ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯಾ ಶ್ರೀಗಳ ಅಭಿಮತ
ಬಸವನಬಾಗೇವಾಡಿ: ಅಣ್ಣ ಬಸವಣ್ಣನವರು ಜಾತಿಯ ವಿಷಬೀಜವನ್ನು ಕಿತ್ತೆಸೆಯಲು ಹೋರಾಟ ಮಾಡಿದರು. ಅವರ ತತ್ವಗಳನ್ನು ಬೋದನೆ ಹಾಗೂ ಪೋಟೋ ಪೂಜೆ ಮಾಡುವಂತಹ ಭಕ್ತಿಯ ಜೊತೆಗೆ ಅವರ ಅವರ ತತ್ವ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದಾಗ ಮಾತ್ರ ಬಸವಣ್ಣನವರ ನಿಜವಾದ ಭಕ್ತನಾಗಲು ಸಾಧ್ಯ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯಾ ಶಿವಾಚಾರ್ಯರು ಹೇಳಿದರು.
ತಾಲೂಕಿನ ಕಣಕಾಲ ಗ್ರಾಮದ ಶ್ರೀ ಮಡಿವಾಳೇಶ್ವರಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಬಸವ ಪುರಾಣ ಮುಕ್ತಾಯ, ಶ್ರೀಶೈಲ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಸಭೆ ಸಮಾರಂಭದ ದಿವ್ಯಸಾನಿದ್ಯತೆ ವಹಿಸಿ ಮಾತನಾಡಿದರು.
ಅಣ್ಣ ಬಸವಣ್ಣನವರು ೧೨ ನೇ ಶತಮಾತನದಲ್ಲಿ ಎಲ್ಲ ಶರಣರೊಂದಿಗೆ ವಚನ ಸಾಹಿತ್ಯ ಮೂಲಕ ಸಾಮಾಜಿಕ ಕ್ರಾಂತಿಗೈದು ಮೇಲು ಕೀಳು ಎಂಬ ಜಾತಿಯನ್ನು ಹೊಗಲಾಡಿಸಲು ಪ್ರಯತ್ನಿಸಿದರು. ಅವರಂತೆ ನಾವು ಕೂಡಾ ಜಾತಿಯತೆ ಎಂಬ ವಿಷ ಬೀಜವನ್ನು ಹೊಗಲಾಡಿಸಲು ಪ್ರಯತ್ನಿಸಿ ಎಲ್ಲರು ಒಂದೆ ಎಂಬ ಮನೋಭಾವನೆಯನ್ನು ಹೊಂದಿದಾಗ ಮಾತ್ರ ಬಸವಣ್ಣನವರ ನಿಜವಾದ ಆದರ್ಶವನ್ನು ಅಳವಡಿಕೆ ಮಾಡಿಕೊಂಡಂತೆ ವಿನಹ: ಬರಿ ಭಾಷಣ ಮಾಡಿ ಜಾತಿಯ ಎಂಬ ವಿಷಬೀಜ ಬಿತ್ತುವಂತಹ ಕಾರ್ಯವಾದರೆ ಅದು ಬಸವಣ್ಣನವರ ತತ್ವಕ್ಕೆ ವಿರುದ್ದವಾಗಿ ನಡೆದಂತಲ್ಲವೆ? ಎಂದು ಪ್ರಶ್ನಿಸಿದರು.
ಗುರು-ವಿರಕ್ತ ಎಂಬ ಪರಂಪರೆ ಇವೆ ಅವೆರಡರ ಉದ್ದೇಶವು ಒಂದೆ ಸಮಾಜ ಉದ್ದಾರ ಮಾಡುವಂತಹ ಕೆಲಸವನ್ನೆ ಗುರು-ವಿರಕ್ತ ಪೀಠದ ಮಠಾಧೀಶರು ಮಾಡುತ್ತಿದ್ದಾರೆ. ಆದರೆ ಕೆಲವರು ಈ ವಿಷಯದಲ್ಲಿ ಗೊಂದಲ ಸೃಷ್ಠಿ ಮಾಡುತ್ತಿರುವುದಕ್ಕೆ ಸ್ಪಷ್ಠನೆ ನೀಡುತ್ತಿದ್ದೇವೆ ಎಂದರು.
ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಇಂದು ಬಹುತೇಕ ಜನರು ಶ್ರೀಮಂತರಾಗಿದ್ದಾರೆ. ಆದರೆ ಅವರಿಗೆ ನೆಮ್ಮದಿ ಬದುಕಿಗಾಗಿ ಮಠಗಳ ಆಶ್ರಯ ಅವಶ್ಯಕವಾಗಿದೆ. ಭಾರತದ ಸಂಸ್ಕಾರವನ್ನು ಪಂಚಪೀಠಗಳ ಕಾಪಾಡಿಕೊಂಡು ಬಂದಿವೆ ಎಂದರು.
ಬಸವನಬಾಗೇವಾಡಿಯ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಜಿ, ಕರಿಭಂಟನಾಳದ ಶಿವಕುಮಾರ ಸ್ವಾಮಿಜಿ, ದೇವರಹಿಪ್ಪರಗಿಯ ವೀರಗಂಗಾಧರ ಶಿವಾಚಾರ್ಯ ಸ್ವಾಮಿಜಿ, ಕಣಕಾಲದ ಘನಮಠೇಶ್ವರ ಸ್ವಾಮಿಜಿ ಮಾತನಾಡಿದರು.
ಗ್ರಾ.ಪಂ ಅಧ್ಯಕ್ಷೆ ಶರಣಮ್ಮ ಕುಂಬಾರ, ಉಪಾಧ್ಯಕ್ಷ ಸಂಗಪ್ಪ ಸಜ್ಜನ, ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಜಿ ಕೆ ದಿನ್ನಿ, ಬಸಲಿಂಗಪ್ಪ ಕುಂಬಾರ, ಶಿವಾನಂದ ಹುಲ್ಲೂರ, ಕಾಶಿನಾಥ ಸಜ್ಜನ, ರಾಜಶೇಖರ ಹುಲ್ಲೂರ, ಮಂತಯ್ಯ ಮಠಪತಿ ಸೇರಿದಂತೆ ಮುಂತಾದವರು ಇದ್ದರು.
“ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ೨೭ ಮಠಗಳಿವೆ. ಆ ಮಠಗಳು, ಮಠಾಧೀಶರು ಯಾರಿಗೆ ಒಲವು ತೋರಿ ಆಶಿರ್ವಾದ ಮಾಡುತಾರೋ ಅವರು ಎಂಎಲ್‌ಎ ಆಗುತ್ತಾರೆ ಎಂಬುದಕ್ಕೆ ಈ ಬಾರಿಯ ಶಾಸಕ ರಾಜುಗೌಡ ಪಾಟೀಲರ ಗೆಲುವೆ ಸಾಕ್ಷಿಯಾಗಿದೆ.”
– ಶ್ರೀ ಘನಮಠೇಶ್ವರ ಸ್ವಾಮಿಜಿ
ಕಣಕಾಲ, ಢವಳಗಿ

