ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಬಡ ಮಕ್ಕಳಿಗೆ, ಬಾಣಂತಿಯರಿಗೆ ಪೌಷ್ಟಿಕ ಅಹಾರ ದೊರಬೇಕು ಎನ್ನುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸಿವೆ. ಸಾರ್ವಜನಿಕರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.
ಪಟ್ಟಣದ ಖಾಸಗಿ ಹೋಟಲ್ ಒಂದರಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಇಲಾಖೆ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪೌಷ್ಟಿಕ ದಿನಾಚರಣೆ ಮತ್ತು ಬೇಟಿ ಪಡಾವೋ ಬೇಟಿ ಬಚಾವೋ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಜನೆಗಳ ಸದುಪಯೋಗ ಪಡೆದುಕೊಳ್ಳದ ಕಾರಣ ಹಲವು ಮಕ್ಕಳಲ್ಲಿ, ಬಾಣಂತಿಯರಲ್ಲಿ ಪೌಷ್ಟಿಕಾಂಶದ ಕೊರತೆ ಕಾಣುತ್ತಿದ್ದೇವೆ. ಸರ್ಕಾರಗಳು ಜಾರಿಗೆ ತಂದಂಥ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತರ ಮೇಲಿದೆ. ಫಲಾನುಭವಿಗಳಿಗೆ ತಲುಪಬೇಕಾದ ಪೌಷ್ಟಿಕಾಂಶಗಳನ್ನು ತಲುಪಿಸುವ ಕಾರ್ಯವನ್ನು ಚಾಚೂ ತಪ್ಪದೇ ಪಾಲಿಸುವಂತೆ ತಿಳಿಸಿದರು.
ತಾಲೂಕು ಆರೋಗ್ಯ ಅಧಿಕಾರಿ ಸತೀಶ ತಿವಾರಿ ಮಾತನಾಡಿ, ಹಲವು ಗರ್ಭಿಣಿಯರಲ್ಲಿ ಪೌಷ್ಟಿಕಾಂಶದ ಕೊರತೆ ಇರುವದನ್ನು ಖುದ್ದು ನಾನು ಗಮನಿಸಿದ್ದೇನೆ. ಗರ್ಭಿಣಿಯರ ಪ್ರತೀ ತಿಂಗಳ ತೂಕ ಹೆಚ್ಚುತ್ತಿರಬೇಕು. ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಪೌಷ್ಟಿಕ ಅಹಾರವನ್ನು ತಲುಪಿಸುವಲ್ಲಿ ಅಂಗನವಾಡಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿ, ಆರೋಗ್ಯವಂತ ಮಗುವಿನ ಬೆಳವಣಿಗೆಗೆ ಪೌಷ್ಟಿಕಾಂಶದ ಅವಶ್ಯಕತೆ ತುಂಬಾ ಇದೆ. ಮಕ್ಕಳು ಆರೋಗ್ಯವಂತರಿದ್ದಲ್ಲಿ ಸಧೃಢ ಸಮಾಜ, ಬಲಿಷ್ಟ ಭಾರತ ನಿರ್ಮಿಸಲು ಸಾಧ್ಯ ಎಂದರು.
ಕಾರ್ಯಕ್ರಮವು ವಿವಿಧ ಬಗೆಯ ಪೌಷ್ಟಿಕಾಂಶವುಳ್ಳ ಖಾದ್ಯ, ತರಕಾರಿಗಳು, ಧಾನ್ಯಗಳಿಂದ ಅಲಂಕೃತಗೊಂಡರೆ, ಶ್ರೀಮಂತ, ಅನ್ನಪ್ರಾಶನ, ಹುಟ್ಟು ಹಬ್ಬ, ಸುಕನ್ಯ ಸಂಮೃದ್ಧಿ ಪಾಸ್‌ಬುಕ್ ವಿತರಣೆ ಹೀಗೆ ವಿವಿಧ ವಿಶೇಷತೆಯಿಂದ ಕೂಡಿತ್ತು.
ಅಪರ ಸರ್ಕಾರಿ ವಕೀಲ ಎಚ್.ಎಲ್.ಸರೂರ, ಕ್ಷೇತ್ರ ಶಿಕ್ಷಣಾಧಿಕಾರಿ ಸಾವಳಗಿ, ಕಿರಿಯ ಶ್ರೇಣಿ ಸಹಾಯಕ ಸರ್ಕಾರಿ ಅಭಿಯೋಜಕ ಬಸವರಾಜ ಆಹೇರಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಸಿ.ದೇಸಾಯಿ, ಹಿರಿಯ ಮೇಲ್ವಿಚಾರಕಿಯರು, ಸಿಡಿಪಿಓ ಕಚೇರಿಯ ಸಿಬ್ಬಂದಿವರ್ಗ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗಿಯಾಗಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಮೂರ್ತಿ ಕುಂಬಾರ ಪ್ರಸ್ತಾವಿಕವಾಗಿ ಮಾತನಾಡಿದರು. ಸಿಡಿಪಿಓ ಕಚೇರಿಯ ಮೇಲ್ವಿಚಾರಕಿ ಕಲಾವತಿ ಬೆಳ್ಳುಂಡಗಿ ಕಾರ್ಯಕ್ರಮ ನಿರ್ವಹಿಸಿದರು.

