ಕ್ರೀಡಾಪಟುಗಳ ಅಮೋಘ ಆಟೋಟಗಳ ಪ್ರದರ್ಶನ | ೨೯ ಸ್ಪರ್ಧೆಗಳಲ್ಲಿ ವೀರೋಚಿತ ಗೆಲುವು | ಮಾಳಪ್ಪಗೆ ಟ್ರಾಕ್ ಆ್ಯಂಡ್ ಫೀಲ್ಡ್ ಚಾಂಪಿಯನ್ ಪಟ್ಟ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಪ್ರಸಕ್ತ ೨೦೨೪-೨೫ ನೇ ಸಾಲಿನ ನಿಡಗುಂದಿ “ಎ” ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಆಲಮಟ್ಟಿ ಎಂ.ಎಚ್.ಎಂ ಪ್ರೌಢಶಾಲೆಯ ಕ್ರೀಡಾಪಟುಗಳು ಹಲವಾರು ಸ್ಪರ್ಧೆಗಳಲ್ಲಿ ವೀರೋಚಿತ ಅಮೋಘ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿ ಪದಕಗಳ ಸರಮಾಲೆ ಬಾಚಿಕೊಂಡು ಕ್ರೀಡಾಪ್ರೇಮಿಗಳ ಗಮನ ಸೆಳೆದಿದ್ದಾರೆ.
ನಿಡಗುಂದಿ ಬನಶಂಕರಿ ಪಬ್ಲಿಕ್ ಸ್ಕೂಲ್ ಮತ್ತು ಪಿಯುಸಿ ಕಾಲೇಜು ಆಶ್ರಯದಲ್ಲಿ ಜರುಗಿದ ಈ ಕ್ರೀಡಾಕೂಟದಲ್ಲಿ ಇಲ್ಲಿನ ಎಂ.ಎಚ್.ಎಂ.ಪ್ರೌಢಶಾಲೆಯ ಮಕ್ಕಳು ಬರೋಬ್ಬರಿ ೨೯ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿ ಮಿಂಚಿದ್ದಾರೆ. ಪರಿಣಾಮ ಎಂ.ಎಚ್.ಎಂ. ಪ್ರೌಢಶಾಲೆಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಲಭಿಸಿದೆ. ಜೊತೆಗೆ ಈ ಶಾಲೆಯ ಮಾಳಪ್ಪ ಇಲ್ಯಾಳ ೧೦೦ ಮೀ, ೪೦೦ ಮೀ ಹಾಗೂ ಉದ್ದ ಜಿಗಿತದ ಸ್ಪರ್ಧೆಗಳಲ್ಲಿ ಜಯ ಸಾಧಿಸಿ ಸಮಗ್ರ ವೀರಾಗ್ರಣಿ ಸ್ಪಧಾ೯ಳು ಪ್ರಶಸ್ತಿ ಪಡೆದು ಮಿನುಗಿದ್ದಾನೆ.
ಎಂ.ಎಚ್.ಎಂ.ಶಾಲಾ ಕ್ರೀಡಾಪಟುಗಳು ಬಾಲಕ, ಬಾಲಕಿಯರ ವಿಭಾಗದ ವಿವಿಧ೧೬ ಸ್ಪರ್ಧೆಗಳಲ್ಲಿ ಪ್ರಥಮ, ೮ ರಲ್ಲಿ ದ್ವೀತಿಯ ೫ ರಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಒಟ್ಟು ೨೯ ಸ್ಥಾನಗಳಲ್ಲಿ ಜಯಭೇರಿ ಹೊಡೆದು ಕೂಟದಲ್ಲಿ ತಮ್ಮ ಪಾರುಪಥ್ಯ ಮೆರೆದಿದ್ದಾರೆ.
ಗುಂಪು ಆಟಗಳ ಹಲವು ಫೈನಲ್ ಪಂದ್ಯದಲ್ಲಿಯೂ ಅತ್ಯುತ್ತಮ ಆಟಗಳನ್ನಾಡಿ ಜಯದ ಮಾಲೆ ಧರಿಸಿದ್ದಾರೆ. ಬಾಲಕರ ವಿಭಾಗದ ವ್ಹಾಲಿಬಾಲ್ ಪ್ರಥಮ,ಕಬಡ್ಡಿ ಪ್ರಥಮ,ಖೋ-ಖೋ ದ್ವೀತಿಯ ಹಾಗೂ ಬಾಲಕೀಯರ ವಿಭಾಗದ ಖೋ-ಖೋ ಪ್ರಥಮ. ವ್ಹಾಲಿಬಾಲ್ ದ್ವೀತಿಯ ಸ್ಥಾನ ಗಿಟ್ಟಿಸಿಕೊಂಡು
ಗೆಲುವಿನ ನಗೆಯೊಂದಿಗೆ ಸಂಭ್ರಮ ಹಂಚಿಕೊAಡಿದ್ದಾರೆ.
ಬಾಲಕಿಯರ ತಂಡದ ನಾಯಕಿ ಸೌಜನ್ಯ ವಡ್ಡರ,ಬಾಲಕರ ವಿಭಾಗದ ಕಬಡ್ಡಿ ತಂಡದ ನಾಯಕ ಮಾಳಪ್ಪ ಇಲ್ಯಾಳ,ಹಾಗು ವ್ಹಾಲಿಬಾಲ್ ತಂಡದ ನಾಯಕ ಶಮೀರ ಮುಜಾವರ ಇವರ ಮುಂದಾಳತ್ವದಲ್ಲಿ ಕ್ರೀಡಾಪಟುಗಳು ಅಮೋಘ ಆಟದ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದರು.
ಬಾಲಕಿಯರ ವಿಭಾಗದ ೪೦೦ ಮೀ.ಓಟದಲ್ಲಿ ಸುಷ್ಮಿತಾ ಭಗವತಿ ಪ್ರಥಮ ,ಸೌಜ್ಯ ವಡ್ಡರ ದ್ವಿತೀಯ, ೨೦೦ ಮೀ.ಓಟದಲ್ಲಿ ಸುಶ್ಮೀತಾ ಭಗವತಿ ದ್ವಿತೀಯ, ೮೦೦ ಮೀ.ಓಟ ಹಾಗೂ ೩೦೦೦ ಮೀ.ಓಟದಲ್ಲಿ ರಾಜೇಶ್ವರಿ ವಾಲಿಕಾರ ಪ್ರಥಮ, ೩೦೦೦ ಮೀ, ನಡಿಗೆಯಲ್ಲಿ ಪರ್ವಿನ ನದಾಫ್ ಪ್ರಥಮ ಹಾಗೂ ಎತ್ತರ ಜಿಗಿತ ದ್ವಿತೀಯ, ೧೫೦೦ ಮೀ, ಓಟದಲ್ಲಿ
ವೈಶಾಲಿ ತಳವಾರ ಪ್ರಥಮ,ಯಲ್ಲಮ್ಮ ವಾಲಿಕಾರ ದ್ವಿತೀಯ,೪x೧೦೦ ಮೀ, ರಿಲೇ ಸ್ಪರ್ಧೆಯಲ್ಲಿ ಸುಷ್ಮಿತಾ,ಸೌಜನ್ಯ,ಐಶ್ವರ್ಯ, ಪ್ರಿಯಾಂಕ ದ್ವಿತೀಯ,ಉದ್ದ ಜಿಗಿತದಲ್ಲಿ ಪ್ರಿಯಾಂಕಾ ಪಾಟೀಲ ಪ್ರಥಮ ಸ್ಥಾನ ಗಳಿಸಿದ್ದಾರೆ.ಜಯಗಳ ಹೆಚ್ಚು ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಕ್ರೀಡಾಕೂಟದಲ್ಲಿ ಬಾಲೆಯರೇ ಮಿಂಚಿ ಕ್ರೀಡಾ ಕೌಶಲ್ಯ ಪ್ರೇಮಭಾವ ಮೆರೆದಿದ್ದಾರೆ. ವೈಯಕ್ತಿಕ ಹಾಗೂ ಗುಂಪು ಆಟಗಳಲ್ಲಿ ಸಾಧನೆ ತೋರಿದ್ದಾರೆ.
ಬಾಲಕರ ವಿಭಾಗದಲ್ಲಿ ಮಾಳಪ್ಪ ಇಲ್ಯಾಳ ೧೦೦ ಮೀ, ೨೦೦ ಮೀ ಓಟದ ಸ್ಪರ್ಧೆಗಳಲ್ಲಿ ಹಾಗೂ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನದೊಂದಿಗೆ ಗೆಲುವು ಸಾಧಿಸಿ ಟ್ರ‍್ಯಾಕ್ ಆ್ಯಂಡ್ ಫೀಲ್ಡ್ ಚಾಂಪಿಯನ್ ಸ್ಥಾನದ ಪಟ್ಟ ಅಲಂಕರಿಸಿ ಮಿಂಚಿದ್ದಾರೆ.೪೦೦ ಮೀ ಓಟದಲ್ಲಿ ಗೋಪಾಲ ಮನಗೂಳಿ ಪ್ರಥಮ, ಮಂಜುನಾಥ ಹಲಗಿ ದ್ವಿತೀಯ, ೮೦೦ ಮೀ ಓಟದಲ್ಲಿ ಅಭಿಷೇಕ ಪಡಸಲಗಿ ಪ್ರಥಮ, ೧೫೦೦ ಮೀ, ಓಟ ಪ್ರಜ್ವಲ ಬಾಗೇವಾಡಿ ಪ್ರಥಮ, ೪x೧೦೦ ಮೀ, ರಿಲೇ ಓಟದಲ್ಲಿ ಮಾಳಪ್ಪ, ದರ್ಶನ, ಗೋಪಾಲ, ಮಂಜುನಾಥ ಒಳಗೊಂಡ ರಿಲೇ ತಂಡ ಪ್ರಥಮ ಸ್ಥಾನ ಪಡೆದು ಸಂಭ್ರಮಿಸಿದ್ದಾರೆ.
ವಲಯ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ, ಮಕ್ಕಳಿಗೆ ಸೂಕ್ತ ತರಬೇತಿ ನೀಡಿ ಕೂಟದಲ್ಲಿ ಗಮನಾರ್ಹ ಸಾಧನೆ ಗೈಯುವಂತೆ ಪ್ರೋತ್ಸಾಹಿಸಿದ ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ಹಿರೇಮಠ ಅವರಿಗೆ ಸಂಸ್ಥೆಯ ಅಧ್ಯಕ್ಷರಾದ ತೋಂಟದ ಡಾ, ಸಿದ್ದರಾಮ ಮಹಾಸ್ವಾಮಿಗಳು, ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಶಿಕ್ಷಣ ತಜ್ಞರಾದ ಪ್ರೊ,ಶಿವಾನಂದ ಪಟ್ಟಣಶೆಟ್ಟರ, ಮುಖ್ಯೋಪಾದ್ಯಾಯ ಎಸ್.ಆಯ್.ಗಿಡ್ಡಪ್ಪಗೋಳ, ಸಿಬ್ಬಂದಿಗಳು ಸೇರಿದಂತೆ ಕ್ರೀಡಾಪ್ರಿಯರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.


