ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆಮ್ ಆದ್ಮಿ ಪಾರ್ಟಿ ಶಾಸಕಾಂಗ ಸಭೆಯಲ್ಲಿ ಸರ್ವಾನುಮತದಿಂದ ದೆಹಲಿಯ ನೂತನ ಮುಖ್ಯಮಂತ್ರಿಗಳಾಗಿ ಶ್ರೀಮತಿ ಆತಿಶಿ ಅವರ ಆಯ್ಕೆಯನ್ನು ಪಕ್ವದ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಸ್ವಾಗತಿಸಿದ್ದಾರೆ.
ದೇಶದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಆಮ್ ಆದ್ಮಿ ಪಕ್ಷದ ಕಾರ್ಯಕರ್ತೆಯಾಗಿ ನಂತರ ಪರ್ಯಾಯ ರಾಜಕಾರಣದ ಪಯಣದಲ್ಲಿ ಹಲವು ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ಆತಿಶಿ ಅವರು ನಿರ್ವಹಿಸಿದ್ದಾರೆ. ವಿಶ್ವವೇ ದೆಹಲಿಯ ಶೈಕ್ಷಣಿಕ ಕ್ರಾಂತಿಯನ್ನು ಬೆರಗುಗಣ್ಣುಗಳಿಂದ ನೋಡುವಂತೆ ಮಾಡಿರುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದ ಆತಿಶಿ, ಭಾರತ ದೇಶದ ಬಡತನವನ್ನು ದೇಶದ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣವನ್ನು ನೀಡುವ ಮೂಲಕ ಮಾತ್ರ ಪರಿಹಾರ ಮಾಡಬಹುದೆಂಬ ಅವರ ಯೋಚನಾ ಲಹರಿ ದೆಹಲಿಯಲ್ಲಿ ಸಂಪೂರ್ಣವಾಗಿ ಸಾರ್ಥಕತೆಯನ್ನು ಸಾಧಿಸಿದ್ದಾರೆ.
ಲಕ್ಷಾಂತರ ಮಕ್ಕಳು ಇಂದು ಶಿಕ್ಷಣದಲ್ಲಿ ಉನ್ನತಿ ಸಾಧಿಸಿ ತಮ್ಮ ಬಡತನವನ್ನು ತೊಲಗಿಸಿಕೊಂಡಿರುವ ಹಿರಿಮೆ ಗರಿಮೆ ಆತಿಶಿ ಅವರಿಗೆ ಸಲ್ಲುತ್ತದೆ.
ದೆಹಲಿ ಸರ್ಕಾರದ 14 ಇಲಾಖೆಗಳನ್ನು ನಿಭಾಯಿಸಿರುವ ಅನುಭವವನ್ನು ಹೊಂದಿರುವ ಆತಿಶಿ ಅವರು ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರುವ ಆತ್ಮವಿಶ್ವಾಸವನ್ನು ಭೋಗೇಶ್ ಸೋಲಾಪುರ್ ವ್ಯಕ್ತಪಡಿಸಿದ್ದಾರೆ.
ಇದೀಗ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಆತಿಶಿ ಅವರಿಗೆ ವಿಜಯಪುರ ಜಿಲ್ಲೆಯ ಸಮಸ್ತ ನಾಗರಿಕರು, ಆಮ್ ಆದ್ಮಿ ಪಕ್ಶದ ಮುಖಂಡರು ಹಾಗೂ ಕಾರ್ಯಕರ್ತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

