ಉದಯರಶ್ಮಿ ದಿನಪತ್ರಿಕೆ.
ಕೆಂಭಾವಿ: ಸದ್ಭಕ್ತರು ಸದ್ಗುರುವಿನ ಸನ್ನಿಧಿಯಲ್ಲಿ ಸೇರಿ, ದೇವರ ದರ್ಶನ ಪಡೆದು, ಸಂಸಾರ ಜಂಜಾಟಗಳಿಂದ ಮುಕ್ತಿ ಹೊಂದಲು ಸಾಧ್ಯ ಎಂದು ಅಕ್ಷರ ದಾಸೋಹ ನಿವೃತ್ತ ಸಹಾಯಕ ನಿರ್ದೇಶಕ ಜಿ ಎನ್, ರೊಡಲಬಂಡಿ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಭವರೋಗ ಕಳೆಯಲು ಭಗವಂತನ ನಾಮಸ್ಮರಣೆ ಸಾಕು, ಪುರಾಣ, ಪ್ರವಚನ, ಭಜನೆ, ಕೀರ್ತನೆ, ಸತ್ಸಂಗ, ಶಿವಾನುಭವ, ಸಾಹಿತ್ಯ, ಸಂಗೀತ, ಸತ್ಕಾರ್ಯಗಳಲ್ಲಿ ಭಾಗವಹಿಸುವ ಸದ್ಭಕ್ತರು ಸದಾ ಪುಣ್ಯವಂತರು ಎಂದರು.
ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ, ಪುರಾಣ ಪ್ರವಚನಕಾರ ರಮೇಶ ಶಾಸ್ತ್ರೀ ಯಾಳಗಿ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುರುವಿನ ಸ್ಪರ್ಶ, ಗುರುವಿನ ವಾಣಿ, ಗುರುವಿನ ದರ್ಶನದಿಂದ ಮಾನವ ಜನ್ಮ ಮುಕ್ತಿ ಹೊಂದಲು ಸಾಧ್ಯ ಎಂದವರು, ಮಲಮೂತ್ರದ ಈ ಕಾಯ ಮಣ್ಣಾಗುವ ಮುನ್ನ ಮಹಾದೇವನ ನೆನೆಯಲು ಸದ್ಭಕ್ತರು ಸತ್ಸಂಗದಲ್ಲಿ ಸೇರಬೇಕು, ಕಾಯ ಶುದ್ದಿಗೆ ಕಾಂತೇಶ್ವರನ ನಿತ್ಯವೂ ಭಜಿಸಿ ಮುಕ್ತಿ ಪಡೆಯೋಣ ಎನ್ನುತ್ತಾ, ಮುಂಬರುವ ದಿನಗಳಲ್ಲಿ ಮಾಸಿಕ ಶಿವಾನುಭವ ಗೋಷ್ಠಿಯು ದಶಮಾನೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿರುವವುದು, ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರ ಕಾರ್ಯ ಅಭಿನಂದನೀಯ ಎಂದು ಬಣ್ಣಿಸಿದರು.
ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದವರು ಸದ್ಭಕ್ತರು ಮಾಸಿಕ ಶಿವಾನುಭವ ಗೋಷ್ಠಿಯ ಸದುಪಯೋಗ ಪಡೆದುಕೊಂಡು ಸನ್ಮಾರ್ಗದಲ್ಲಿ ಸಾಗಲು ಆಶಿಸಿದರು.
ಮನೋಜ್ ಶ್ರೀನಿವಾಸ ಪತ್ತಾರ ಯಾಳಗಿ ಯಮನೇಶ ಯಾಳಗಿ ಸೋಮನಾಥ ಯಾಳಗಿ ಇವರಿಂದ ಸಂಗೀತ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದು ಕೇಳುಗರ ಕರ್ಣಗಳಿಗೆ ಆನಂದ ತಂದಿತ್ತು. ಪ್ರಮುಖರಾದ ಸಾಹಿತಿ ನಿಂಗನಗೌಡ ದೇಸಾಯಿ, ವಚನ ಸಾಹಿತಿ, ವೀರಣ್ಣ ಕಲಿಕೇರಿ, ಶರಣಪ್ಪ ನಡಕೂರ, ಸಿದ್ದು ತಳ್ಳೋಳ್ಳಿ, ಅಭಿಷೇಕ್ ಪಾಟೀಲ, ನಿಜಗುಣ ವಿಶ್ವಕರ್ಮ, ಅವ್ವಣ್ಣ ಮಡಿವಾಳಕರ್, ಸೇರಿದಂತೆ ಮಹಿಳೆಯರು ಮಕ್ಕಳು ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಉಪಸ್ಥಿತರಿದ್ದರು.
ಡಾ.ಯಂಕನಗೌಡ ಪಾಟೀಲ ನಿರೂಪಿಸಿ, ವಂದಿಸಿದರು.

