ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರ್ತಿಸುವುದೇ ಪ್ರತಿಭಾ ಕಾರಂಜಿ ಏರ್ಪಡಿಸುವ ಉದ್ದೇಶವಾಗಿದೆ ಎಂದು ಕಳ್ಳಕವಟಗಿ ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ಜಿ.ದೊಡ್ಡಿಹಾಳ ಹೇಳಿದರು.
ತಾಲ್ಲೂಕಿನ ಘೋಣಸಗಿ ಗ್ರಾಮದ ಅಮೋಘ ನವೋದಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ ಮಕ್ಕಳ ಸೃಜನಶೀಲತೆ ಹೊರ ಹಾಕುವ ವೇದಿಕೆಯಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಟಿ.ಎಂ.ಪಾಟೀಲ್ ಮಾತನಾಡಿ ನಿರ್ಣಾಯಕರು ಯಾವುದೇ ಬೇಧ ಮಾಡದೇ ಸೂಕ್ತ ಪ್ರತಿಭೆ ಹೊಂದಿದ ಮಕ್ಕಳನ್ನು ಪ್ರಾಮಾಣಿಕತೆಯಿಂದ ಆಯ್ಕೆ ಮಾಡಬೇಕು. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸೂಕ್ತ ವೇದಿಕೆಯಾಗಬೇಕು. ಸೋಲು ಗೆಲುವು ಯೋಚಿಸದೇ ಸ್ಪರ್ಧೆಯಲ್ಲಿ ಮಕ್ಕಳು ಭಾಗವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಮೈಬುಬ್ ಜತ್ತಿ, ಸಿದ್ದಪ್ಪ ಮುಚ್ಚಂಡಿ, ಎಸ್.ಎನ್.ಬಾಗಲಕೋಟ, ಜೆ.ಎ.ಆಯತವಾಡ, ಎಸ್.ಬಿ.ಖಂಡೆಕರ್, ಶಾಂತವೀರಯ್ಯ ಹಿರೇಮಠ, ಎನ್.ಆರ್.ಬಾನಿಕೋಲ್, ಎಸ್.ಎಸ್.ಗಣಿ, ವಸಂತ ಲೋಣಿ, ಪಿ.ಎಸ್.ಗದ್ಯಾಳ ಇದ್ದರು.
ನಿರೂಪಣೆಯನ್ನು ಸಂತೋಷ ಕಾಂಬಳೆ, ಸ್ವಾಗತವನ್ನು
ಐ.ಎಂ.ಅರಳಿ, ವಂದನಾರ್ಪಣೆಯಯನ್ನು ಅನ್ನಪೂರ್ಣ ಭಜಂತ್ರಿ ನೆರವೇರಿಸಿದರು.

