ಶ್ರೀ ಸಿದ್ದೇಶ್ವರ ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಗ್ಗೋಡದ ಶ್ರೀ ರಾಮನಗೌಡ ಬಾ.ಪಾಟೀಲ (ಯತ್ನಾಳ) ಗೋರಕ್ಷಾ ಕೇಂದ್ರದಲ್ಲಿ 10 ಎಕರೆ ಪ್ರದೇಶದಲ್ಲಿ ರೂ.25 ಕೋಟಿ ವೆಚ್ಚದಲ್ಲಿ ಶ್ರೀ ಸಿದ್ದೇಶ್ವರ ಜಾತ್ರೆಗೆ ಆಧಾರಿತ ಮತ್ತು ಕಲ್ಯಾಣ ಕ್ರಾಂತಿಗೆ ಕಾರಣರಾದ 770 ಶರಣರನ್ನೊಳಗೊಂಡ, ಶರಣ ಗ್ರಾಮ ಶಿಲ್ಪ ಉದ್ಯಾನವನ ನಿರ್ಮಾಣ ಮಾಡುವ ಯೋಜನೆಯಿದೆ ಎಂದು ಶ್ರೀ ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದರು.
ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿರುವ ಡಾ.ಫ.ಗು.ಹಳಕಟ್ಟಿ ಸಭಾಭವನದಲ್ಲಿ ನಡೆದ 2023-24ನೇ ಸಾಲಿನ ಶ್ರೀ ಸಿದ್ದೇಶ್ವರ ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೋರಕ್ಷಾ ಕೇಂದ್ರದಲ್ಲಿ ಮಾತೋಶ್ರೀ ಬಂಗಾರಮ್ಮ ಬಸಪ್ಪ ಸಜ್ಜನ ಕಲ್ಯಾಣ ಮಂಟಪ ಹಾಗೂ ಗೋ ಆಧಾರಿತ ಕೃಷಿ ತರಬೇತಿ ಕೇಂದ್ರದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟಿಸಲಾಗುವುದು. ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘದ ಕಟ್ಟಡ ಕಾಮಗಾರಿ ಕೂಡ ಪೂರ್ಣಗೊಂಡಿದೆ. ರೈತರ ತರಬೇತಿ ಕೇಂದ್ರ ಮತ್ತು ವಸತಿ ನಿಲಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ವಿಜಯಪುರ ನಗರದಲ್ಲಿ ಶ್ರೀ ಶಿವಾನುಭವ ಕಟ್ಟಡದ ನಿರ್ಮಾಣ ಕಾರ್ಯ ಮುಕ್ತಾಯದ ಹಂತದಲ್ಲಿದ್ದು, ಆದಷ್ಟು ಬೇಗ ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು ಎಂದರು.
ಶತಮಾನ ಕಂಡ ಶ್ರೀ ಸಿದ್ದೇಶ್ವರ ಸಂಸ್ಥೆಯಿಂದ ಧಾರ್ಮಿಕ, ಸಾಮಾಜಿಕ ಕಾರ್ಯಗಳೊಂದಿಗೆ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ತನ್ನದೆಯಾದ ಮಹತ್ತರ ಕಾರ್ಯ ಮಾಡಲಾಗುತ್ತಿದೆ. ಕೌಲಗಿ ಹಾಗೂ ವಿಜಯಪುರ ನಗರದಲ್ಲಿ ಶಾಲಾ-ಕಾಲೇಜುಗಳ ಮೂಲಕ ಮಕ್ಕಳಿಗೆ ಜ್ಞಾನಾರ್ಜನೆ ನೀಡುತ್ತಿದೆ. ಎಸ್.ಸಿ.ಉಪ್ಪಿನ ಡಿಗ್ರಿ ಕಾಲೇಜಿನಲ್ಲಿ ಕಾನೂನು ಮಹಾವಿದ್ಯಾಲಯ ಕೂಡ ಆರಂಭಿಸಲಾಗುವುದು. ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿ ವರ್ಷ ಮಕ್ಕಳ ಸಂಖ್ಯೆ ಏರಿಕೆ ಆಗುತ್ತಿದ್ದು, ಅದಕ್ಕೆ ಅವಶ್ಯಕವಾದ ಶಾಲಾ ಕೊಠಡಿಗಳ ನಿರ್ಮಾಣ, ಬಸ್ ಗಳ ಖರೀದಿ ಮಾಡಲಾಗಿದೆ. ಸಂಗನಬಸವ ಶಿಶುನಿಕೇತನ ಶಾಲೆ ವಿದ್ಯಾರ್ಥಿನಿ ದಿಯಾ ಕೋಟಿ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಮೊದಲ ರ್ಯಾಂಕ್ ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ ಎಂದರು.
ಗೋರಕ್ಷಾ ಕೇಂದ್ರದಲ್ಲಿ ವಿಭೂತಿ, ಬಿಳಿ ದಂತಮಂಜನ, ಕೆಂಪು ದಂತಮಂಜನ, ಕಪ್ಪು ದಂತ ಮಂಜನ, ಚರ್ಮ ರೋಗ ನಿವಾರಣ ಮಲಾಮ, ಪಂಚಗವ್ಯ ಸಾಬೂನು, ಪಾತ್ರೆ ತೊಳೆಯುವ ಸಾಬೂನು, ಪಂಚಗವ್ಯ ಗೃತ್, ಕುಂಕುಮ, ಮಜ್ಜಿಗೆ, ತುಪ್ಪ, ಎರೆಹುಳು ಗೊಬ್ಬರ, ಕುಳ್ಳ ತಯಾರಿಸಲಾಗುತ್ತಿದೆ. ಇದರಿಂದ ಉತ್ತಮ ಆದಾಯ ಬರುತ್ತಿದೆ. ಅದನ್ನು ಗೋಶಾಲೆ ಜಮೀನು ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷರಾದ ಸಂಗನಬಸಪ್ಪ ಸಜ್ಜನ, ಚೇರಮನ್ ಬಸಯ್ಯ ಹಿರೇಮಠ, ಗೌರ ಕಾರ್ಯದರ್ಶಿಗಳಾದ ಸದಾನಂದ ದೇಸಾಯಿ, ಬಸವರಾಜ ಸುಗೂರ, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಸಜ್ಜನ, ಕೋಶಾಧ್ಯಕ್ಷ ಶಿವಾನಂದ ನೀಲಾ, ನಿರ್ದೇಶಕರಾದ ನಿಂಗೊಂಡಪ್ಪ ಗೋಲಾಯಿ, ಮಡಿವಾಳಪ್ಪ ಕರಡಿ, ವಿಜಯಕುಮಾರ ಡೋಣಿ, ಸಂಗನಗೌಡ ನಾಡಗೌಡ, ಸುಧೀರ ಚಿಂಚಲಿ, ಸದಾಶಿವ ಗುಡ್ಡೋಡಗಿ, ಚಂದ್ರಪ್ಪ ಹುಂಡೇಕಾರ, ನಾಗಪ್ಪ ಗುಗ್ಗರಿ, ಸಾಯಿಬಣ್ಣ ಭೋವಿ, ಮಲಕಪ್ಪ ಗಾಣಿಗೇರ, ರಮೇಶ ಹಳ್ಳದ, ರಾಮನಗೌಡ ಪಾಟೀಲ ಯತ್ನಾಳ, ಮಲ್ಲಿಕಾರ್ಜುನ ಹಕ್ಕಾಪಕ್ಕಿ ಸೇರಿದಂತೆ ಸರ್ವ ಸದಸ್ಯರು ಇದ್ದರು.
ಜೆ.ಎಸ್.ಎಸ್ ಆಸ್ಪತ್ರೆಗೆ ಜನರಿಂದ ಪ್ರಶಂಸೆ
“ಬಡವರಿಗೆ ದೊಡ್ಡ ತಲೆ ನೋವಾದ ವೈದ್ಯಕೀಯ ಸೇವೆಯನ್ನು ಕಡಿಮೆ ದರದಲ್ಲಿ ಮತ್ತು ಗುಣಮಟ್ಟದ ಸೇವೆ ನೀಡಲು ಸಿದ್ದೇಶ್ವರ ಸಂಸ್ಥೆ ಮತ್ತು ಸಿದ್ದಸಿರಿ ಸೌಹಾರ್ದ ಸಹಕಾರಿ ಜಂಟಿಯಾಗಿ ಲೋಕಕಲ್ಯಾಣ ಟ್ರಸ್ಟ್ ಮೂಲಕ ಜೆ.ಎಸ್.ಎಸ್ ಆಸ್ಪತ್ರೆ ಆರಂಭಿಸಿ ನುರಿತ ವೈದ್ಯರಿಂದ ಒಳ್ಳೆಯ ಸೇವೆ ನೀಡುತ್ತಿದ್ದು, ಜನರಿಂದ ಪ್ರಶಂಸೆಗೆ ಪಾತ್ರವಾಗಿದೆ. 250 ಹಾಸಿಗೆಯ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ಈಗಾಗಲೇ ಭೂಮಿಪೂಜೆ ನೆರವೇರಿಸಲಾಗಿದ್ದು, ಆದಷ್ಟು ಬೇಗ ಸೇವೆಯನ್ನು ಕಲ್ಪಿಸಲಾಗುವುದು.”
– ಬಸನಗೌಡ ಪಾಟೀಲ ಯತ್ನಾಳ
ಶಾಸಕರು ಹಾಗೂ ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷರು

