ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಈ ದೇಶದ ಯಾರೊಬ್ಬರು ಹಸಿವಿನಿಂದ ಸಾಯಬಾರದು ಎಂದು ಅನ್ನಭಾಗ್ಯ ಯೋಜನೆಯನ್ನು ತಂದಿದ್ದಾರೆ. ಆದರೆ ಆಹೇರಿ(ಜ) ಗ್ರಾಮದ ದಿನಸಿ ಹಂಚುವ ವಿತರಕರು ಫಲಾನುಭವಿಗಳಿಂದ ಹೆಬ್ಬೆಟ್ಟು ಒತ್ತಿಸಿಕೊಂಡು ಮುಂದಿನ ತಿಂಗಳ ಬನ್ನಿ ಎಂದು ೨-೩ ತಿಂಗಳಿನಿಂದ ದಿನಸಿ ಕೊಡದೇ ಮುಂದೆ ಹಾಕುತ್ತಿದ್ದಾರೆ. ಹೆಚ್ಚಿಗೆ ಕೇಳಿದರೆ ನಿಮ್ಮ ರೇಷನ್ ಕಾರ್ಡ ರದ್ದು ಪಡಿಸುವುದಾಗಿ ಹೇಳಿರುತ್ತಾರೆ. ಕಾರಣ ಇವರ ವಿತರಣಾ ಲೈಸನ್ಸ್ ರದ್ದು ಮಾಡಿ ಬೇರೆಯವರಿಗೆ ವಹಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ವಿನಯಕುಮಾರ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ರೈತ ಸಂಘದ ತಾಲೂಕಾ ಅಧ್ಯಕ್ಷ ಮಹಾದೇವಪ್ಪ ತೇಲಿ, ಆಹೇರಿ ಗ್ರಾಮದ ರೈತ ಸಂಘದ ಅಧ್ಯಕ್ಷ ಆತ್ಮಾನಂದ ಭೈರೋಡಗಿ ಮಾತನಾಡಿ, ಈ ವಿತರಕರು ಪ್ರತಿ ತಿಂಗಳು ೮೦-೧೦೦ ಜನರಿಗೆ ರೇಷನ್ ಖಾಲಿ ಆಗಿದೆ, ಮೇಲಿನಿಂದಲೇ ಕಡಿಮೆ ಕಳುಹಿಸಿದ್ದಾರೆ, ಮುಂದಿನ ತಿಂಗಳು ಬನ್ನಿ ಎಂದು ಕಳುಹಿಸುತ್ತಿದ್ದಾರೆ, ಅವರು ಬಿಳಿ ಹಾಳೆಯಲ್ಲಿ ಬರೆದುಕೊಟ್ಟಿರುವ ಕಾಗದ ಕಳೆದರೆ ಮುಗಿತು ಅಂತವರಿಗೆ ರೇಷನ್ ಇಲ್ಲ, ಆದ್ದರಿಂದ ಕೂಡಲೇ ವಿತರಕರ ಲೈಸನ್ಸ್ ರದ್ದು ಮಾಡಿ, ಬಡವರ ಬಗ್ಗೆ ಕಾಳಜಿ ಉಳ್ಳವರಿಗೆ ದಿನಸಿ ಹಂಚಲು ನೇಮಕ ಮಾಡಬೇಕು ಎಂದರು.
ಮನವಿ ಸ್ವೀಕರಿಸಿದ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ವಿನಯಕುಮಾರ ಪಾಟೀಲ ಮಾತನಾಡಿ, ಈ ಹೆಬೆಟ್ಟು ಒತ್ತಿಸಿಕೊಂಡು ೨-೩ ತಿಂಗಳ ನಂತರ ದಿನಸಿ ಕೊಡುವ ಯಾವುದೇ ಪದ್ದತಿ ಇಲ್ಲ, ಹೆಬೆಟ್ಟು ಒತ್ತಿಸಿಕೊಂಡ ತಕ್ಷಣದಲ್ಲಿ ದಿನಸಿ ವಿತರಣೆ ಮಾಡಬೇಕು, ಅದೇ ರೀತಿ ಪ್ರತಿ ಪಡಿತರ ಅಂಗಡಿಯಲ್ಲಿ ೩ ಜನ ಸ್ಥಳೀಯ ಸಲಹಾ ಸಮಿತಿಯವರು ಇದ್ದು, ಇಲ್ಲಿ ಆಗು ಹೋಗುವ ಎಲ್ಲದರ ಕುರಿತು ಗಮನಹರಿಸಬೇಕು, ಅನ್ಯಾಯವಾದರೆ ತಕ್ಷಣ ಇಲಾಖೆಯ ಗಮನಕ್ಕೆ ತರಬೇಕು, ಈ ವಿಷಯಕ್ಕೆ ಸಂಬಂಧಿಸಿದಂತೆ ಕೂಡಲೇ ಒಂದು ತನಿಖಾ ತಂಡಾ ಕಳುಹಿಸಿ ಪಂಚರ ಸಮ್ಮುಖದಲ್ಲಿ ವಿಚಾರಿಸಿ ಅನ್ಯಾಯವಾಗಿದ್ದರೆ, ತಕ್ಷಣದಿಂದಲೇ ಅಂತವರ ಲೈಸನ್ಸ್ ರದ್ದು ಮಾಡಿ ಬೇರೆಯವರಿಗೆ ಕೊಡುತ್ತೇವೆ ಎಂದು ಭರವಸೆ ನೀಡಿದರು.
ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಜಿಲ್ಲಾ ಸಂಚಾಲಕ
ರಾಮನಗೌಡ ಪಾಟೀಲ, ವಿಜಯಪುರ ತಾಲೂಕಾ ಉಪಾಧ್ಯಕ್ಷ ಪ್ರಕಾಶ ತೇಲಿ, ತಾಲೂಕಾ ಸಮೂಹ ಮಾಧ್ಯಮ ಪ್ರತಿನಿಧಿ ಜಯಸಿಂಗ ರಜಪೂತ, ಅರವಿಂದ ರಜಪೂತ, ತಿಪ್ಪರಾಯ ಭೈರೊಡಗಿ, ಚನ್ನವೀರ ವಾಲಿ ಸೇರಿದಂತೆ ಇತರರು ಇದ್ದರು.

