ಮುದ್ದೇಬಿಹಾಳ: ದೇಶದ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಲ್ಲಿ ನಮ್ಮ ದೇಶ ಇನ್ನಷ್ಟು ವೇಗವಾಗಿ ಅಭಿವೃದ್ಧಿ ಹೊಂದಬಹುದು ಎಂದು ಕುಂಟೋಜಿ ಸಂಸ್ಥಾನ ಭಾವೈಕ್ಯತಾ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ಅಭಿಪ್ರಾಯ ಪಟ್ಟರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಟಾಪ್-ಇನ್-ಟೌನ್ ಹಾಲ್ ನಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ, ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಶಿಕ್ಷಕರು ತಾವು ಪಡೆಯುವ ಸಂಬಳಕ್ಕೆ ನ್ಯಾಯಯುತವಾಗಿ ವಿದ್ಯಾರ್ಥಿಗಳನ್ನು ತಯಾರಿಸಬೇಕು. ಶಿಕ್ಷಣವನ್ನು ವ್ಯಾಪಾರವಾಗಿಸಿಕೊಳ್ಳಬಾರದು. ಶಿಕ್ಷಕರಾದವರು ಗರ್ವದಿಂದಿರಬಾರದು. ಶಿಕ್ಷಕರು ಗರ್ವದಿಂದ ಇದ್ದಲ್ಲಿ ವಿದ್ಯಾರ್ಥಿಗಳು ಸಹ ಗರ್ವದಿಂದ ನಡೆದುಕೊಳ್ಳುತ್ತಾರೆ ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿಷ್ಣು ಶಿಂಧೆ ಮಾತನಾಡಿ, ಶಿಕ್ಷಕರಾದವರು ಕಳೆದ ವರ್ಷದಿಂದ ಈ ವರ್ಷಕ್ಕೆ ನಾವು ನೀಡುತ್ತಿರುವ ಶಿಕ್ಷಣದಲ್ಲಿ ಏನು ಬದಲಾವಣೆ ಮಾಡಿಕೊಂಡಿದ್ದೇವೆ ಎಂಬ ಬಗ್ಗೆ ವಿಶ್ಲೇಷಣೆ ಮಾಡಿಕೊಳ್ಳುವ ದಿನ ಇದಾಗಿದೆ. ಶಿಕ್ಷಕರಲ್ಲಿ ಬದಲಾವಣೆ ಬರಬೇಕಾದರೆ ಶಿಕ್ಷಕರಿಗೆ ನೀಡುವ ಸಂಬಳದಲ್ಲಿ ಮೊದಲು ಬದಲಾವಣೆಯಾಗಬೇಕಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ೮೦ ನಿವೃತ್ತ್ತ ಶಿಕ್ಷಕರನ್ನು, ಅಕಾಲಿಕ ಮರಣಕ್ಕೆ ತುತ್ತಾದ ಶಿಕ್ಷಕರ ಕುಟುಂಬಸ್ಥರನ್ನು ಸನ್ಮಾನಿಸಿ ಗೌರವಿಸಲಾಯಿತು. ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವಾಯ್.ಕವಡಿ, ಶಿಕ್ಷಣ ಸಂಯೋಜಕ ಎಂ.ಕೆ.ಬಾಗವಾನ, ಕ.ರಾ.ಪ್ರಾ.ಶಾ ಸಂಘದ ಅಧ್ಯಕ್ಷ ಬಿ.ಎಚ್.ಮುದ್ನೂರ, ಕ.ರಾ.ಪ್ರೌ.ಶಾ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷ ಎಂ.ಎಸ್.ಕವಡಿಮಟ್ಟಿ, ಕ.ರಾ.ಪ್ರೌ.ಶಾ.ಸ.ಶಿ ಸಂಘದ ಅಧ್ಯಕ್ಷ ಬಸಯ್ಯ ಹಿರೇಮಠ, ಕ.ರಾ.ಪ್ರೌ.ಶಾ ಮುಖ್ಯೋಪಾದ್ಯಾಯರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಪಾಟೀಲ, ಅಲ್ಪ ಸಂಖ್ಯಾತರ ಸ.ನೌ.ಸಂ ಸಂಘದ ಅಧ್ಯಕ್ಷ ಎ.ಎಸ್.ಬಾಗವಾನ, ಎಸ್‌ಸಿ-ಎಸ್‌ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಎಂ.ತಮದಡ್ಡಿ ಸೇರಿದಂತೆ ಮತ್ತೀತರರು ಇದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮೇಶ ಶಿವಣಗಿ ತಂಡದವರು ಸಂಗೀತ ಸೇವೆ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ ಸ್ವಾಗತಿಸಿದರು. ಸಿಆರ್‌ಪಿಗಳಾದ ಸಿದ್ದನಗೌಡ ಬಿಜ್ಜೂರ, ಗುಂಡು ಚೌವ್ಹಾಣ ಮತ್ತು ಎಂ.ಡಿ.ಅಮರವಾಡಗಿ ಕಾರ್ಯಕ್ರಮ ನಿರ್ವಹಿಸಿದರು. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ವಂದಿಸಿದರು.
ಶಿಕ್ಷಣ ದಿನಾಚರಣೆ ಸಮಿತಿಯ ಅಧ್ಯಕ್ಷರಾಗಿದ್ದ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಸ್.ಮಸಳಿ ಹಾಗೂ ಉಪಾಧ್ಯಕ್ಷರಾಗಿದ್ದ ತಹಶೀಲ್ದಾರ ಬಲರಾಮ ಕಟ್ಟಿಮನಿ ಕಾರ್ಯಕ್ರಮದಲ್ಲಿ ಭಾಗಿಯಾಗದಿರುವುದು ಹಲವು ಶಿಕ್ಷಕರ ಬೇಸರಕ್ಕೆ ಕಾರಣವಾಗಿತ್ತು. ಅಧಿಕಾರಿಗಳು ಕೆಲಸದ ಒತ್ತಡದಲ್ಲಿದ್ದರೆ ತಮ್ಮ ಇಲಾಖೆಯಿಂದ ಯಾರನ್ನಾದರೂ ಕಳಿಸಬಹುದಾಗಿತ್ತು. ಶಿಕ್ಷಕರನ್ನು ಹಲವು ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿಗಳು ಈ ಬಾರಿ ನಮ್ಮನ್ನು ನಿರ್ಲಕ್ಷಿಸಿದರು ಎಂದು ನೋವು ತೋಡಿಕೊಂಡರು.

