ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಗ್ರಾಮೀಣ ಪ್ರದೇಶದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳು ರೈತ ಸಮುದಾಯಕ್ಕೆ ಆಧಾರಸ್ತಂಭವಾಗಿವೆ ಎಂದು ಮಹಾಂತೇಶ್ವರಮಠದ ಬಸವಲಿಂಗಶ್ರೀಗಳು ಹೇಳಿದರು.
ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಶನಿವಾರ ಜರುಗಿದ ವಿ.ಪ್ರಾ.ಗ್ರಾ.ಕೃ.ಸ. ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು. ಕೃಷಿ ಸಹಕಾರಿ ಸಂಘಗಳು ರೈತ ಸಮುದಾಯಕ್ಕೆ ಸೇರಿದ ಸಂಸ್ಥೆಗಳು. ಇವುಗಳ ಲಾಭ, ಹಾನಿ ಸೇರಿದಂತೆ ಪ್ರತಿಯೊಂದು ಚಟುವಟಿಕೆಗಳ ಬಗ್ಗೆ ಅರಿಯುವುದು ರೈತರ ಜವಾಬ್ದಾರಿಯಾಗಿದೆ ಎಂದರು.
ವಿ.ಪ್ರಾ.ಗ್ರಾ.ಕೃ.ಸ. ಸಂಘದ ಅಧ್ಯಕ್ಷ ಸಂಗಮೇಶ ಛಾಯಾಗೋಳ ಮಾತನಾಡಿ, ರೈತ ಸಮುದಾಯ ಸರ್ವಸಾಧಾರಣ ಸಭೆಗೆ ಕಡ್ಡಾಯವಾಗಿ ಹಾಜರಾಗುವುದರ ಮೂಲಕ ತಮ್ಮ ಇಚ್ಛಾಶಕ್ತಿಯನ್ನು ತೋರ್ಪಡಿಸಬೇಕು. ಸಂಘ ಸದಸ್ಯರ ಸಹಕಾರದಿಂದ ಈ ವರ್ಷ ೧೩.೫೦ ಲಕ್ಷ ಲಾಭಗಳಿಸಿದ್ದು ಪ್ರಗತಿಪಥವನ್ನು ಸೂಚಿಸುತ್ತದೆ. ಸಂಘ ಇದೇ ರೀತಿಯಾಗಿ ಉತ್ತರೋತ್ತರವಾಗಿ ಅಭಿವೃದ್ಧಿಯಾಗಲು ಎಲ್ಲರ ಸಹಕಾರವಿರಲಿ ಎಂದರು.
ಇದೇ ಸಂದರ್ಭದಲ್ಲಿ ಭೂದಾನ ಮಾಡಿದ ಖ್ಯಾತ ವೈದ್ಯ ಎಸ್.ಎ.ಹಿರೇಮಠ ಹಾಗೂ ಅತ್ಯುತ್ತಮ ಶಿಕ್ಷಕರು, ಪ್ರಗತಿಪರ ರೈತರು, ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಚೌಕಿಮಠದ ಕಾಶೀಲಿಂಗ ಶ್ರೀಗಳು, ಸಂಘದ ಉಪಾಧ್ಯಕ್ಷ ಶರಣಪ್ಪ ತಾಳಿಕೋಟಿ, ಸದಸ್ಯರಾದ ಎಸ್.ಎಸ್.ಪೊಲೀಸಪಾಟೀಲ, ನಾನಾಗೌಡ ಬೋರಾವತ, ಜಿ.ಎಮ್. ಅಂಗಡಿ, ಸಂತೋಷಗೌಡ ಪೊ.ಪಾಟೀಲ, ಶರಣಬಸು ಸುಂಬಡ, ಸೋಮಶೇಖರ ಹಿರೇಮಠ, ಬಾಬಾಸಾಹೇಬ ಕೋಟಗಿ, ಇಸ್ಮಾಯಿಲ್ ವಡಗೇರಿ, ಚಿದಾನಂದ ಚವ್ಹಾಣ, ಭೀಮರಾಯ ತಳವಾರ ಅನೀಲ ಸೋಲಂಕಾರ ಸೇರಿದಂತೆ ಕೋರವಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಇದ್ದರು.

