ಕೇಂದ್ರ ಜಲ ಶಕ್ತಿ ತಂಡದ ನೋಡಲ್ ಅಧಿಕಾರಿ ವಿಕಾಸ ಡೋಗ್ರಾ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ನೈಸರ್ಗಿಕ ಸಂಪನ್ಮೂಲ ಕಾಮಗಾರಿಗಳಾದ ಕೆರೆ, ನಾಲಾ, ಕಲ್ಯಾಣಿ ಮತ್ತು ಇನ್ನಿತರ ಕಾಮಗಾರಿಗಳನ್ನು ನಿಯಮಾನುಸಾರ ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಬೇಕು ಎಂದು ಭಾರತ ಸರ್ಕಾರದ ಬೃಹತ್ ಕೈಗಾರಿಕಾ ಸಚಿವಾಲಯದ ನಿರ್ದೇಶಕರು ಹಾಗೂ ಕೇಂದ್ರ ಜಲ ಶಕ್ತಿ ತಂಡದ ಕೇಂದ್ರ ನೋಡಲ್ ಅಧಿಕಾರಿ ವಿಕಾಸ ಡೋಗ್ರಾ ಸೂಚನೆ ನೀಡಿದರು.
ಶುಕ್ರವಾರ ತಾಂತ್ರಿಕ ಅಧಿಕಾರಿಗಳಾದ ಅನಾಮಿಕಾ ಐಚ್ ಅವರೊಂದಿಗೆ ವಿಜಯಪುರ ಜಿಲ್ಲೆಗೆ ಭೇಟಿ ನೀಡಿ, ವಿಜಯಪುರ ಜಿಲ್ಲೆಯ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ವಿಕಾಸ ಡೋಗ್ರಾ ಅವರು, ಜಲಾನಯನ ಕಾಮಗಾರಿಗಳನ್ನು ಕಾಲ-ಕಾಲಕ್ಕೆ ಜಿಯೋ ಟ್ಯಾಗ್ ಮಾಡುವುದು, ಜಲ ಶಕ್ತಿ ಅಭಿಯಾನದ ಅಡಿಯಲ್ಲಿ (ಜೆಎಸ್‌ಎ) ಅನುಷ್ಠಾನಗೊಳಿಸುವ ಕಾಮಗಾರಿಗಳನ್ನು ಹಾಗೂ ಮುಕ್ತಾಯಗೊಂಡ ಕಾಮಗಾರಿಗಳನ್ನು ಕಡ್ಡಾಯವಾಗಿ ಜಲ ಶಕ್ತಿ ಅಭಿಯಾನ (ಜೆಎಸ್‌ಎ)ದ ತಂತ್ರಾಂಶದಲ್ಲಿ ಜಿಯೋಟ್ಯಾಗ್ ಮಾಡಬೇಕು. ಜಲ ಸಂರಕ್ಷಣೆ, ಮಳೆ ನೀರು ಕೊಯ್ಲು, ಸಾಂಪ್ರದಾಯಿಕ ಮತ್ತು ಇತರ ಜಲಮೂಲಗಳು, ಕುಡಿಯುವ ನೀರಿನ ಮೂಲಗಳು, ಕೆರೆಗಳ ನವೀಕರಣ, ಜಲಾನಯನ ಪ್ರದೇಶ ಅಭಿವೃದ್ಧಿ, ಅರಣ್ಯೀಕರಣ, ತ್ಯಾಜ್ಯ ನೀರಿನ ಮರುಬಳಕೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ನಿಯಮಿತವಾಗಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಕುಡಿಯುವ ನೀರಿನ ಗುಣಮಟ್ಟದ ಪರಿಶೀಲನೆ ನಡೆಸಬೇಕು. ಅಂತರ್ಜಲ ಮಟ್ಟ ಹೆಚ್ಚಿಸುವ ಕಾಮಗಾರಿಗಳಾದ ಮಳೆನೀರು ಕೊಯ್ಲು ಘಟಕ, ಬೋರ್‌ವೆಲ್ ಮರುಪೂರಣ ಘಟಕ ಹಾಗೂ ವಿವಿಧ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಹಾಗೂ ನಿಯಮಾನುಸಾರ ಹಮ್ಮಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಡಾ. ವಿಜಯ ಕುಮಾರ ಆಜೂರ ಹಾಗೂ ಜಿಲ್ಲೆಯ ಎಲ್ಲ ಅನುಷ್ಠಾನ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

