ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ‘ಸತ್ಯಮೇವ ಜಯತೆ’ ಎನ್ನುವುದು ಮತ್ತೆ ಸಾಬೀತಾಗಿದೆ. ಅರವಿಂದ್ ಕೇಜ್ರಿವಾಲ್ ಅವರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಬಿಜೆಪಿಯ ನಿರಂಕುಶ ಆಡಳಿತ, ಸರ್ವಾಧಿಕಾರಿ ವರ್ತನೆಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಸಿಬಿಐ ಬಳಸಿಕೊಂಡು ಸುಳ್ಳು ಆರೋಪ ಮಾಡಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಆಗ್ರಹಿಸಿದ್ದಾರೆ.
ಆಮ್ ಆದ್ಮಿ ಪಾರ್ಟಿ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನಲೆಯಲ್ಲಿ ಸುಕ್ರವಾರ ನಗರದ ಪಕ್ಷದ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಭೋಗೇಶ್ ಸೋಲಾಪುರ್ ಅವರು, ಸುಪ್ರೀಂ ಕೋರ್ಟ್‌ನಲ್ಲಿ ಸತ್ಯಕ್ಕೆ ಗೆಲುವು ಸಿಕ್ಕಿದೆ. ಪ್ರಾಮಾಣಿಕತೆಗೆ ಎಂದೂ ಸೋಲಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದರು.
ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಸಿಬಿಐ ಸಂಸ್ಥೆಯನ್ನು ಪಂಜರದ ಗಿಣಿ ಎನ್ನುವ ಮೂಲಕ ಕೇಂದ್ರ ಸರ್ಕಾರದ ಸೂಚನೆಯಂತೆ ಕೆಲಸ ಮಾಡುತ್ತಿದೆ ಎಂದು ಛೀಮಾರಿ ಹಾಕಿದೆ. ಸಿಬಿಐ ನಡೆ ಬಗ್ಗೆಯೇ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಬಿಐ ತಾನು ಬಂಧಮುಕ್ತ ಗಿಣಿ ಎಂದು ನಿರೂಪಿಸಬೇಕು, ಸಂಶಯಾತೀತವಾಗಿ ಕೆಲಸ ಮಾಡಬೇಕು ಎಂದು ಹೇಳಿದೆ. ಇದು ಸಿಬಿಐ ಯಾರ ಪರ ಕೆಲಸ ಮಾಡುತ್ತಿದೆ ಎನ್ನುವನ್ನು ಮತ್ತೆ ಸಾಬೀತುಪಡಿಸಿದೆ ಎಂದರು.
ಸುಪ್ರೀಂ ಕೋರ್ಟ್ ಇಂದು ನೀಡಿರುವ ತೀರ್ಪು ಸತ್ಯ, ನ್ಯಾಯದ ಪರವಾಗಿ ಹೋರಾಟ ಮಾಡುವವರಿಗೆ ಭರವಸೆ ನೀಡಿದೆ. ದೇಶದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಂಬಿಕೆ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಇನ್ನಾದರೂ ದ್ವೇಷ ರಾಜಕಾರಣ ಬಿಟ್ಟು, ಜನ ಕೊಟ್ಟಿರುವ ಅವಕಾಶ ಬಳಸಿಕೊಂಡು ಕೆಲಸ ಮಾಡಲಿ ಎಂದು ಸೋಲಾಪೂರ ಹೇಳಿದರು.

