ಇಲ್ಲಿನ ಗಜಾನನ ಮಹಾಮಂಡಳಿಗೆ ಇಸ್ಲಾಂ ಧರ್ಮದ ಮಹಿಬೂಬ ಮಸಳಿ ಅಧ್ಯಕ್ಷರು!
– ಗುರು ಹಿರೇಮಠ (ದೇವನಗಾಂವ)
ಆಲಮೇಲ: ಪಟ್ಟಣದ ವಿವಿಧ ಚೌಕಗಳ ಗಣೇಶ ಮೂರ್ತಿಗಳ ವಿಸರ್ಜನೆಗೆ ಸಿದ್ದತೆ ಭರ್ಜರಿಯಾಗಿ ನಡೆದಿದೆ.
ಪುಣೆ ಮಾದರಿ, ಮೈಸೂರಿನ ದಸರಾ ಮಾದರಿಯಲ್ಲಿ ಭವ್ಯ ಮೆರವಣಿಗೆ, ಅಬ್ಬರದ ಡಿಜೆ ಸೌಂಡಗಳ ಸದ್ದು ಜೋರಾಗಲಿದೆ. ಕೋಲಾಟ ಝಾಂಜ್‌ಪತಾಕ ಹಲಗೆ ಮೇಳ, ಕೊಂಬು ವಾದನ ಹತ್ತಾರು ಜಾನಪದ ತಂಡಗಳು ಮೆರವಣಿಗೆಯಲ್ಲಿ ಮೆರಗು ನೀಡಲು ಅಣಿಯಾಗುತ್ತಿವೆ.
ಇಲ್ಲಿಯ ಗಣೆಶ ವಿಸರ್ಜನೆ ಪ್ರಸಿದ್ದಿ ಪಡೆದಿದೆ. ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಆಂಧ್ರಪದೇಶ, ರಾಜ್ಯದ ಕಲಬುರಗಿ ಬಾಗಲಕೋಟೆ ಯಾದಗಿರಿ ಸೇರಿದಂತೆ ಅನೇಕ ಜಿಲ್ಲೆಗಳಿಂದ ಮತ್ತು ಸುತ್ತ-ಮುತ್ತಲಿನ ತಾಲೂಕು ಹಾಗೂ ಗ್ರಾಮಗಳಿಂದ ಗಣೇಶೋತ್ಸವ ನೋಡಲು ಜನರು ಆಗಮಿಸುತ್ತಾರೆ. ಈಗಾಗಲೇ ಗಣೇಶ ವಿಸರ್ಜನೆಗೆ ಸಿದ್ದತೆಗಳು ನಡೆಯುತ್ತಿವೆ.
ಇದೇ ಬುಧವಾರ ೫ನೇ ದಿನದ ಗಣಪತಿ ವಿಸರ್ಜನೆ ನಡೆಯುವುದರಿಂದ ಆಲಮೇಲದ ಅನೇಕ ಚೌಕ್ ದಿಂದ ಸ್ತಬ್ದ ಚಿತ್ರಗಳು ತಯಾರಿಯಾಗುತ್ತಿವೆ. ಸಂಜೆ ಹೊತ್ತಿಗೆ ಮೇರವಣಿಗೆ ಪ್ರಾರಂಭವಾಗಲಿದೆ.
ಪಟ್ಟಣದ ೧೫ ಗಣೇಶ ಮಂಡಳಿಗಳಿಗೆ ಒಂದು ಗಜಾನನ ಮಹಾಮಂಡಳ ರಚನೆಯಾಗುತ್ತದೆ. ಈ ಮಹಾಮಂಡಳಿಯ ಅಧ್ಯಕ್ಷರು ಇಸ್ಲಾಂ ಧರ್ಮದ ಮಹಿಬೂಬ ಮಸಳಿ ಆಗಿದ್ದಾರೆ.
ಕಲಾಕೃತಿಗಳ ಮೆರಗು: ವಿಸರ್ಜನೆ ಮೆರವಣಿಗೆಯಲ್ಲಿ ಅನೇಕ ಕಲಾಕೃತಿಗಳು ಗಮನಸೆಳೆಯಲಿವೆ. ಗಣೇಶ ನಗರದ ಮಂಡಳಿಯಿಂದ ಆದಿಶಕ್ತಿ ಅವತಾರ, ಬಸವ ನಗರ ದಿಂದ ಸಪ್ತಸಂಗಿತ, ಮುಳಮಠ ಮಂಡಳದ ವತಿಯಿಂದ ಶಿವಾಜಿಯ ಕೋಟೆ, ಭವಾನಿ ಮಂಡಳದಿಂದ ದೇವಿ ಅವತಾರ, ರಾಘವೆಂದ್ರ ಮಂಡಳದಿಂದ ಬಾಲ ರಾಮನ ಅವತಾರ, ಹನುಮಾನ ಮಂಡಳದಿಂದ ರಾವಣ ಅವತಾರ, ದತ್ತ ಮಂಡಳದಿಂದ ತುಳಜಾಪೂರ ಅಂಬಾಭವಾನಿಯ ದ್ವಾರ ಬಾಗಿಲು, ಕಾಮನ ಕಟ್ಟಿ ಮಂಡಳದಿಂದ ಪಾಂಡುರಂಗ ವಿಠಲ, ಲಕ್ಷ್ಮೀ ಮಂಡಳದಿಂದ ಧ್ಯಾಮವ್ವನ ಜಾತ್ರೆ, ವೀರಭದ್ರೇಶ್ವರ ಮಂಡಳದಿಂದ ಬೆಲ್ಲದ ಭಾಗೇವಾಡಿಯ ದ್ಯಾಮ್ಮವ್ವನ ಜಾತ್ರೆ, ಗಾಂಧಿ ಮಂಡಳದಿಂದ ಶಿವಾಜಿ ನಿಂತಿರುವ ದೃಶ್ಯ, ಸಾವಳಗಿ ಶಿವಲಿಂಗೇಶ್ವರ ಚೌಕನಿಂದ ಶೀವ ನಂದಿ ಹೀಗೆ ಅನೇಕ ಬಗೆಯ ಸನ್ನಿವೇಶಗಳ ಕಲಾಕೃತಿಗಳು ರಾರಾಜಿಸಲಿವೆ.
ಆಲಮೇಲದ ಪ್ರಮುಖ ರಸ್ತೆಗಳಲ್ಲಿ ರಾತ್ರಿ ಇಡೀ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ.

“ನಮ್ಮೂರಿನ ಗಣೇಶನಹಬ್ಬ ಬಹಳ ವಿಜ್ರಂಭಣೆಯಿಂದ ಆಚರಣೆಯಾಗುತ್ತದೆ. ಈ ವೈಭವ ನೋಡಲು ವಿವಿಧ ಊರಿನಿಂದ ಜನ ಆಗಮಿಸುತ್ತಾರೆ. ಬಹಳ ವಿಶೇಷವಾಗಿ ಇರುತ್ತದೆ.
– ಸಂಜೀವಕುಮಾರ ಬೊಗುಂಡಿ
ಯುವ ಮುಖಂಡರು

“ನಮ್ಮೂರಿನ ಗಣೇಶೋತ್ಸವದ ಸ್ಥಭ್ದ ಚಿತ್ರಗಳ ಮೇರವಣಿಗೆ ಅತಿ ವಿಜ್ರಂಬಣೆಯಿಂದ ನಡೆಯುವದು. ಮದುವಣಗಿತ್ತಿಯಂತೆ ಊರು ಸಿಂಗಾರಗೊಂಡು ನಿಂತಿದೆ.”
– ರಮೇಶ ಕಟ್ಟಿಮನಿ
ಗಣ್ಯ ವ್ಯಾಪಾರಸ್ತರು

