ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪ್ರತಿವರ್ಷದಂತೆ ಈ ವರ್ಷವು ಸಹ ನೆಚ್ಚಿನ ಶಿಕ್ಷಕರನ್ನು ನೆನೆದು, ಅವರು ನಮಗೆ ನೀಡಿದ ಮಾರ್ಗದರ್ಶನ, ಶಿಕ್ಷಣ, ಕಲಿಸಿದ ನೈತಿಕ ಶಿಕ್ಷಣ, ಸಹಕಾರ ಎಲ್ಲವನ್ನೂ ಸ್ಮರಿಸಿ ಅವರಿಗೆ ಗೌರವ ಸಮರ್ಪಣೆ ನೀಡುವ ದಿನವೇ ಶಿಕ್ಷಕರ ದಿನ ಎಂದು ಸಂಸ್ಥೆಯ ನಿರ್ದೇಶಕ ಸಂತೋಷ ಫಾದರ್ ಹೇಳಿದರು.
ಪಟ್ಟಣದ ಸಂಗಮ ಸಂಸ್ಥೆಯಲ್ಲಿ ಹಮ್ಮಿಕೊಂಡ ಸಂತ ಮದರ್ ತೆರೆಸಾ ದಿನ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನ, ಕೌಶಲ್ಯ ಮಟ್ಟ, ಆತ್ಮ ವಿಶ್ವಾಸವನ್ನು ಸುಧಾರಿಸಲು ಸಹಾಯ ಮಾಡುವ ಶಿಕ್ಷಕರನ್ನು ನಾವು ಎಷ್ಟೂ ಸ್ಮರಿಸಿದರು ಸಾಲದು. ವರ್ಷಕ್ಕೊಮ್ಮೆ ಸೆ.೦೫ರಂದು ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಶಿಕ್ಷಣದಲ್ಲಿ ಗುರುಗಳ ಪಾತ್ರ ಬಹಳ ಮುಖ್ಯವಾಗಿದೆ. ಶಿಕ್ಷಕರನ್ನು ಗೌರವದಿಂದ ಸಮಾಜ ಅವರನ್ನು ಕಾಣಬೇಕಾಗಿದೆ. ಜೊತೆಗೆ ಸಂತ ಮದರ್ ತೆರೇಸಾ ಅವರು ಸುಮಾರು ೪೫ ವರ್ಷಗಳಿಗೂ ಹೆಚ್ಚು ಕಾಲ ಬಡ ರೋಗಿಗಳ ಅನಾಥರ ಮತ್ತು ಮರಣ ಸಂಕಟದಲ್ಲಿರುವವರ ಸೇವೆಯಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡಿದ್ದರು. ಸೆ.೫ ೧೯೯೭ ರಲ್ಲಿ ಇವರು ಇಹಲೋಕ ತ್ಯಜಿಸಿದರು ಎಂದರು.
ಈ ವೇಳೆ ಎಆರ್‌ಟಿ ಸೆಂಟರಿನ ಮಕ್ಕಳ ಮೇಲ್ವೀಚಾರಕಿ ನಾಗರತ್ನ ತಿಳಗೂಳ, ವಿದ್ಯಾರ್ಥಿ ಪ್ರತಿನಿಧಿ ಭಾಗಣ್ಣ ಕುಂಬಾರ, ವಿಜಯ ಬಂಟನೂರ, ಮಹೇಶ ಚವ್ಹಾಣ ಸುಜಾತಾ ಸೇರಿದಂತೆ ವಿವಿಧ ಹಳ್ಳಿಗಳ ಸ್ವ ಸಹಾಯ ಸಂಘದ ಸದಸ್ಯರು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಇದ್ದರು.

