ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಸಮಾಜಕ್ಕೆ ಆರೋಗ್ಯಪೂರ್ಣ ತಾಯಿ , ಮಗುವನ್ನು ನೀಡುವ ನಿಟ್ಟಿನಲ್ಲಿ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳ ಸದುಪಯೋಗ ಪಡೆದುಕೊಂಡು ಆರೋಗ್ಯವಂತರಾಗಬೇಕೆಂದು ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಶಿವಾನಂದ ಬಿರಾದರ ಹೇಳಿದರು.
ಗ್ರಾಮದ ಶ್ರೀ ಬನಶಂಕರಿದೇವಿ ಕಲ್ಯಾಣ ಮಂಟಪದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ತಾಲೂಕು ಆಡಳಿತ, ತಾಲುಕಾ ಪಂಚಾಯತ್, ಶಿಶು ಅಭಿವೃದ್ದಿ ಯೋಜನಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿ ಹಮ್ಮಿಕೊಂಡ “ಪೋಷಣ್ ಮಾಸಾಚರಣೆ” ಕಾರ್ಯಕ್ರಮದ ಉದ್ಘಾಟಣೆ ನೆರವೇರಿಸಿ ಮಾತನಾಡಿದ ಅವರು, ಈ ಹಿಂದೆ ಹೆರಿಗೆ ಸಮಯದಲ್ಲಿ ತಾಯಿ ಅಥವಾ ಮಗು ಸಾವನ್ನಪ್ಪುವ ಪ್ರಕರಣ ಹೆಚ್ಚುತಿದ್ದವು ಈಗ ಮಹಿಳೆ ಗರ್ಭವತಿಯಾದಾಗಿನಿಂದ ಜನಿಸಿದ ಮಗು ಪ್ರೌಢಾವಸ್ತೆ ತಲುಪುವವರೆಗೂ ಸರಕಾರ ಪ್ರತೀ ಹಂತದಲ್ಲಿ ಮೊಟ್ಟೆ, ಹಾಲು ಸೇರಿದಂತೆ ಪೋಷಕಾಂಶಯುಕ್ತ ಆಹಾರ ನೀಡುತ್ತಿದೆ ಅಲ್ಲದೇ ಕಾಲಕಾಲಕ್ಕೆ ಪರೀಕ್ಷೆ ಮಾರ್ಗದರ್ಶನ ನೀಡುತಿದ್ದು ಇದರಿಂದ ಆಹಾರ ಕೊರತೆಯ ಮರಣ ಪ್ರಮಾಣ ಕಡಿಮೆಯಾಗಿದೆ ಎಂದರು.
ಶಿಕ್ಷಣ ಇಲಾಖೆಯ ಸಿಆರ್‌ಸಿ ಶ್ರೀಮತಿ ಗದ್ರಾಕ್ಷಾಯಿಣಿ ಮಂಡಿ ಮಾತನಾಡಿ ಗರ್ಭಿಣಿ ಹಾಗೂ ಮಗುವಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ವಿವರಿಸಿದರು.
ಶಿಶು ಅಭಿವೃದ್ದಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಶ್ರೀಮತಿ ಎಸ್.ಎಸ್ ಚೆನ್ನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಶ್ರೀಮತಿ ಟಿ.ಎಸ್ ತಳ್ಳಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತಯನ್ನು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಮಾಲಾ ಅಶೋಕ ಮೋಟಗಿ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಉಪಾಧ್ಯಕ್ಷ ಶ್ರೀಮತಿ ಪ್ರೇಮಾ ಪರಪ್ಪಾ ಗೋವಿಂದಗೋಳ, ಗ್ರಾ.ಪಂ. ಸದಸ್ಯರಾದ ಪ್ರಕಾಶ ಪಾಟೀಲ, ಕೇಶವ ವಂದಾಲ, ಹಣಮಂತ ಬಜಂತ್ರಿ ಸೇರಿದಂತೆ ಹಲವು ಪ್ರಮುಖರು ಆಗಮಿಸಿದ್ದರು.
ಇದೇ ಸಂಧರ್ಬದಲ್ಲಿ ಹಲವು ಗರ್ಭಿಣಿ ಮಹಿಳೆಯರ ಸೀಮಂತ ಕಾರ್ಯಕ್ರಮ ಅನ್ನ ಪ್ರಾಶನ ಹಾಗೂ ಜನ್ಮದಿನ ಆಚರಣೆ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಎಲ್. ಆರ್. ಕೋರಿಶೆಟ್ಟಿ ಸ್ವಾಗತಿಸಿದರು, ಪ್ರಭಾವತಿ ಸಗರಿ ನಿರೂಪಿಸಿದರು, ಎ.ಎಸ್. ಕರಿಗಾರ ವಂದಿಸಿದರು.

