ರತಿಭಾ ಕಾರಂಜಿಯಲ್ಲಿ ಒಳ್ಳೆಯ ಪ್ರತಿಭಾವಂತ ವಿದ್ಯಾರ್ಥಿಗಳು ಪಾಲ್ಗೊಂಡು ನಿರೀಕ್ಷೆಗೂ ಮೀರಿ ಪ್ರತಿಭೆ ಅನಾವರಣಗೊಳಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳಂತೂ ತಮ್ಮ ಪ್ರತಿಭೆ ಮೂಲಕ ಗಮನಾರ್ಹ ಸಾಧನೆ ಗೈಯುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.
ಶಿಕ್ಷಣ ಸಂಯೋಜಕ ಮಹಾಂತೇಶ ಚವ್ಹಾಣ ಮಾತನಾಡಿ, ಯುವ ಮಕ್ಕಳು ಪಠ್ಯಕ್ಕೆ ಸೀಮಿತವಾಗದೇ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಅಭಿರುಚಿ,ಆಸಕ್ತಿಯಿಂದ ಅಭಿನಯ,ನಾಟಕ, ಸಂಗೀತ,ಚಿತ್ರಕಲೆ, ಮಿಮೀಕ್ರಿ,ನೃತ್ಯ, ಹಾಡು ಸೇರಿದಂತೆ ತಮ್ಮ ಹೃದಯ ಮಸ್ತಕ ಭಾವದಲ್ಲಿ ಅಡಗಿ ಒಳ ನುಸುಳಿರುವ ಹಲವಾರು ಸ್ತರದ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯಾಗಿರುವ ಪ್ರತಿಭಾ ಕಾರಂಜಿ ಮಕ್ಕಳ ಓದಾಸಕ್ತಿ ಪ್ರಗತಿಗೆ ಸಹಕಾರಿಯಾಗಿದೆ ಎಂದರು.
ಶಿಕ್ಷಣ ಸಂಯೋಜಕ ಎಸ್.ವಿ.ವಿಜಾಪೂರ ಮಾತನಾಡಿ, ಮಕ್ಕಳಿಗೆ ಇದೊಂದು ಒಳ್ಳೆಯ ವೇದಿಕೆ.ವಿವಿಧ ಸ್ಪಧೆ೯ಗಳಲ್ಲಿ ತಮ್ಮ ಪ್ರತಿಭೆ ಉತ್ತಮ ರೀತಿಯಲ್ಲಿ ತೋರ್ಪಡಿಸಿ ತಾಲೂಕು,ಜಿಲ್ಲಾ, ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಮಿನುಗಿ ಈ ಭಾಗದ ಹೆಸರು ತನ್ನಿ. ಆ ದಿಸೆಯಲ್ಲಿ ಪ್ರತಿಭಾವಂತ ಸುಪ್ತ ಪ್ರತಿಭೆಗಳನ್ನು ಗುರುತಿಸುವುದು ತೀಪು೯ಗಾರರ ಹೊಣೆಗಾರಿಕೆಯಾಗಿದೆ. ಉತ್ತಮ ತೀಪು೯ ನೀಡಿ ಮಕ್ಕಳ ಪ್ರತಿಭೆ ಅರಳುವಂತೆ ಮಾಡಬೇಕೆಂದರು.
ಗ್ರಾಮದ ಹಿರಿಯರಾದ ಲಕ್ಕೂ ಮುತ್ಯಾ ಸಾನಿಧ್ಯ ವಹಿಸಿದ್ದರು. ಶಾಲಾ ಸ್ಥಾನಿಕ ಮಂಡಳಿ ಅಧ್ಯಕ್ಷ ಶಾಂತು ಮಲ್ಲಪ್ಪ ದೈಗೊಂಡ, ಧರೆಪ್ಪ ಯಾದಪ್ಪ ಶಿರಹಟ್ಟಿ, ಮಹಾಂತೇಶ ತೇರದಾಳ, ವಿಶ್ರಾಂತ ಶಿಕ್ಷಕ ಬಸವರಾಜ ಅನಂತಪೂರ, ರಮೇಶ ದೇಸಾಯಿ, ಬಿ.ಎಸ್.ಅರವಟ್ಟಿ, ಸಿ.ಡಿ.ಹರಿಜನ, ಕೆ.ಎಸ್.ಮಾದರ, ಎಂ.ಎಸ್.ಬಿರಾದಾರ, ಬಿ.ಎಸ್.ಉಪ್ಪಾರ, ಹಣಮಂತ ಕಡಕೋಳ ಮೊದಲಾದ ಗಣ್ಯರನೇಕರು ಸೇರಿದಂತೆ ವಲಯದ ಶಿಕ್ಷಕರು, ಗುರುಮಾತೆಯರ ಬಳಗ ಭಾಗಿಯಾಗಿದ್ದರು. ವಿವಿಧ ಪ್ರಾಥಮಿಕ, ಪ್ರೌಢಶಾಲೆಗಳ ನೂರಾರು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದಶಿ೯ಸಿ ಗಮನ ಸೆಳೆದರು. ಇದೇ ವೇಳೆ ಹಲವಾರು ಮಹನೀಯರಿಗೆ ಶಾಲು ಹೊದಿಸಿ ಸತ್ಕರಿಸಿ ಗೌರವಿಸಲಾಯಿತು.
ಶ್ರೀಮತಿ ಜೆ.ಎಚ್.ಕಡಕೋಳ ಸ್ವಾಗತಿಸಿದರು, ಶಿಕ್ಷಕ ಎಸ್.ಟಿ.ಸಂತಿ ನಿರೂಪಿಸಿ ವಂದಿಸಿದರು.

