ಎಸ್‌ಎಸ್‌ಎಲ್‌ಸಿ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಸ್ಪಷ್ಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವರ್ಷದೊಳಗಿನ ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ಉದ್ದೇಶದಿಂದ ಮತ್ತು ಮಕ್ಕಳಲ್ಲಿ ಆತ್ಮ ವಿಶ್ವಾಸವನ್ನು ಉತ್ತೇಜಿಸುವುದು, ಅವರ ವಿಶೇಷ ಪ್ರತಿಭೆಯನ್ನು ಗುರುತಿಸುವುದು, ಜಾತಿ, ವರ್ಣ, ಪಂಥದ ಭೇದವಿಲ್ಲದೆ ಎಲ್ಲ ವರ್ಗದವರಿಗಾಗಿ ಕಾರ್ಯಕ್ರಮಗಳನ್ನು ರಚಿಸುವುದೆ ಬಾಲ ವಿಕಾಸ ಅಕಾಡೆಮಿಯ ಉದ್ದೇಶವಾಗಿದೆ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವಿಜಯಪುರ ನಗರ ಹಾಗೂ ಶಾಂತಿನಿಕೇತನ ಶಾಲೆಯ ಸಂಯುಕ್ತಾಶ್ರದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸುಧಾರಣೆಗಾಗಿ ‘ಎಸ್‌ಎಸ್‌ಎಲ್‌ಸಿ ಸಾಹಿತ್ಯ ಪರಿಚಯಾತ್ಮಕ ಕಾರ್ಯಾಗಾರ’ ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ವಿದ್ಯಾರ್ಥಿಗಳ ಭವಿಷ್ಯ ಶಿಕ್ಷಣದಲ್ಲಿದೆ. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಜತೆಗೆ ವಿನೂತನ ಪ್ರಯೋಗಕ್ಕೂ ಮುಂದಾಗಿದ್ದಾರೆ. ಶಿಕ್ಷಣ ಕ್ಷೇತ್ರ ಸದಾ ಜಾಗೃತವಾಗಿರಬೇಕು. ಮಕ್ಕಳಲ್ಲಿ ವೈಜ್ಞಾನಿಕ ಜ್ಞಾನದ ಪ್ರಜ್ಞೆಯನ್ನು ಬೆಳೆಸಲು ವಾತಾವರಣವನ್ನು ಸೃಷ್ಟಿಸುವುದು ಮತ್ತು ಮಕ್ಕಳಲ್ಲಿ ಹೊಸ ಆವಿಷ್ಕಾರಗಳನ್ನು ಉತ್ತೇಜಿಸುವುದು. ಮಕ್ಕಳ ಅಭ್ಯುದಯಕ್ಕಾಗಿ ಹೆಚ್ಚಿನ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ರಚಿಸುವುದು, ಅನುಷ್ಠಾನ ಗೊಳಿಸುವುದು ಅಕಾಡೆಮಿಯ ಪ್ರಾಥಮಿಕ ಉದ್ದೇಶವಾಗಿದೆ ಎಂದರು.
ನಗರ ವಲಯ ಬಿಇಓ ಬಸವರಾಜ ತಳವಾರ ಮಾತನಾಡಿ, ಬ್ಲಾಕ ಹಂತದಲ್ಲಿ ಅಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು, ಸಹ ಶಿಕ್ಷಕರುಗಳಿಗೆ ತರಬೇತಿ, ಬಳಿಕ ಶಾಲಾ ಹಂತದಲ್ಲಿ ಸಭೆ ನಡೆಸಿದರು.
ನಂತರ ಕನ್ನಡ ವಿಷಯದಲ್ಲಿರುವ ಕ್ಲಿಷ್ಟಾಂಶಗಳನ್ನು ಶಿಕ್ಷಕರ ಜೊತೆ ಚರ್ಚಿಸಿ ವಿಷಯ ಮಂಡಿಸಿದರು.
ವಿಜಯಪುರ ನಗರ ವಲಯದ ಎಲ್ಲಾ ಪ್ರೌಢ ಶಾಲೆಯ ಕನ್ನಡ ಹಾಗೂ ವಿಜ್ಞಾನ ವಿಷಯ ಶಿಕ್ಷಕರುಗಳು ಕಾರ್ಯಾಗಾರದ ಪ್ರಯೋಜನ ಪಡೆದರು.
ಈ ವೇಳೆ ಇಸಿಓ ಎಲ್.ಎಸ್.ಬಿರಾದಾರ, ಸಿಆರ್‌ಪಿ ಬಿ.ಎ.ಬಿರಾದಾರ ಸೇರಿದಂತೆ ಗಣಿತ ಹಾಗೂ ಕನ್ನಡ ವಿಷಯ ಶಿಕ್ಷಕರುಗಳು ಉಪಸ್ಥಿತರಿದ್ದರು.

