ಉದಯರಶ್ಮಿ ದಿನಪತ್ರಿಕೆ
ಇಂಡಿ: ಮತಕ್ಷೇತ್ರದಲ್ಲಿ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಕಂಡಿರುವ ಬಿಜೆಪಿ ಮುಖಂಡರು ಹಾಗೂ ಸಂಸದರು ಹತಾಶೆಗೊಂಡು ಒಂದೇ ರಾಷ್ಟ್ರೀಯ ಹೆದ್ದಾರಿಯನ್ನು ಪುನಃ ಪುನಃ ಉದ್ಘಾಟನೆ ಮಾಡಿ ಜಿಲ್ಲೆಯಲ್ಲಿ ನಗೆಪಾಟಲಿಗೆ ಈಡಾಗಿದ್ದಾರೆಂದು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಜಾವೀದ್ ಮೋಮಿನ್ ವ್ಯಂಗ್ಯವಾಡಿದರು.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸದರ ಬಗ್ಗೆ ಅತ್ಯಂತ ಗೌರವವಿದೆ. ಆದರೆ ಈಗಾಗಲೇ ಬೆಳಗಾವಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ರಾಷ್ಟ್ರೀಯ ಹೆದ್ದಾರಿಯನ್ನು ಉದ್ಘಾಟನೆಗೊಳಿಸಿದ್ದು, ಅದೇ ರಾಷ್ಟ್ರೀಯ ಹೆದ್ದಾರಿಯನ್ನು ಪುನಃ ಉದ್ಘಾಟನೆಗೊಳಿಸುವಂತಹ ಅತ್ಯಂತ ದುಸ್ಥಿತಿಗೆ ಬಿಜೆಪಿಗರು ಹಾಗೂ ಸಂಸದರು ತಲುಪಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಸರಕಾರಿ ಕಾರ್ಯಕ್ರಮದಂತೆ ಪ್ರತಿಬಿಂಬಿಸಿ, ಧ್ವನಿವರ್ಧಕ ಹಾಗೂ ನಗರದ ತುಂಬೆಲ್ಲಾ ಪಕ್ಷದ ಬ್ಯಾನರ್ ಅಳವಡಿಸಿ ಮೈತ್ರಿ ಪಕ್ಷದ ವೇದಿಕೆ ಕಾರ್ಯಕ್ರಮ ಮಾಡಿ ಶಾಸಕರ ಮೇಲೆ ಆರೋಪ ಮಾಡುತ್ತಾರೆ. ಇದು ಎಷ್ಟು ಸರಿ..? ಕಳೆದ 35 ವರ್ಷಗಳಿಂದ ಶಾಸಕ ಯಶವಂತರಾಯಗೌಡ ಪಾಟೀಲ ರಾಜಕಾರಣ ಮಾಡುತ್ತಿದ್ದು, ಮತಕ್ಷೇತ್ರದ ಹಾಗೂ ಜಿಲ್ಲೆಯ ಜನರಿಗೆ ಅವರ ಬಗ್ಗೆ ಗೊತ್ತಿದೆ. ಬಿಜೆಪಿಯವರು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದು, ಇವರಿಂದ ಯಾವುದೇ ಪಾಠ ಕಲಿಯುವ ಪ್ರಮೇಯ ಇಲ್ಲ. ನೀರಾವರಿ ವಿಚಾರದಲ್ಲಿ ಸಂಸದರ ಪಾತ್ರವಿದ್ದರೆ ಅಥವಾ ಪತ್ರ ವ್ಯವಹಾರ ಮಾಡಿದ್ದರೆ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಈ ವೇಳೆ ಸದಾಶಿವ ಪ್ಯಾಟಿ, ಶಿವಯೋಗೆಪ್ಪ ಚೆನಗೊಂಡ, ಜಟ್ಟಪ್ಪ ರವಳಿ, ಪ್ರಶಾಂತ ಕಾಳೆ, ಪ್ರಭುಗೌಡ ಪಾಟೀಲ, ಭಿಮಣ್ಣ ಕೌಲಗಿ, ಹರಿಶ್ಚಂದ್ರ ಪವಾರ, ರಮೇಶ್ ಕಲ್ಯಾಣಿ, ಮಲ್ಲು ಮಡ್ಡಿಮನಿ, ಚನ್ನು ದೇವರ, ಅವಿನಾಶ್ ಬಗಲಿ, ಸತೀಶ್ ಕುಂಬಾರ, ಸುಭಾಸ ಬಾಬರ್, ಭೀಮರಾಯ ಗಾಣಗೇರ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.

