– ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ನಾಡಿನಲ್ಲಿ ಶ್ರಾವಣ ಮಾಸದ ಮುಗಿದು ಭಾದ್ರಪದ ಮಾಸ ಆರಂಭವಾಗುತ್ತಿದ್ದಂತೆ ತಾಲೂಕಿನಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನರು ಅಗತ್ಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವುದು ಕಂಡುಬರುತ್ತಿದೆ.
ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಜಾಗೆಯನ್ನು ಸ್ವಚ್ಛಗೊಳಿಸುವದು. ಮಂಟಪ ಹಾಕಲು ಬೇಕಾದ ತಯಾರಿ, ಸಿದ್ಧತೆ ಭರದಿಂದ ಸಾಗಿದೆ. ಒಂದು ದಿನ ಕಳೆದರೆ ಸಾಕು ಶನಿವಾರವೇ ಗಣೇಶ ಚತುರ್ಥಿ ಹಬ್ಬ ಇರುವುದರಿಂದಾಗಿ ಗಣಪತಿ ಮೂರ್ತಿಗಳ ತಯಾರಕರು ಈಗಾಗಲೇ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಕೆಲವು ಮೂರ್ತಿಗಳು ಸಿದ್ದಗೊಂಡಿವೆ. ಗಣಪತಿ ಮೂರ್ತಿಗಳ ಖರೀದಿಸುವ ಗ್ರಾಹಕರ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.
ಹಬ್ಬಕ್ಕೆ ಅಗತ್ಯವಿರುವ ಮಂಟಪಗಳ ಅಲಂಕಾರಿಕ ವಸ್ತುಗಳು, ವಿವಿಧ ವಿನ್ಯಾಸದ ಅಲಂಕಾರಿಕ ವಿದ್ಯುತ್ದೀಪಗಳು ಸೇರಿದಂತೆ ವಿವಿಧ ವಸ್ತುಗಳು ಮಾರುಕಟ್ಟೆ ಲಗ್ಗೆ ಇಟ್ಟಿವೆ. ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವಲ್ಲಿ ನಿರತರಾಗಿದ್ದಾರೆ. ಗಣೇಶ ಚತುರ್ಥಿಯಂದು ಈ ವಸ್ತುಗಳ ಮಾರಾಟ ಭರಾಟೆ ಜೋರಾಗುತ್ತದೆ.
ಪಟ್ಟಣ ಸೇರಿದಂತೆ ಮನಗೂಳಿ, ಮುತ್ತಗಿ ಸೇರಿದಂತೆ ವಿವಿಧೆಡೆಗಳಲ್ಲಿ ಕೆಲವರು ಮಣ್ಣಿನ ಗಣಪತಿ ಮೂರ್ತಿಗಳನ್ನು ಕಳೆದ ಒಂದೂವರೆ ತಿಂಗಳಿಂದ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.
ತಾಲೂಕಿನ ಮನಗೂಳಿ ಪಟ್ಟಣದ ಭೀಮರಾವ ಕುಂಬಾರ, ಮುತ್ತಗಿಯ ಚಂದ್ರಕಾಂತ ಪತ್ತಾರ, ಬಸವನಬಾಗೇವಾಡಿಯ ಮೋಹನ ಬಡಿಗೇರ ಸೇರಿದಂತೆ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಕೂಡಿಕೊಂಡು ಕಳೆದ ಒಂದೂವರೆ ತಿಂಗಳಿನಿಂದ ಮಣ್ಣಿನ ಗಣಪತಿ ಮೂರ್ತಿಗಳ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಗಣಪತಿ ಮೂರ್ತಿ ತಯಾರಕರು ಮೂರ್ತಿಗಳ ತಯಾರಿಕೆಗೆ ಬೇಕಾದ ಮಣ್ಣನ್ನು ತಂದು ಅದನ್ನು ಹತ್ತಿಯೊಂದಿಗೆ ನೆನಸಿಟ್ಟು ಮಣ್ಣು ಹದಗೊಂಡ ನಂತರ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಳ್ಳುತ್ತಾರೆ.
ಮನಗೂಳಿಯ ಭೀಮರಾವ ಕುಂಬಾರ ಅವರು, ಕಳೆದ ಒಂದೂವರೆ ತಿಂಗಳಿನಿಂದಲೂ ಮಣ್ಣಿನ ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಅವರನ್ನು ಸಂಪರ್ಕಿಸಿದಾಗ ಇದುವರೆಗೂ ನಾನು ೧೦೦ ಮಣ್ಣಿನ ಮೂರ್ತಿಗಳನ್ನು ತಯಾರಿಸಿ ಅವುಗಳಿಗೆ ಬಣ್ಣ ಮಾಡಲಾಗಿದೆ. ಗಾತ್ರಕ್ಕೆ ತಕ್ಕಂತೆ ರೂ. ೧೦೦ ರಿಂದ ೧೫೦೦ ರವರೆಗೆ ಮಾರಾಟ ಮಾಡಲಾಗುವುದು. ಇಂದು ಬಹುತೇಕ ಕಡೆಗಳಲ್ಲಿ ಮಣ್ಣಿನ ಗಣಪತಿಕ್ಕಿಂತಲೂ ಪಿಓಪಿ ಗಣಪತಿಗಳಿಗೆ ಬಹಳ ಬೇಡಿಕೆಯಿರುವದರಿಂದಾಗಿ ನಾವು ತಯಾರಿಸಿದ ಗಣಪತಿಗಳು ಮಾರಾಟ ಮಾಡುವದು ಸ್ವಲ್ಪ ಕಷ್ಟವಾಗುತ್ತದೆ. ಆದರೂ ಕೆಲವರು ಈಗಾಗಲೇ ಗಣಪತಿ ಮೂರ್ತಿಗಳನ್ನು ತೆಗೆದುಕೊಂಡು ಹೋಗಲು ಹೆಸರು ಬರೆಸಿ ಹೋಗಿದ್ದಾರೆ. ಮಣ್ಣಿನಿಂದ ಬೃಹತ್ ಗಾತ್ರದ ಗಣಪತಿ ಮೂರ್ತಿ ತಯಾರಿಸಬಹುದು. ಆದರೆ ಅವುಗಳನ್ನು ತೆಗೆದುಕೊಂಡು ಹೋಗಲು ಕಷ್ಟವಾಗುತ್ತದೆ. ಅದಕ್ಕಾಗಿ ಬೃಹತ್ ಗಾತ್ರದ ಮೂರ್ತಿಗಳು ಪಿಓಪಿಗಳಲ್ಲಿ ತಯಾರಿಯಾಗುತ್ತಿರುವದು ಸಹಜವಾಗಿದೆ ಎಂದು ಅಭಿಪ್ರಾಯ ಪಟ್ಟರು.

“ನಮ್ಮ ತಂದೆಯ ಕಾಲದಿಂದಲೂ ಮಣ್ಣಿನ ಗಣಪತಿ ಮೂರ್ತಿಗಳನ್ನು ತಯಾರಿಸುವ ಕಾಯಕ ಮಾಡುತ್ತಾ ಬಂದಿದ್ದೇವೆ. ನಾನು ೪೦ ವರ್ಷಗಳಿಂದ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿದ್ದೇನೆ. ಬೃಹತ್ ಗಣಪತಿಗಳನ್ನು ಬೇರೆಡೆ ತಂದು ಮಾರಾಟ ಮಾಡುತ್ತೇವೆ. ಜನರಿಗೆ ಬೇಕಾದ ರೀತಿಯಲ್ಲಿ ಗಣಪತಿ ಮೂರ್ತಿಗಳನ್ನು ಮಾಡಿಕೊಡುತ್ತೇವೆ. ರೂ.೫೦ ರಿಂದ ೨೫,೦೦೦ ರವರೆಗೆ ಬೆಲೆಯ ಗಣಪತಿ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ.”
– ಚಂದ್ರಕಾಂತ ಪತ್ತಾರ, ಮುತ್ತಗಿ

