ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಆತ್ಮಹತ್ಯೆಯನ್ನು ತಡೆಯಬೇಕೆಂದರೆ ನಾವು ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಬೇಕು. ಜನರು ಮುಕ್ತವಾಗಿ ಮಾನಸಿಕ ಆರೋಗ್ಯ ಮತ್ತು ಖಿನ್ನತೆಯ ಬಗ್ಗೆ ಮಾತನಾಡಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಹೇಳಿದರು.
ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ, ವಿಜಯಪುರ ಜಿಲ್ಲಾ ಮನೋರೋಗ ವಿಭಾಗ, ಹಾಗೂ ತಾಲೂಕ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡ ವಿಶ್ವ ಆತ್ಮಹತ್ಯೆ ತಡೆ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಸ್ಯೆಯಲ್ಲಿ ಇರುತ್ತಾರೆ. ಆ ಸಮಸ್ಯಗೆ ಹೆದರದೆ, ಜೀವನದಲ್ಲಿ ಕುಗ್ಗದೆ ಅದನ್ನು ಎದುರಿಸಿ ಜೀವನ ಸಾಗಿಸಬೇಕು. ನಮ್ಮ ಸುತ್ತಮುತ್ತಲು ಅನೇಕ ಜನರು ಆತ್ಮಹತ್ಯೆ ಮಾಡಿಕೊಳ್ಳುವ ಚಿಂತನೆಯಲ್ಲಿ ಇರುತ್ತಾರೆ. ಅದು ನಮ್ಮ ನಿಮ್ಮ ಗಮನಕ್ಕೆ ಬಂದರೆ ತಡೆಗಟ್ಟಿ ಆ ವ್ಯಕ್ತಿಯ ಮನಃ ಪರಿವರ್ತನೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಗಟ್ಟಬೇಕು. ನಮ್ಮ ಮಾನಸಿಕ ಆರೋಗ್ಯ ನಾವು ಕಾಪಾಡಿಕೊಳ್ಳಬೇಕು ಎಂದರು.
ಈ ವೇಳೆ ವಿಜಯಪುರ ಜಿಲ್ಲಾಸ್ಪತ್ರೆಯ ಮನೋವೈದ್ಯ ಡಾ.ಮಂಜುನಾಥ ಮಸಳಿ ಮಾತನಾಡಿ, ಆತ್ಮಹತ್ಯೆ ಮಾಡಿಕೊಳ್ಳಲು ಹೆಚ್ಚು ಪ್ರಯತ್ನ ಮಾಡುವವರು ಸ್ವ-ಉದ್ಯೋಗ ಮಾಡುವವರು ಹಾಗೂ ಮಹಿಳೆಯರು. ಏಕೆಂದರೆ ಕುಟುಂಬದಲ್ಲಿ ಒಂದು ಚಿಕ್ಕ ಸಮಸ್ಯೆಗೂ ಅವರು ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರ ತಲೆಯಲ್ಲಿ ಮೊದಲು ವಿಚಾರ ಬರುವುದು ನಾನು ಸಾಯಬೇಕು. ಇದರಿಂದ ನನಗೆ ನೆಮ್ಮದಿ ಸಿಗಬಹುದು ಎಂದು. ಇಂತಹ ಸಮಯದಲ್ಲಿ ಸ್ವಲ್ಪ ತಾಳ್ಮೆ ತೆಗೆದುಕೊಳ್ಳಬೇಕು. ತಮ್ಮ ಮುಂದಿನ ಭವಿಷ್ಯ ಹಾಗೂ ಮಕ್ಕಳ ಭವಿಷ್ಯದ ಕುರಿತು ವಿಚಾರ ಮಾಡಬೇಕು. ಇಂತಹ ಸಮಸ್ಯೆಗಳು ಇರುವವರು ಮಾನಸಿಕ ತಜ್ಞರನ್ನು ಕಾಣಬೇಕು. ಇದು ಮುಜುಗರಯಾದಲ್ಲಿ ಅಂತಹವರು ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಸಹಾಯವಾಣಿ ೧೪೪೧೬ಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಮತನಾಡಿ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಳ್ಳಬಹುದು. ಸರಕಾರಿ ಸಾರ್ವಜನಿಕ ಆಸ್ಪತ್ರೆ ಸಿಂದಗಿಯಲ್ಲಿ ಪ್ರತಿ ತಿಂಗಳ ಮೊದಲನೆ ಮಂಗಳವಾರದಂದು ಮನೋತಜ್ಞರು ಲಭ್ಯವಿದ್ದಾರೆ. ಇಲ್ಲಿ ಚಿಕಿತ್ಸೆ ಸಂಪೂರ್ಣ ಉಚಿತ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ, ಸಹನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊರ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿದ ಹಳ್ಳಿಗಳಿಂದ ಮಹಿಳೆಯರು, ಯುವಕರು, ಕಟ್ಟಡ ಕಾರ್ಮಿಕರು, ವಿಶೇಷ ಚೇತನರು ಮತ್ತು ಸಂಗಮ ಸಂಸ್ಥೆಯ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು.
ಬಸವರಾಜ ಬಿಸನಾಳ ಕಾರ್ಯಕ್ರಮ ನಿರೂಪಿಸಿದರು. ಉಮೇಶ ದೊಡಮನಿ ಸ್ವಾಗತಿಸಿದರು. ಮತ್ತು ಮಲಕಪ್ಪ ಹಲಗಿ ವಂದಿಸಿದರು.

