ರಾಜ್ಯ ಮಟ್ಟಕ್ಕೆ ಎಕ್ಸಲೆಂಟ್ ವಿಜ್ಞಾನ ಪಪೂ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಓದು ಮಕ್ಕಳಲ್ಲಿ ಜ್ಞಾನ ವೃದ್ಧಿಸಿದರೆ; ಕ್ರೀಡೆ ಮಕ್ಕಳನ್ನು ದೈಹಿಕವಾಗಿ ಬಲಗೊಳಿಸುವುದರ ಜೊತೆಗೆ ಮಾನಸಿಕವಾಗಿಯೂ ಗಟ್ಟಿಯಾಗುವುದಕ್ಕೆ ನೆರವಾಗುತ್ತದೆ. ಆ ಕಾರಣದಿಂದಾಗಿಯೇ ಸ್ವಾಮೀ ವಿವೇಕಾನಂದರು ಮನೋಬಲದಷ್ಟೆ ಶಾರೀರಿಕ ಬಲಕ್ಕೂ ಮಾನ್ಯತೆ ನೀಡುತ್ತ ಕ್ರೀಡೆಯ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುತ್ತಿದ್ದರು ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗದ ವತಿಯಿಂದ ಆಯೋಸಲಾಗಿದ್ದ ಜಿಲ್ಲಾ ಮಟ್ಟದ ಗುಂಪು ಕ್ರೀಡಾ ಕೂಟದಲ್ಲಿ ವಿಜೇತರಾದ ಎಕ್ಸಲೆಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶುಭಾಷಯಕೋರಿ ಮಾತನಾಡಿದ ಅವರು, ಇಂದು ವಿದ್ಯಾರ್ಥಿಗಳಲ್ಲಿ ಬಹಳಷ್ಟು ಜನ ಕಲಿಕೆಯಲ್ಲಿ ಮುಂದಿದ್ದರೂ ಕೂಡ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂಥವರಿಗೆ ಕ್ರೀಡೆ ಎಂಬುದು ದಿವ್ಯ ಔಷಧವಾಗಿದೆ ಎಂದು ಹೇಳಿದರು.
ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರೊಂದಿಗೆ ಕಲಿಕೆಯಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಇಂದು ಸವಾಲಿನ ವಿಷಯವಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರಕ್ಕೆ ಕಾಲಿಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅದರಿಂದ ಮಕ್ಕಳಲ್ಲಿ ಅಡಗಿದ್ದಂತ ಕ್ರೀಡಾ ಪ್ರತಿಭೆ ಹೊರ ಬಾರದೇ ಅಲ್ಲಿಯೇ ಕೊಳೆತು ಹೋಗುತ್ತಲಿದೆ. ಸಿಕ್ಕಂತ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮಲ್ಲಿನ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಮಕ್ಕಳು ಭವಿಷ್ಯದಲ್ಲಿ ಮಹತ್ತರವಾದ ಸ್ಥಾನವನ್ನು ಪಡೆದುಕೊಳ್ಳುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಶಾಲಾ ಕಾಲೇಜುಗಳು ಮಕ್ಕಳಲ್ಲಿನ ಪ್ರತಿಭೆಯನ್ನು ಹೊರ ಹಾಕುವುದಕ್ಕೆ ಸೂಕ್ತವಾದಂತ ವೇದಿಕೆಯನ್ನು ಕಲ್ಪಸಿಕೊಡಬೇಕು ಎಂದು ಹೇಳಿದ ಅವರು ಜಿಲ್ಲಾ ಮಟ್ಟದ ಚದುರಂಗ ಆಟದಲ್ಲಿ ಮೊದಲ ಸ್ಥಾನ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ದ್ವಿತೀಯ ಪಿಯುಸಿ ವಿಭಾಗದ ಭಾಗ್ಯಶ್ರಿ ಪಾಟೀಲ್, ಪ್ರೇಮ ಕುಮಾರ ಮತ್ತು ಲಾನ್ ಟೆನಿಸ್ ಆಟದಲ್ಲಿ ರಾಜ್ಯಕ್ಕೆ ಆಯ್ಕೆಯಾದ ರಿಯಾ ಕೆಂಭಾವಿ, ಕೋಮಲ್ ಭಾವಿಕಟ್ಟಿ ಹಾಗೂ ಅತ್ಯುತ್ತಮ ಪ್ರದರ್ಶನ ತೋರಿದ ಲುಬಾನಾ ಬಗಲಿ, ಶ್ರೇಯಾ ಹೂಗಾರ, ಪೂರ್ವಿ ಮಂಟೂರ್ ಗೆ ಶುಭಾಷಯಗಳನ್ನು ಕೋರುವುದರ ಜೊತೆಗೆ ಇವರಿಗೆ ತರಬೇತಿ ನೀಡಿದ ದೈಹಿಕ ನಿರ್ದೇಶಕರುಗಳನ್ನು ಅಭಿನಂದಿಸಿದರು.
ಆಯ್ಕೆಯಾದ ಮಕ್ಕಳು ರಾಜ್ಯ ಮಟ್ಟದಲ್ಲಿಯೂ ಅತ್ಯುತ್ತಮ ಪ್ರದರ್ಶನ ತೋರಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸುವುದರೊಂದಿಗೆ ನಾಡಿನ ಕ್ರೀಡಾ ಕ್ಷೇತ್ರಕ್ಕೆ ಅದ್ವಿತೀಯವಾದ ಕೊಡುಗೆ ನೀಡಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್, ದೈಹಿಕ ನಿರ್ದೇಶಕರುಗಳಾದ ಗೋಪಾಲ ನಾಯ್ಕ, ಸಂತೋಷ ಲಮಾಣಿ, ಜ್ಯೋತಿ ಎಸ್.ಬಿ ಉಪಸ್ಥಿತರಿದ್ದರು.

