ಘಟನೆಗೆ ಗ್ರಾಮದ ಮಹಿಳೆಯರ ಖಂಡನೆ | ದೌರ್ಜನ್ಯಕ್ಕೀಡಾದ ಮಹಿಳೆಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ (ದೇವರಹಿಪ್ಪರಗಿ): ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯ ಪತಿ ಕಳೆದ ಎರಡು ವರ್ಷಗಳಿಂದ ಪಂಚಾಯಿತಿ ಎಲ್ಲ ವ್ಯವಹಾರಗಳಲ್ಲಿ ದಬ್ಬಾಳಿಕೆ ಮಾಡುವುದರ ಜೊತೆಗೆ ಪಂಚಾಯಿತಿ ಮಹಿಳಾ ಸಿಬ್ಬಂದಿಯನ್ನು ಗ್ರಾಮಸ್ಥರ ಮುಂದೆ ಚಪ್ಪಲಿಯಿಂದ ಹೊಡೆದು ಗಾಯಗೊಳಿಸುವುದರ ಮೂಲಕ ದೌರ್ಜನ್ಯವೆಸಗಿರುವ ಘಟನೆ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಕೆರೂಟಗಿ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಈ ಘಟನೆ ಜರುಗಿದ್ದು ಘಟನೆಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯ ಪತಿಯ ಹಸ್ತಕ್ಷೇಪವೇ ಪ್ರಮುಖ ಕಾರಣವೆಂದು ತಿಳಿದುಬಂದಿದೆ.
ಗ್ರಾಮದ ಪಂಚಾಯಿತಿ ಚುನಾವಣೆಯ ನಂತರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳೆರಡರಲ್ಲಿ ಮಹಿಳೆಯರೇ ಇದ್ದು, ಆದರೆ ಕಾರ್ಯಭಾರವೆಲ್ಲಾ ಅವರ ಪತಿಯಂದಿರದೇ ಆಗಿದೆ. ಕಳೆದ ಎರಡು ದಿನಗಳ ಹಿಂದೆ ಪಂಚಾಯಿತಿ ಅಡಿಟ್ ಕಾರ್ಯಗಳಿಗಾಗಿ ಮಹಿಳಾ ಸಿಬ್ಬಂದಿಯೊಂದಿಗೆ ಅಧಿಕಾರಿಗಳು ಬಂದಿದ್ದು ಕೆಲವು ವಿಚಾರಗಳ ಮಾಹಿತಿಗಾಗಿ ಸ್ಥಳೀಯ ಮಹಿಳಾ ಸಿಬ್ಬಂದಿಯೊಂದಿಗೆ ಚರ್ಚಿಸಲು ಆರಂಭಿಸುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಉಪಾಧ್ಯಕ್ಷೆಯ ಪತಿ ಸಂದಿಮನಿ ಆಡಿಟ್ ಹಾಗೂ ಪಿಡಿಓ ಅವರನ್ನು ಮನಬಂದಂತೆ ಬೈಯ್ದು ಜಾಗ ಬಿಟ್ಟು ತೆರಳುವಂತೆ ಮಾಡಿದ್ದಾನೆ.
ಈ ಕುರಿತು ಪ್ರಶ್ನಿಸಿದ ದ್ರೌಪದಿ ಹಿರೇಮಠ ಎಂಬ ಮಹಿಳೆಗೆ ದಬಾಯಿಸಿ ನಂತರ ಮನೆಗೆ ತೆರಳಿ ಪತ್ನಿಯ ಮೂಲಕ ಚಪ್ಪಲಿಯಿಂದ ಎಲ್ಲ ಗ್ರಾಮಸ್ಥರ ಎದುರಿಗೆ ಹೊಡೆದು ಬೆದರಿಕೆ ಹಾಕಿದ್ದಾನೆ. ಈ ಘಟನೆಯ ಕುರಿತು ದ್ರೌಪದಿ ಹಿರೇಮಠ ಕಲಕೇರಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ದೂರು ಸ್ವೀಕರಿಸದ ಪಿಎಸ್‌ಐ ಈ ಮಹಿಳೆಗೇ ಪುಕ್ಕಟೆ ಸಲಹೆ ನೀಡಿ ಮರಳಿ ಕಳಿಸಿದ್ದಾರೆ.
ನಂತರ ಮಹಿಳೆ ಮಹಿಳಾ ಸಹಾಯವಾಣಿಗೆ ಕರೆ ಮಾಡಿ ಸಹಾಯ ಕೋರಿದ್ದಾಳೆ. ಘಟನೆ ಹಾಗೂ ಮಹಿಳೆಯ ದೂರು ತಿಳಿದು ಸಹಾಯವಾಣಿ ಪೊಲೀಸ್‌ರಿಗೆ ಕರೆ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಪೊಲೀಸ್‌ರಿಗೆ ಹಾಗೂ ಮಹಿಳಾ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ ವಿಷಯ ತಿಳಿದ ಉಪಾಧ್ಯಕ್ಷೆಯ ಪತಿ ದ್ರೌಪದಿ ಮನೆಗೆ ತೆರಳಿ ಮನಬಂದಂತೆ ಹೊಡೆದು ದೌರ್ಜನ್ಯವೆಸಗಿ ಯಾರು ಏನು ಮಾಡುತ್ತಾರೆ ನೋಡೋಣ ಎಂದು ಸವಾಲು ಹಾಕಿದ್ದಾನೆ.
ಸಂದಿಮನಿಯಿಂದ ದೌರ್ಜನ್ಯಕ್ಕೊಳಗಾದ ದ್ರೌಪದಿ ಆಸ್ಪತ್ರೆಗೆ ದಾಖಲಾಗಿ ಈಗ ದೂರು ಸಲ್ಲಿಸಿದ್ದು, ಗ್ರಾಮದ ಶಾರದಾ ಕೊಂಬಿನ ಮಲಕವ್ವ ಕೊಂಬಿನ, ಮುದುಕವ್ವ ಕರೆಪ್ಪಗೋಳ ಶಾಂತಾ ಕುದರಗೊಂಡ, ಶಂಕ್ರಮ್ಮ ಹಿರೇಮಠ ಸೇರಿದಂತೆ ಗ್ರಾಮದ ಮಹಿಳೆಯರು ಘಟನೆಯನ್ನು ಖಂಡಿಸಿ ಮಹಿಳೆಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.

