ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ತಮ್ಮದೇಯಾದ ಮಹತ್ವ ಹೊಂದಿರುವ ಗ್ರಾಮೀಣ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಬೇಕು. ಅವುಗಳಲ್ಲಿ ನೀತಿಯಿದೆ. ಸತ್ವವಿದೆ. ಬದುಕಿಗೆ ದಾರಿದೀಪವಾಗಬಲ್ಲ ಅಂಶಗಳು ಜಾನಪದ ಹಾಡುಗಳು, ಕಥೆಗಳು ಹೊಂದಿರುವುದರಿಂದ ಅವುಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸುವುದು ಅಗತ್ಯವಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ಚಿಮ್ಮಡ ಓಂ ಪ್ರಭುಲಿಂಗೇಶ್ವರ ಕಿಚಡಿ ಜಾತ್ರೆಯಂಗವಾಗಿ ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕಾ ಘಟಕ ಹಾಗೂ ಓಂ ಪ್ರಭುಲಿಂಗೇಶ್ವರ ಜಾತ್ರಾ ಮಹೋತ್ಸವ ಸಮಿತಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಾನಪದ ಜಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅನ್ನದಾಸೋಹ ಹಾಗೂ ಜ್ಞಾನ ದಾಸೋಹ ಒಟ್ಟಿಗೆ ಸಿಗುವ ಜಾತ್ರೆಯಂದರೆ ಅದು ಚಿಮ್ಮಡ ಕಿಚಡಿ ಜಾತ್ರೆ ಎಂದರು.
ಯುವಕರ ಶಾಸಕ ಸಿದ್ದು ಸವದಿ ಮಾತನಾಡಿ, ಗ್ರಾಮದ ಹಿರಿಯರ ಒಗ್ಗಟ್ಟಿನ ಶಕ್ತಿ ಹಾಗೂ ಇಲ್ಲಿನ ಯುವಕರ ಅವಿರತ ಪರೀಶ್ರಮದಿಂದ ಜಾತ್ರೆಯು ಪ್ರತೀವರ್ಷ ಯಶಸ್ವಿಯಾಗಿ ಜರುಗುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಉತ್ತರ ಕರ್ನಾಟಕದಲ್ಲಿಯೇ ವಿಶಿಷ್ಟ ಜಾತ್ರೆಯೆಂಬ ಹೆಗ್ಗಳಿಕೆ ಹೊಂದಿರುವ ಚಿಮ್ಮಡ ಕಿಚಡಿ ಜಾತ್ರೆ ಲಕ್ಷಾಂತರ ಜನರಿಗೆ ಏಕಕಾಲಕ್ಕೆ ದಾಸೋಹ ಹಮ್ಮಿಕೊಳ್ಳುವ ಮೂಲಕ ಸಮಾನತೆ ಒಡಮೂಡಿಸುತ್ತದೆ ಎಂದರು
ಚಿಮ್ಮಡ ವಿರಕ್ತಮಠದ ಶ್ರೀಪ್ರಭು ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿ, ಜಾನಪದ ಕಲಾವಿದರಿಗೆ ಪ್ರೋತ್ಸಾಹ ಅಗತ್ಯವೆಂದರು.
ಹಂದಿಗುಂದ ಆಡಿ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರಾಮದುರ್ಗ ಶಿವಮೂರ್ತೇಶ್ವರ ಮಠದ ಶಾಂತವೀರ ಮಹಾಸ್ವಾಮಿಗಳು, ಬೆಂಡವಾಡ ರೆವಣಶಿದ್ದೇಶ್ವರ ಮಠದ ಗುರುಸಿದ್ದೇಶ್ವರ ಮಹಾಸ್ವಾಮಿಗಳು, ಸುಣಧೋಳಿ ಜಡಿ ಶಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು, ಹತ್ತರಕಿ ಕಮರೀಮಠದ ಗುರುಸಿದ್ದೇಶ್ವರ ಮಹಾಸ್ವಾಮಿಗಳು, ತೇರದಾಳ ಹಿರೇಮಠದ ಶ್ರೀ ಗಂಗಾಧರ ದೇವರು, ಸ್ಥಳಿಯ ರಘುನಾಥ ಪ್ರೀಯ ಸಾಧು ಮಠದ ಶ್ರೀ ಜನಾರ್ಧನ ಮಹಾರಾಜರು, ಚಿಕ್ಕೋಡಿ ಸಂಪಾದನ ಮಠದ ಸಂಪಾದನ ಶ್ರೀ, ರಾಮದುರ್ಗ ಶಿವಮೂರ್ತೆಶ್ವರ ಮಠದ ಶಾಂತವೀರ ಶ್ರೀ, ಜಮಖಂಡಿ ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯರು, ಮಮ್ಮಟಗುಡ್ಡದ ಶ್ರೀ ಬನಶಿದ್ದ ಮಹಾರಾಜರು, ಸಾರವಾಡ ಶಾಖಾ ಮಠದ ಶ್ರೀ ಕೃಷ್ಣಯ್ಯ ಸ್ವಾಮಿಗಳು ಸೇರಿದಂತೆ ಹಲವಾರು ಮಠಗಳ ಶ್ರೀಗಳು ಸನ್ನಿಧಿಯಲ್ಲಿದ್ದರು.
ಶ್ರೀಮತಿ ಶ್ರುತಿ ಬರಗಲ್ಲ ಪ್ರಾರ್ಥಿಸಿದರು. ಪ್ರಕಾಶ ಬಡಿಗೇರ ಸ್ವಾಗತಿಸಿದರು. ಪ್ರಕಾಶ ಪೂಜಾರಿ ನಿರೂಪಿಸಿದರು. ಮಹಾಂತೇಶ ಬಡಿಗೇರ ವಂದಿಸಿದರು.

