ವಿಜಯಪುರ: ಜನರ ವಿಶ್ವಾಸ ಗಳಿಸಿ, ಜನಪ್ರಿಯವಾದ ಸರಕಾರದ ಕಾರ್ಯಚಟುವಟಿಕೆಗೆ ಅಡಿಗಡಿಗೂ ಅಡ್ಡಿ ಮಾಡುತ್ತಿರುವ ರಾಜ್ಯಪಾಲರ ಕ್ರಮ ರಾಜಕೀಯ ಪ್ರೇರಿತವಾಗಿದ್ದು, ಉಭಯ ಸದನಗಳಲ್ಲಿ ಅಂಗೀಕಾರವಾದ ಮಸೂದೆಗಳನ್ನು ವಾಪಸ್ ಮಾಡಿರುವ ರಾಜ್ಯಪಾಲರ ಕ್ರಮಕ್ಕೆ ವಿಧಾನ ಪರಿಷತ ಶಾಸಕ ಸುನೀಲಗೌಡ ಸೇರಿದಂತೆ 15 ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯಪಾಲರ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಜಂಟಿ ಪ್ರಕಟಣೆ ನೀಡಿರುವ ಕಾಂಗ್ರೆಸ್ ಶಾಸಕರಾದ ಸುನೀಲಗೌಡ ಪಾಟೀಲ, ಮಂಜುನಾಥ ಭಂಡಾರಿ, ಎಸ್. ರವಿ, ಅನಿಲ್ ಕುಮಾರ್, ರಾಜೇಂದ್ರ ರಾಜಣ್ಣ, ದಿನೇಶ್ ಗೂಳಿಗೌಡ, ಸುನಿಲಗೌಡ ಪಾಟೀಲ್, ಚಂದ್ರಶೇಖರ ಪಾಟೀಲ, ಚೆನ್ನರಾಜು, ಮಧು ಮಾದೇಗೌಡ, ಡಾ.ತಿಮ್ಮಯ್ಯ, ರಾಮೋಜಿ ಗೌಡ , ಡಿ. ಟಿ. ಶ್ರೀನಿವಾಸ, ಶರಣಗೌಡ ಪಾಟೀಲ, ಭೀಮರಾವ್ ಪಾಟೀಲ, ತಿಪ್ಪಣ್ಣಾ ಕಮಕನೂರು ಅವರು ರಾಜ್ಯಪಾಲರ ನಡೆಯ ಬಗ್ಗೆ ಧ್ವನಿ ಎತ್ತಿದ್ದಾರೆ.
ಆಗಸ್ಟ್ ತಿಂಗಳಲ್ಲಿ ರಾಜ್ಯಪಾಲರು ಆರು ಪ್ರಮುಖ ಮಸೂದೆಗಳನ್ನು ಹಿಂತಿರುಗಿಸಿದ್ದಾರೆ. ಒಟ್ಟು 11 ವಿಧೇಯಕಗಳನ್ನು ರಾಜ್ಯಪಾಲರು ವಾಪಸ್ ಕಳಿಸಿ ವಿರೋಧ ಪಕ್ಷದ ನಾಯಕರಂತೆ ವರ್ತಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಮಸೂದೆಗಳು ಅಂಗೀಕಾರವಾಗಿದ್ದರೂ ಕಾಯಿದೆಯಲ್ಲಿ ಲೋಪದೋಷಗಳಿದ್ದರೆ, ಸ್ಪಷ್ಟನೆ ಕೇಳುವ ಅಧಿಕಾರ ರಾಜ್ಯಪಾಲರಿಗಿದೆ. ಆದರೆ, ಪ್ರತಿಪಕ್ಷದವರು ವಿರೋಧಿಸಿದ್ದಾರೆ ಎಂಬ ಕಾರಣಕ್ಕೆ ಮಸೂದೆಗಳನ್ನು ವಾಪಸ್ ಕಳಿಸುವುದು ಸರಿಯಾದ ಕ್ರಮವಲ್ಲ. ಕಾಲಕಾಲಕ್ಕೆ ಕಾನೂನು ತಿದ್ದುಪಡಿ ಮಾಡುವ ಅವಕಾಶವನ್ನು ಸಂವಿಧಾನವೇ ನೀಡಿದೆ. ಜನಪ್ರತಿನಿಧಿಗಳು, ಬಹುಮತದ ಸರಕಾರ ಶಾಸನ ರೂಪಿಸುತ್ತದೆ. ಅದು, ಕೆಳಮನೆ, ಮೇಲ್ಮನೆಯಲ್ಲಿ ಚರ್ಚೆಯಾಗಿ ಅಂಗೀಕಾರವಾಗಬೇಕು. ಅದನ್ನು ರಾಜ್ಯಪಾಲರು ತಮ್ಮ ಅಂಕಿತದೊಂದಿಗೆ ಅಂಗೀಕರಿಸಬೇಕು, ನಂತರ ಕಾಯಿದೆ ಜಾರಿಯಾಗಬೇಕು ಎಂಬುದು ಕ್ರಮ. ಅದಕ್ಕೆ ಅಡ್ಡಿಪಡಿಸುವುದು ಸಮಂಜಸವಲ್ಲ. ಈ ರೀತಿ ಮಾಡುವುದರಿಂದ ಶಾಸಕ ಸಭೆಗಳ ಮಹತ್ವ ಕಡಿಮೆ ಆಗುತ್ತದೆ. ಒಕ್ಕೂಟದ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಇದರಲ್ಲಿ ರಾಜಕೀಯದ ದುರುದ್ದೇಶ ಕಾಣುತ್ತದೆ ಎಂದು ಶಾಸಕರು ಆರೋಪಿಸಿದ್ದಾರೆ.
ರಾಜ್ಯಪಾಲರು ಪಕ್ಷಪಾತ ಧೋರಣೆ ಅನುಸರಿಸಬಾರದು. ಉಭಯ ಸದನಗಳಲ್ಲಿ ಅಂಗೀಕಾರವಾರ ಮಸೂದೆಗಳಿಗೆ ಅಂಕಿತ ಹಾಕಿ ಸುಗಮ ಆಡಳಿತಕ್ಕೆ ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಜನರ ಆಶೋತ್ತರಗಳನ್ನು ಈಡೇರಿಸುವ ಸಲುವಾಗಿ ಅನಿವಾರ್ಯವಾಗಿ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಶಾಸಕರು ಎಚ್ಚರಿಕೆ ನೀಡಿದ್ದಾರೆ.
ಕಾನೂನು ಹೋರಾಟದ ಎಚ್ಚರಿಕೆ
ರಾಜ್ಯದಲ್ಲಿ ಏಕ ಕಾಲದಲ್ಲಿ 11 ಮಸೂದೆಗಳಿಗೆ ಅಡ್ಡಿಪಡಿಸುವ ಮೂಲಕ ರಾಜ್ಯಪಾಲರು ಕರ್ನಾಟಕದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಕೇರಳ, ಮಹಾರಾಷ್ಟ್ರ, ಪಂಜಾಬ್‌ನಲ್ಲಿ ಇದೇ ರೀತಿ ಧೋರಣೆಯನ್ನು ಅಲ್ಲಿನ ರಾಜ್ಯಪಾಲರು ಅನುಸರಿಸಿದ್ದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಸಮರ ಮಾಡಿ ಮಸೂದೆಗಳಿಗೆ ಅಂಗೀಕಾರ ಪಡೆಯಬೇಕಾಯಿತು. ಎಲ್ಲ ನಿರ್ಣಯಗಳೂ ಶಾಸನ ಸಭೆಯಲ್ಲೇ ಆಗಬೇಕು ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಹೀಗಾಗಿ ಕರ್ನಾಟಕದ ರಾಜ್ಯಪಾಲರು ಮತ್ತೊಮ್ಮೆ ತಮ್ಮ ನಿರ್ಧಾರಗಳನ್ನು ಮರುಪರಿಶೀಲಿಸಬೇಕು. ಸಂವಿಧಾನದ ರಕ್ಷಕರಾದ

