ಕಲಕೇರಿ: “ಬಡತನದ ಜೀವನದಾಗ ಸಾಲಿ ಕಲಿಬೇಕಂತ ನಮ್ಗ್ ಆಶೆ ರೀ, ಆದ್ರ ಸರ್, ನಾವು ದಿನಾಲೂ ಸಾಲಿಗೆ ಹೋಗಲು ಎರಡು ಕಿ.ಮೀ ನಡಿಬೇಕ್ರಿ, ರಸ್ತೆ ತುಂಬೆಲ್ಲಾ ನೀರ್ ರೀ, ಎಲ್ಲಿ ತೆಗ್ಗ ಹಾದ ಏನ್ರಿ ಒಂದು ಗೊತ್ತಾಗಲ್ಲರೀ, ಸ್ವಲ್ಪ ಕಾಲ ಜಾರಿದ್ರ ಮುಗಿತ್ರಿ ನಮ್ದು ಗತಿರೀ, ಹೇಗಾದರೂ ಮಾಡಿ ಸಾಲಿಗೆ ಬಂದಿವಿ ಅಂತ ಒಂದ ಕಡೆ ಧೈರ್ಯ ಬರ್ತಾದ ರೀ, ಸಾಲಿ ಬಿಟ್ಟಾಗ ಅದೇ ಕೆಸರು ಗದ್ದೆದಾಗ ಜೀವ ಕೈಯಾಗ ಹಿಡ್ಕೊಂಡ ಹೋಗಬೇಕಲ್ಲಾ ಅಂತ ಮತ್ತೊಂದು ಕಡೆ ಚಿಂತಿರೀ, ನಮ್ ಗೋಳ ಯಾರ ಕೇಳ್ತಾರೆ” ಎಂಬುದು ಇಲ್ಲಿಯ ವಿದ್ಯಾರ್ಥಿಗಳ ಅಳಲು.
ಹೌದು, ಆಲಗೂರ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳುವ ಮುಖ್ಯ ರಸ್ತೆ ಕೆಸರು ಗದ್ದೆಯಂತಾಗಿದ್ದು, ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲೆಗೆ ಹೋಗಲು ಹರಸಾಹಸ ಪಡುವಂತಾಗಿದೆ.
ಹುಣಚ್ಯಾಳ ಗ್ರಾಮ ಪಂಚಾಯಿತಿಗೆ ಒಳಪಡುವ ಆಲಗೂರ ಗ್ರಾಮ ಮೂಲ ಸಾಕರ್ಯಗಳಿಂದ ವಂಚಿತವಾಗಿದೆ. ಅಲಗೂರ ಕ್ರಾಸ್ ದಿಂದ ಅಲಗೂರ ಗ್ರಾಮದವರೆಗೆ ರಸ್ತೆ ಗುಂಡಿಗಳಿಂದ ಮಾರ್ಪಟ್ಟಿದೆ.
ನಿತ್ಯ ನೂರಾರು ವಿದ್ಯಾರ್ಥಿಗಳು ಇದೇ ರಸ್ತೆ ಮೂಲಕ ಶಾಲೆಗೆ ತೆರೆಳುತ್ತಿದ್ದಾರೆ. ಕೊಳಚೆ ನೀರು ರಸ್ತೆಯ ಮೇಲೆ ಸಂಗ್ರಹಗೊಳ್ಳುತ್ತಿದ್ದು, ರಸ್ತೆ ಕೆಸರು ಗದ್ದೆಯಾಗಿದೆ. ಆದರೆ ನೀರು ಬೇರೆಡೆ ಹೋಗಲು ಹಾಗೂ ರಸ್ತೆ ಅಭಿವೃದ್ಧಿಗೆ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿರುವುದು ನಾಚಿಕೆಯ ಸಂಗತಿಯಾಗಿದೆ.
ಕೂಡಲೇ ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.

“ಎರಡು ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದ ರಸ್ತೆ ತುಂಬೆಲ್ಲಾ ನೀರು, ಗುಂಡಿಗಳದೇ ದರ್ಬಾರ್ ರೀ, ಅಧಿಕಾರಿಗಳ ಗಮನಕ್ಕೆ ಇದ್ದರೂ ಕ್ಯಾರೇ ಅನುತ್ತಿಲ್ಲ, ಪ್ರತಿನಿತ್ಯ ವಿದ್ಯಾರ್ಥಿಗಳು ಸಂಚರಿಸುವ ರಸ್ತೆಯ ಗತಿ ಹೀಗಾಗಿದೆ, ಈಗಲಾದರೂ ಸಂಭಂದಪಟ್ಟ ಅಧಿಕಾರಿಗಳು ಗಮನ ಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು.”
– ಲಾಲಸಾಬ್ ಉಸ್ತಾದ
ಯುವ ಮುಖಂಡರು, ಹುಣಚ್ಯಾಳ

