ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹೆಣ್ಣು ಮಗುವನ್ನು ಸಂರಕ್ಷಿಸಿ, ಪೋಷಣೆ ಮಾಡಿ ಸುಶಿಕ್ಷಿತರನ್ನಾಗಿ ಮಾಡಿದರೆ ಲಿಂಗಾಧಾರಿತ ತಾರತಮ್ಯ ಹೋಗಲಾಡಿಸಲು ಸಾಧ್ಯ ಎಂದು ಅಂಗನವಾಡಿ ಕೇಂದ್ರದ ಹಿರಿಯ ಮೇಲ್ವಿಚಾರಕಿ ಪ್ರಮೀಳಾ ಕುಂದಗೋಳ ಹೇಳಿದರು.
ಅವರು ಶನಿವಾರದಂದು ತಾಲೂಕಿನ ನಾಗಠಾಣ ಗ್ರಾಮದ ಅಂಗನವಾಡಿ ಕೇಂದ್ರ-5 ರಲ್ಲಿ ಗ್ರಾಮ ಪಂಚಾಯಿತಿ, ಆರೋಗ್ಯ-ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವಿಜಯಪುರ ಇವರ ಸಹಯೋಗದಲ್ಲಿ ಪಾಲಕರ ಸಭೆ,ಪೋಷಣ್ ಮಾಸಾಚಾರಣೆ, ‘ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ’ ಅಭಿಯಾನವನ್ನು
ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಮಕ್ಕಳನ್ನು ಸಬಲೀಕರಣ ಮಾಡುವದೇ ಬೇಟಿ ಬಚಾವೊ,ಬೇಟಿ ಪಡಾವೋ ಯೋಜನೆ ಉದ್ದೇಶವಾಗಿದೆ ಎಂದು ಹೇಳಿದರು.
ಹಿರಿಯ ಮೇಲ್ವಿಚಾರಕಿ ಪವಿತ್ರಾ ಪತ್ತಾರ ಮಾತನಾಡಿ,
ಗರ್ಭಿಣಿಯರು, ಶಿಶುವಿನ ಬೆಳವಣಿಗೆ ಕುಂಠಿತ, ತೂಕ ಕೊರತೆ, ರಕ್ತಹೀನತೆ, ಕಡಿಮೆ ತೂಕದ ಶಿಶು ಸೇರಿದಂತೆ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿರುವವರನ್ನು ಹೊರಕ್ಕೆ ತರಲು ಪೋಷಣ ಅಭಿಯಾನ ಪರಿಣಾಮಕಾರಿಯಾಗಿದೆ ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಸಸಿಗೆ ನೀರುಣಿಸಿ ಮಾತನಾಡಿ,
ಗಂಡು, ಹೆಣ್ಣಿನ ಅನುಪಾತ ಅವಲೋಕಿಸಿ ನಾವು ಎಚ್ಚೆತ್ತುಕೊಳ್ಳಬೇಕಿದೆ. ತನಗೆ ಗಂಡು ಮಗು ಬೇಕು ಎಂಬ ಆಸೆ ಬಿಟ್ಟು, ಮನೆಯಲ್ಲಿ ಹೆಣ್ಣು-ಗಂಡು ಮಕ್ಕಳನ್ನು ಸಮಾನವಾಗಿ ನೋಡುವ ಮನೋಭಾವ ಎಲ್ಲರೂ ಬೆಳೆಸಿಕೊಳ್ಳಬೇಕು. ಹೆಣ್ಣು ಮಗುವಿಗೆ ಉನ್ನತ ಶಿಕ್ಷಣ ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಮೇಲ್ವಿಚಾರಕಿ ಜ್ಯೋತಿ ಕುಲಕರ್ಣಿ ಮಾತನಾಡಿ, ಹೆಣ್ಣು ಮಗುವಿನ ಹುಟ್ಟು ಹಬ್ಬ, ಹೆಣ್ಣು ಮಗುವಿನ ಹೆಸರಿನಲ್ಲಿ ಗಿಡ ನೆಡುವುದು, ಅನ್ನ ಪ್ರಾಶನ, ಸೀಮಂತ ಕಾರ್ಯ ಮಾಡಿ, ಪಾಲಕರಿಗೆ ಈ ಬಗ್ಗೆ ತಿಳುವಳಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆ ಸುಶೀಲಾ ಕೆರೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆಯರಾದ ವಿಜಯಲಕ್ಷ್ಮೀ ಹಂಡಿ, ಸಂಧ್ಯಾ ಜಹಾಗೀರದಾರ ಹಾಗೂ ಸಹಾಯಕಿಯರಾದ ರಾಜಶ್ರೀ ಸಮಗೊಂಡ, ರಾಜಶ್ರೀ ಮಕಣಿ ಸೇರಿದಂತೆ ಅನೇಕ ತಾಯಂದಿರು, ಪಾಲಕರು ಭಾಗವಹಿಸಿದ್ದರು.

