ಇಟ್ಟಂಗಿಹಾಳದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಜಿ.ಪಂ ಸಿಇಓ ರಿಷಿ ಆನಂದ ಸೂಚನೆ
ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ತಿಕೋಟಾ ತಾಲೂಕಿನ ಲೋಹಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಟ್ಟಂಗಿಹಾಳ ಗ್ರಾಮದ ಸರ್ಕಾರಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಂಗನವಾಡಿ ಕೇಂದ್ರದ ಆಕರ್ಷಣೀಯ ಮತ್ತು ಸುಸಜ್ಜಿತ ಕಟ್ಟಡ ಮತ್ತು ಮಕ್ಕಳ ಕಲಿಕೆ, ವಿವಿಧ ಕ್ರಿಯಾ ಚಟುವಟಿಕೆಗಳನ್ನು ವೀಕ್ಷಿಸಿದರು. ಅಲ್ಲಿರುವ ಮಕ್ಕಳೊಂದಿಗೆ ಸಂವಾದ ನಡೆಸಿ, ಮಕ್ಕಳಿಗೆ ವಿವಿಧ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಪಡೆದುಕೊಂಡರು. ಅಂಗನವಾಡಿ ಕೇಂದ್ರದ ಮಕ್ಕಳಿಗಾಗಿ ಸಿದ್ಧಪಡಿಸಿದ ಆಹಾರದ ಗುಣಮಟ್ಟವನ್ನು ಪರಿಶೀಲನೆ ನಡೆಸಿದರು. ಮಕ್ಕಳಿಗೆ ನಿರಂತರವಾಗಿ ಆರೋಗ್ಯ ತಪಾಸಣೆ ಕೈಗೊಳ್ಳಲು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಿದರು. ಬೋಧನಾ ಉಪಕರಣದಲ್ಲಿ ವೈವಿಧ್ಯತೆಯನ್ನು ಬಳಸಿಕೊಂಡು ಮಕ್ಕಳಲ್ಲಿ ಕ್ರಿಯಾತ್ಮಕ ಚಟುವಟಿಕೆ ಬೆಳೆಸಬೇಕು ಎಂದು ಹೇಳಿದರು.
ನಂತರ, ಅಂಗನವಾಡಿ ಕೇಂದ್ರದ ಒಳಾಂಗಣ ಅತ್ಯುತ್ತಮವಾಗಿ ನಿರ್ವಹಿಸಿದ್ದೀರಿ, ಅದೇ ರೀತಿ ಕೇಂದ್ರದ ಹೊರಾಂಗಣ ಆಟದ ಮೈದಾನವನ್ನೂ ಸಹ ಉತ್ತಮವಾಗಿ ಅಭಿವೃದ್ಧಿಪಡಿಸಿ, ಸ್ವಚ್ಛತೆಯಿಂದ ನಿರ್ವಹಣೆ ಮಾಡುವುದು. ಜೊತೆಗೆ ಆವರಣದಲ್ಲಿ ಲಭ್ಯವಿರುವ ಸ್ಥಳದಲ್ಲಿ ಚಿಕ್ಕ ಉದ್ಯಾನವನವನ್ನು ನಿರ್ಮಿಸುವುದು, ಕಟ್ಟಡಕ್ಕೆ ಸಂಪೂರ್ಣವಾಗಿ ಮಕ್ಕಳಿಗೆ ಆಕರ್ಷಣೀಯ ಚಿತ್ರಗಳನ್ನು ಬಿಡಿಸಿದ್ದು ಜೊತೆಗೆ ಕಿಟಕಿ-ಬಾಗಿಲಿಗೆ ಬಣ್ಣ ಮಾಡಿ ಆಕರ್ಷಕಗೊಳಿಸಬೇಕು. ಕೇಂದ್ರದಲ್ಲಿ ಮಕ್ಕಳಿಗೆ ವಿಭಿನ್ನವಾದ ಹಾಗೂ ಹೊಸ ಆಟಿಕೆ ಸಾಮಗ್ರಿಗಳನ್ನು ಖರೀದಿಸುವುದು ಹಾಗೂ ಈಗಾಗಲೇ ಇರುವ ಆಟಿಕೆ ಸಾಮಗ್ರಿಗಳು ಮಕ್ಕಳ ಕೈಗೆಟುಕುವಂತೆ ವ್ಯವಸ್ಥಿತವಾಗಿಡಲು ಅಲ್ಲಿನ ಅಧಿಕಾರಿಗಳಿಗೆ ಸೂಚಿಸಿದರು.
ಅಂಗನವಾಡಿಗೆ ಶೌಚಾಲಯ ಮತ್ತು ಕಂಪೌಂಡ್ ವ್ಯವಸ್ಥೆ ಕಲ್ಪಿಸಲು ಲಭ್ಯವಿರುವ ಯೋಜನೆ-ಅನುದಾನಲ್ಲಿ ಕಂಪೌಂಡ್, ಶೌಚಾಲಯ ಹಾಗೂ ಉದ್ಯಾನವನ ಹಾಗೂ ಹೊರಾಂಗಣ ಆಟದ ಮೈದಾನ ನಿರ್ಮಿಸಲು ಸ್ಥಳದಲ್ಲಿದ್ದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಿಕೋಟಾ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ, ಲೋಹಗಾಂವ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪದ್ಮಿನಿ ಬಿರಾದಾರ, ತಾಲೂಕು ನೋಡಲ್ ಅಧಿಕಾರಿ ಕಲ್ಯಾಣಶೆಟ್ಟಿ, ತಾಂತ್ರಿಕ ಸಹಾಯಕ ಅಭಿಯಂತರರಾದ ರೇಷ್ಮಾ ಬಾಗವಾನ, ಶ್ರೀಧರ ಸಾವಳಗಿ, ಅಂಗನವಾಡಿ ಕಾರ್ಯಕರ್ತೆ ಪ್ರಿಯಾಂಕಾ ರಾಠೋಡ ಸೇರಿದಂತೆ ಗ್ರಾಮ ಪಂಚಾಯತಿ,ಅಂಗನವಾಡಿ ಸಿಬ್ಬಂದಿ ಉಪಸ್ಥಿತರಿದ್ದರು.

