ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ತಾಲೂಕುಮಟ್ಟದ ಮುಖ್ಯಶಿಕ್ಷಕರ ಸಭೆ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಕಡಿಮೆ ಬರುತ್ತದೆ ಎಂಬ ಹಣೆಪಟ್ಟಿಯಿಂದ ಹೊರಬರಲು ಶಿಕ್ಷಕ ಬಾಂಧವರು ಬೋಧನೆಗೆ ವಿಶೇಷ ಒತ್ತು ನೀಡಬೇಕೆಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕಿ (ಅಭಿವೃದ್ಧಿ) ಉಮಾದೇವಿ ಸೊನ್ನದ ಹೇಳಿದರು.
ಪಟ್ಟಣದ ಬಸವೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿರುವ ಭಾರತ ಸೇವಾದಳದ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಲಾ ಶಿಕ್ಷಣ ಇಲಾಖೆ, ಡಯಟ್ ಸಹಯೋಗದಲ್ಲಿ ೨೦೨೪-೨೫ ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಬಸವನಬಾಗೇವಾಡಿ ತಾಲೂಕುಮಟ್ಟದ ಮುಖ್ಯಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರು ಆಗಾಗ ಪಾಲಕ-ಪೋಷಕರ ಸಭೆ ಮಾಡುವ ಮೂಲಕ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ವಿಶೇಷ ತರಬೇತಿ, ಗುಂಪು ಚರ್ಚೆ, ವಿದ್ಯಾರ್ಥಿಗಳ ವೈಯಕ್ತಿಕ ಕಡತ ನಿರ್ವಹಣೆ, ಪರಿಹಾರ ಬೋಧನೆ, ವಿದ್ಯಾರ್ಥಿಗಳ ಗುಂಪು ರಚಿಸಿ ಶಿಕ್ಷಕರಿಗೆ ದತ್ತು ನೀಡುವುದು, ಸ್ಪಷ್ಟ ಓದು, ಶುದ್ಧ ಬರಹ, ಸರಳ ಗಣಿತ ಅಂಶಕ್ಕೆ ಒತ್ತು ನೀಡಬೇಕು. ವಿದ್ಯಾರ್ಥಿಗಳ ಪ್ರಗತಿಗೆ ಎಲ್ಲ ಶಿಕ್ಷಕ ಬಾಂಧವರು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದರೆ ಜಿಲ್ಲೆಯು ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಹಿಂದುಳಿದಿದೆ ಎಂಬ ಹಣೆಪಟ್ಟಿಯಿಂದ ಹೊರಬರಲು ಸಾಧ್ಯವಿದೆ. ಇದಕ್ಕಾಗಿ ಎಲ್ಲ ಶಿಕ್ಷಕ ಬಾಂಧವರು ದೃಢ ಸಂಕಲ್ಪ ಮಾಡಬೇಕೆಂದು ಸಲಹೆ ನೀಡಿದರು.
ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ಮಾತನಾಡಿ, ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರ ಪಾತ್ರ ಬಹಳ ಪ್ರಮುಖವಾಗಿದೆ. ಶಿಕ್ಷಕರು ವಿಶೇಷ ಕಾಳಜಿ ವಹಿಸಿ ವಿದ್ಯಾರ್ಥಿಗಳಿಗೆ ಅತ್ಯಂತ ಆಕರ್ಷಕವಾಗಿ ಅವರ ಮನಮುಟ್ಟುವಂತೆ ಪಾಠ ಮಾಡಿ ವಿದ್ಯಾರ್ಥಿಗಳ ಗೈರು ಹಾಜರು ತಪ್ಪಿಸಲು ಮನೆ-ಮನೆಗೆ ಭೇಟಿ ನೀಡುವ ಮೂಲಕ ಎಲ್ಲ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವಂತೆ ಕ್ರಮ ವಹಿಸಬೇಕೆಂದರು.
ಎಸ್ಎಸ್ಎಲ್ಸಿ ನೋಡಲ್ ಅಧಿಕಾರಿ ವಿ.ಎಚ್,ಪುರೋಹಿತ ಮಾತನಾಡಿದರು.
ವಿಜಯಪುರ ಡಯಟ್ ಹಿರಿಯ ಉಪನ್ಯಾಸಕಿ ಆರ್.ಸಿ.ಕಲಬುರ್ಗಿ ಅವರು ತಾಲೂಕಿನ ಸಮಸ್ತ ಮುಖ್ಯಗುರುಗಳೊಂದಿಗೆ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆ ಕುರಿತು ಸಂವಾದ ನಡೆಸಿದರು.
ವೇದಿಕೆಯಲ್ಲಿ ವಿಜಯಪುರ ಡಯಟ್ ಹಿರಿಯ ಉಪನ್ಯಾಸಕಿ ಗೀತಾ ಕುಲಕರ್ಣಿ, ಉಪನ್ಯಾಸಕ ಅಶೋಕ ನಾಯ್ಕೋಡಿ, ಕ್ಷೇತ್ರಸಮನ್ವಾಧಿಕಾರಿ ಸುನೀಲ ನಾಯಕ, ಅನುದಾನಿತ ಪ್ರೌಢಶಾಲೆಗಳ ಸಂಘದ ಅಧ್ಯಕ್ಷ ಆರ್.ಎಸ್.ತುಂಗಳ ಇದ್ದರು.
ಆರ್.ಎನ್.ಪೂಜಾರಿ ಸ್ವಾಗತಿಸಿದರು. ಎಂ.ವಿ.ಗಬ್ಬೂರ ನಿರೂಪಿಸಿದರು. ಎಸ್.ಬಿ.ದಳವಾಯಿ ವಂದಿಸಿದರು. ಸಭೆಯಲ್ಲಿ ತಾಲೂಕಿನ ೧೦೦ ಪ್ರೌಢಶಾಲೆಗಳ ಮುಖ್ಯಗುರುಗಳು ಭಾಗವಹಿಸಿದ್ದರು.

