ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಗು ಸೇರಿದಂತೆ ವೈಯಕ್ತಿಕ ಸದೃಡ ಶರೀರ ಹಾಗೂ ಆರೋಗ್ಯಕ್ಕಾಗಿ ತಾಯಂದಿರು ಪ್ರೋಟಿನ್, ವಿಟಾಮಿನ್ ಹಾಗೂ ಪೌಷ್ಟಿಕಾಂಶಗಳ ಸೇವನೆಗೆ ಹೆಚ್ಚು ಆದ್ಯತೆ ನೀಡಬೇಕೆಂದು ಸಿಂದಗಿ ತಾಲ್ಲೂಕು ಸಿಡಿಪಿಓ ಶಂಭುಲಿಂಗ ಹಿರೇಮಠ ಹೇಳಿದರು.
ತಾಲ್ಲೂಕಿನ ಕೊಂಡಗೂಳಿ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ ಜರುಗಿದ ರಾಷ್ಟ್ರೀಯ ಪೋಷಣಾ ಅಭಿಯಾನ ಮಾಸಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಗರ್ಭಿಣಿಯರು ಹಾಗೂ ಬಾಣಂತಿಯರು ಇಲಾಖೆಯಿಂದ ದೊರೆಯುವಂತ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ವೈಯಕ್ತಿಕ ಆರೋಗ್ಯದ ಜೊತೆ ಮಗುವಿನ ಆರೋಗ್ಯ ಹಾಗೂ ಸ್ವಚ್ಚತೆಗೆ ಹೆಚ್ಚು ಮಹತ್ವ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಅನ್ನಪ್ರಾಶನ, ಮಗಳನ್ನು ರಕ್ಷಿಸಿ, ಮಗಳನ್ನು ಓದಿಸಿ, ಅಪೌಷ್ಟಿಕತೆ ನಿವಾರಣೆ, ಹೆಣ್ಣುಮಗುವಿನ ಜನ್ಮದಿನಾಚರಣೆ, ತಾಯಿ ಹೆಸರಲ್ಲಿ ಮರ ನೆಡುವದು, ಸುಕನ್ಯಾ ಸಮೃದ್ಧಿ ಯೋಜನೆಯಡಿಯ ಪಾಸ್‌ಬುಕ್ ವಿತರಣೆ ಜರುಗಿದವು.
ವಿಜಯಪುರ ಉಜ್ವಲ ಸಂಸ್ಥೆಯ ಸಾಗರ ಘಾಟಗೆ ಶಾಲಾ ಪೂರ್ವಶಿಕ್ಷಣ ಕುರಿತು ಮಾತನಾಡಿದರು.
ಗ್ರಾಮದ ವೀರಘಂಟಯ್ಯ ಗದ್ದಿಗೆಮಠ ಸಾನಿಧ್ಯ ವಹಿಸಿದ್ದರು.
ಗ್ರಾಮಪಂಚಾಯಿತಿ ಅಧ್ಯಕ್ಷೆ ದಾವಲಬಿ ಸೋಲಾಪೂರ, ಉಪಾಧ್ಯಕ್ಷೆ ಶಿವಲೀಲಾ ಕುರಮಲ್ಲಪ್ಪಗೋಳ, ಎಸಿಡಿಪಿಓ ಎಸ್.ಎನ್.ಕೋರವಾರ ಆರೋಗ್ಯ ಇಲಾಖೆಯ ಎಂ.ಡಿ.ಮೋತಿಭಾಯಿ, ಮೇಲ್ವಿಚಾರಕಿಯರಾದ ಎ.ಎಮ್.ಸಜ್ಜನ, ಪೂರ್ಣಿಮಾ ಮಹಾಜನಶೆಟ್ಟಿ, ಎಸ್.ಜಿ.ಪಾಟೀಲ, ಅನ್ನಪೂರ್ಣ ಹಚಡದ, ಶಾಂತಾ ನಾಯಕ, ಅಂಬವ್ವ ಕುಂಬಾರ ಸೇರಿದಂತೆ ಗ್ರಾಮದ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಹಾಯಕಿಯರು, ಶಿಕ್ಷಕರು ಹಾಗೂ ತಾಯಂದಿರು ಹಾಜರಿದ್ದರು.

