ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಲಾಡ್ಲಿ ಫೌಂಡೇಶನ್ ವತಿಯಿಂದ ಜಿಲ್ಲಾಡಳಿತದ ಸಹಯೋಗದಲ್ಲಿ ಇದೇ ಸೆಪ್ಟಂಬರ್ ೧೫ ರಂದು ವಿಜಯಪುರ ನಗರದಲ್ಲಿ ಸ್ವಚ್ಛತೆಗಾಗಿ ಕೈಗೊಂಡ ವಾಶೆಥಾನ್ ಓಟ ಯಶಸ್ವಿಗೊಳಿಸಲು ಸಂಬಂಧಿಸಿ ಅಧಿಕಾರಿಗಳು ಅಗತ್ಯ ಸಹಯೋಗ ನೀಡುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಸ್ವಚ್ಛತೆಗಾಗಿ ಕೈ ಜೋಡಿಸಿ ಘೋಷವಾಕ್ಯದೊಂದಿಗೆ ೫ ಕಿ.ಮೀ., ೧೦ ಕಿ.ಮೀ. ಹಾಗೂ ೨೧ ಕಿ.ಮೀ.ಓಟದ ವಾಶೆಥಾನ್ ಹಮ್ಮಿಕೊಂಡಿದ್ದು, ಮಕ್ಕಳಲ್ಲಿ ಸ್ವಚ್ಛತೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ನಗರದ ಗೋಲಗುಂಬಜ್ ಆವರಣದಲ್ಲಿ ಆರಂಭಗೊಳ್ಳುವ ಈ ಕಾರ್ಯಕ್ರಮದ ಯಶಸ್ವಿಗೆ ಶಾಲಾ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು, ಅಗ್ನಿಶಾಮಕ, ಪೊಲೀಸ್ ಇಲಾಖೆ ಅಧಿಕಾರಿಗಳು ಎಲ್ಲ ಅಗತ್ಯ ಕ್ರಮ ಕೈಗೊಂಡು ಸಹಕಾರ ಒದಗಿಸುವಂತೆ ಅವರು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಲಾಡಲಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ವಾಶೆಥಾನ್ ಪೋಸ್ಟರ್‌ನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಬದ್ರೂದ್ದಿನ ಸೌದಾಗರ, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ಬಸವರಾಜ ಕುಂಬಾರ, ನೆಹರು ಯುವ ಕೇಂದ್ರದ ಅಧಿಕಾರಿ ಡೋಂಗ್ರೆ, ಲಾಡಲಿ ಫೌಂಡೇಶನ್‌ನ ಡಾ.ಜಾವೇದ ಜಮಾದಾರ, ಸರಿತಾ ಚಕ್ರಸಾಲಿ, ಪ್ರೀತಿ, ರಜನಿ ಜಂಬಣ್ಣಿ, ಸುರೇಶ ಬಿಜಾಪುರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
