ಅಕ್ಕಮಹಾದೇವಿ ಮಹಿಳಾ ವಿವಿದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಪ್ರೊ.ಇನಾಮದಾರ ಅಭಿಮತ
ವಿಜಯಪುರ: ಇವತ್ತಿನ ತಂತ್ರಜ್ಞಾನ ಯುಗದಲ್ಲಿ, ಶಿಕ್ಷಕರು ಮುಂಬರುವ ಸವಾಲುಗಳನ್ನು ಎದುರಿಸಿ, ಹೊಸ ಹೊಸ ಬಗೆಯ ಬೋಧನಾ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕರು ನಿರಂತರವಾಗಿ ಕಲಿಕೆಯಲ್ಲಿ ತೊಡಗಿಸಿಕೊಂಡು, ತಮ್ಮ ವಿದ್ಯಾರ್ಥಿಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಮಾರ್ಗದರ್ಶನ ನೀಡಲು ಸಿದ್ಧರಾಗಿರಬೇಕು ಬಿಎಲ್‌ಡಿಇಯ ಸಹ ಕುಲಪತಿ ಪ್ರೊ.ಅರುಣ ಸಿ ಇನಾಮದಾರ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜ್ಞಾನ ಕೊಟ್ಟ ಶಿಕ್ಷಕರನ್ನು ನೆನೆಸುತ್ತಾ, ನಾವು ಹೇಗೆ ಜ್ಞಾನ ಪಡೆಯಬೇಕು ಎಂಬುದನ್ನು ಯೋಚಿಸಬೇಕು ಎಂದರು.
ಶಿಕ್ಷಕರ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು, ಸಮಾಜ ನಿರ್ಮಾಣದಲ್ಲಿ ಶಿಕ್ಷಕರು ಮಹತ್ವದ ಪಾತ್ರವನ್ನು ವಹಿಸುತ್ತಾರೆ ಎಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.
ಮನುಷ್ಯತ್ವ ಮತ್ತು ಸಂಸ್ಕಾರ ಕಲಿಸುವವರು ಶಿಕ್ಷಕರು ಮಾತ್ರ. ಸಮಾಜವನ್ನು ಎತ್ತರಕ್ಕೆ ಒಯ್ಯಲು ಗುರಿ ಮತ್ತು ಗುರು ಅವಶ್ಯಕ. ಕೇವಲ ಶಿಕ್ಷಕರ ದಿನಾಚರಣೆ ದಿನವೇ ಗುರುಗಳಿಗೆ ಗೌರವಿಸುವುದು ಅಲ್ಲ, ಪ್ರತಿ ದಿನವೂ ಶಿಕ್ಷಕರಿಗೆ ಗೌರವಕೊಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಮಾತನಾಡಿ, ಇಂದು ಶಿಕ್ಷಕರ ವೃತ್ತಿಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ ಒಂದು ವಿಶೇಷ ದಿನವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಜ್ಞಾನ ಅಭಿವೃದ್ಧಿ ಪಡಿಸುವುದರ ಜೊತೆಗೆ ಶಿಕ್ಷಕರು ಅಭಿವೃದ್ಧಿಯಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ನವರು ಸಮಾಜಮುಖಿ ಕಾರ್ಯಕ್ರ‍್ರಮಗಳಲ್ಲಿ ತೊಡಗಿಸಿಕೊಂಡಿರುವ ಪ್ರಾಧ್ಯಾಪಕರಾದ ಪ್ರೊ.ಓಂಕಾರ ಕಾಕಡೆ, ಪ್ರೊ.ಶಾಂತಾದೇವಿ ಟಿ, ಪ್ರೊ.ಲಕ್ಷ್ಮೀದೇವಿ ವೈ, ಪ್ರೊ.ಗಂಗಾಧರ ಸೋನಾರ ಮತ್ತು ಪ್ರೊ.ರೇಣುಕಾ ಮೇಟಿ ಅವರನ್ನು ಸನ್ಮಾನಿಸಿದರು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಪ್ರೊ.ರಾಜಕುಮಾರ್ ಮಾಲಿ ಪಾಟೀಲ್, ಡಾ.ನಟರಾಜ ದುರಗಣ್ಣನವರ, ಡಾ.ಶೀತಲ್‌ರಾಣಿ ಕವಳೆ ಮತ್ತು ಡಾ.ಚಂದ್ರಶೇಖರ ಮಠಪತಿ ಅವರಿಗೆ ಐಕ್ಯುಎಸಿಯಿಂದ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.
ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿನಿಯರು, ಸಂಶೋಧನಾ ವಿದ್ಯಾರ್ಥಿನಿಯರು ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಸಂಯೋಜಕ ಡಾ.ಚಂದ್ರಶೇಖರ ಮಠಪತಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ವಾಣಿಜ್ಯ ಅಧ್ಯಯನ ವಿಭಾಗದ ಡಾ.ಗಣೇಶ.ಎಸ್.ಆರ್ ಅತಿಥಿಗಳನ್ನು ಪರಿಚಯಿಸಿದರು. ಸಂಶೋಧನಾ ವಿದ್ಯಾರ್ಥಿನಿ ನಿಕಿತಾ ಚಿತವಾಡಗಿ ನಿರೂಪಿಸಿದರು. ಡಾ.ಬಾಬು ಲಂಬಾಣಿ ವಂದಿಸಿದರು.

