ಉದಯರಶ್ಮಿ ದಿನಪತ್ರಿಕೆ
ಇಂಡಿ: 40 ವರ್ಷಗಳ ಸುಧೀರ್ಘ ರಾಜಕಾರಣದಲ್ಲಿ ಕಪ್ಪು ಚುಕ್ಕೆ ಇಲ್ಲದೆ ಅಜಾತ ಶತ್ರು ಆಗಿ ಜಿಲ್ಲೆಯಲ್ಲಿ ಅನೇಕ ಅಭಿವೃದ್ದಿ ಯೋಜನೆಗಳು ಸಂಸದ ರಮೇಶ್ ಜಿಗಜಿಣಿಗಿ ತಂದಿದ್ದಾರೆ. ಇಂತಹ ಒಳ್ಳೆಯ ಸಜ್ಜನ ವ್ಯಕ್ತಿಯ ಬಗ್ಗೆ ಮಾತನಾಡುವುದು ಶಾಸಕ ಯಶವಂತರಾಯಗೌಡ ಪಾಟೀಲರಿಗೆ ತರವಲ್ಲ. ಹಿರಿಯರನ್ನು ಗೌರವಿಸುವ ಗುಣ ನಿಮ್ಮಲ್ಲಿ ಇರದಿದ್ದರೆ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಹೆಸರು ಪದೆ ಪದೆ ರಾಜಕಾರಣದಲ್ಲಿ ಬೆರೆಸುವುದು ಸರಿಯಲ್ಲ. ಹಿರಿಯ ರಾಜಕಾರಣಿ ಬಗ್ಗೆ ಅಗೌರವವಾಗಿ ಮಾತನಾಡಿರುವುದು ಖಂಡಿಸುತ್ತೇವೆ ಎಂದು ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಆರೋಪಿಸಿದರು.
ತಾಲೂಕಿನ ನಾದ 110 ಕೆ.ವ್ಹಿ ವಿದ್ಯತ್ ವಿತರಣಾ ಕೇಂದ್ರ ಉದ್ಘಾಟನಾ ಸಮಾರಂದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಸಂಸದ ರಮೇಶ ಜಿಗಜಿಣಗಿಯವರ ಬಗ್ಗೆ ಹಗುರುವಾಗಿ ಮಾತನಾಡಿರುವುದು ಶೋಭೆಯಲ್ಲ. ಸಂಸದರ ಅಭಿವೃಧ್ಧಿ ಕಾರ್ಯಗಳ ಬಗ್ಗೆ ಜನತೆಗೆ ಗೊತ್ತಾಗಬಾರದು ಎಂಬ ದುರುದ್ದೇಶ. ಮತಕ್ಷೇತ್ರದಲ್ಲಿ ಕೇವಲ ತಮ್ಮ ಹೆಸರೇ ಇರಬೇಕೆಂಬ ಆಸೆಯಿಂದ ಹಿರಿಯ ರಾಜಕಾರಣಿ ಜಿಗಜಿಣಗಿ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಾ-ಎಂಬ ಧ್ಯೇಯ ಹೊಂದಿದ ಹಲವರು ಮಣ್ಣಾಗಿದ್ದಾರೆ ಎಂಬುದು ಶಾಸಕರು ಮೊದಲು ಅರಿತುಕೊಳ್ಳಬೇಕು. ಕೇಂದ್ರ ಸಚಿವ ನೀತಿನ ಗಡ್ಕರಿ ಬೆಳಗಾವಿಯಲ್ಲಿ ರಾಜ್ಯದಲ್ಲಿನ ಹೆದ್ದಾರಿಗಳಿಗೆ ಸಾಮೂಹಿಕ ಚಾಲನೆ ನೀಡಿದ್ದಾರೆ. ಆದರೆ ಇಂಡಿಯಲ್ಲಿ ನಡೆದಿದ್ದು ಭೂಮಿ ಪೂಜೆ, ಇದು ಶಾಸಕರು ತಿಳಿದುಕೊಳ್ಳಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭೂಮಿ ಪೂಜೆ ಮಾಡಿದ್ದು ಕಾರ್ಯಕರ್ತರ ಒತ್ತಾಯದ ಮೇರೆಗೆ ಸಂಸದ ರಮೇಶ ಜಿಗಜಿಣಗಿಯವರು ದೂರವಾಣಿ ಮೂಲಕ ನಿಮಗೆ ಉದ್ಘಾಟನೆಗೆ ಆಮಂತ್ರಿಸಿದ್ದಾರೆ. ಆದರೆ ಪ್ರೋಟೋಕಾಲ್ ಪಾಲಿಸಿಲ್ಲ ಎಂದು ಅಪಾದನೆ ಮಾಡಿರುವುದು ಸರಿಯಾದ ಕ್ರಮವಲ್ಲ. ರಾಷ್ಟೀಯ ಹೆದ್ದಾರಿಗೆ ಸಾವಿರಾರು ಕೋಟಿ ಅನುದಾನ ತಂದಿರುವ ಹೊಟ್ಟೆ ಉರಿಯಿಂದ ಮಾತನಾಡುತ್ತಿದ್ದೀರಿ ಎಂದು ಕಾಸುಗೌಡ ನುಡಿದರು.
ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಹಣಮಂತರಾಯಗೌಡ ಪಾಟೀಲ, ಅನೀಲ ಜಮಾದಾರ, ಸಿದ್ದಲಿಂಗ ಹಂಜಗಿ, ದೇವೆಂದ್ರ ಕುಂಬಾರ, ಮಹಾದೇವ ರಜಪೂತ ಪತ್ರಿಕಾಗೋಷ್ಠಿಯಲ್ಲಿದ್ದರು.

