ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗ್ರಾಮ ಪಂಚಾಯತಿ ಪಿಡಿಓ ಹಾಗೂ ಪಂಚಾಯತ ಅಧ್ಯಕ್ಷ ಮಗನ ಜಾತಿನಿಂದನೆ ಮಾಡಿ ಗೂಂಡಾಗಿರಿ ಮಾಡಿರುವ ಅಧಿಕಾರಿ ಮತ್ತು ಅಧ್ಯಕ್ಷೆಯನ್ನು ಅಮಾನತ್ತು ಮಾಡಬೇಕೆಂದು ಒತ್ತಾಯಿಸಿ ಪರಿಶಿಷ್ಟ ಜಾತಿ ಸಂಘಟನೆ ವತಿಯಿಂದ ಅಪರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸೇವಾಲಾಲ ಸೇನೆಯ ಜಿಲ್ಲಾಧ್ಯಕ್ಷ ಸುರೇಶ ಚವ್ಹಾಣ ಮಾತನಾಡಿ, ಮುಳಸಾವಳಗಿ ಗ್ರಾಪಂ ಸದಸ್ಯ
ರಾಜು ಮೋತಿಲಾಲ ರಾಠೋಡ ಇವರಿಗೆ ಮುಳಸಾವಳಗಿ ಪಿಡಿಓ ಗೊಲ್ಲಾಳಪ್ಪಾ ಕನ್ನೊಳ್ಳಿ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷೆಯ ಮಗ ಗುರುರಾಜ ಶಾಂತಪ್ಪ ಅಕ್ಕಳವಾಡಿ ಇವರು ಜಾತಿ ನಿಂದನೆ ಮಾಡಿ ತಾಲೂಕು ಪಂಚಾಯತಿ ಕಾರ್ಯನಿರ್ವಹಕ ಅಧಿಕಾರಿ ಮುಂದೆಯೇ ಹೊಡಿ-ಬಡಿ ಮಾಡಿದ್ದು ಈಗಾಗಲೇ ಅದು ಪ್ರಕರಣ ದಾಖಲಾಗಿದೆ. ಆದ್ದರಿಂದ ಸದರಿ ಜನಪ್ರತಿನಿಧಿಯ ಮೇಲೆ ಹಲ್ಲೆ ಮಾಡಿ ಜಾತಿನಿಂದನೆ ಮಾಡಿರುವಂತಹ ಗೊಲ್ಲಾಳಪ್ಪ ಕನ್ನೊಳ್ಳಿ ಪಿಡಿಓ ಹಾಗೂ ತನ್ನ ಅಧಿಕಾರ ದುರ್ಬಳಕೆ ಮಾಡಿ ತನ್ನ ಮಗನ ಕೈಯಲ್ಲಿ ಅಧಿಕಾರ ನಡೆಸಿರುವಂತಹ ಗ್ರಾಪಂ ಅಧ್ಯಕ್ಷೆಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸೂಕ್ತ ತನಿಖೆಗೆ ಕೈಗೊಂಡು ಆರೋಪಿಗಳಿಗೆ ಬಂಧಿಸದಿದ್ದಲ್ಲಿ ಎಲ್ಲ ಪರಿಶಿಷ್ಟ ಜಾತಿ ಸಂಘಟನೆಗಳನ್ನು ಒಗ್ಗೂಡಿಸಿ ಉಗ್ರ ಹೋರಾಟ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಸುಭಾಸ ಜಾಧವ, ಬಾಳು ರಾಠೋಡ, ಬಾಮಲು ರಾಠೋಡ, ಹಣಮಂತ ರಾಠೋಡ, ರಾಜು ಚವ್ಹಾಣ ಮುಂತಾದವರು ಇದ್ದರು.

