ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (KSCST),ಬೆಂಗಳೂರು ಹಾಗೂ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿಜಿಎಸ್ ತಾಂತ್ರಿಕ ಸಂಸ್ಥೆ ಬಿ.ಜಿ. ನಗರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ 49ನೇ ಸರಣಿ ವಿದ್ಯಾರ್ಥಿ ಯೋಜನಾ ಕಾರ್ಯಕ್ರಮ (SPP-2026) ಅಡಿಯಲ್ಲಿ 2026ರ ಜುಲೈ 17 ಮತ್ತು 18ರಂದು ನಡೆದ ರಾಜ್ಯಮಟ್ಟದ ಪೋಸ್ಟರ್ ಪ್ರಸ್ತುತಿ ಹಾಗೂ ಯೋಜನಾ ಪ್ರದರ್ಶನದಲ್ಲಿ ಬಿಎಲ್‌ಡಿಇ (ಡೀಮ್ಡ್ ವಿಶ್ವವಿದ್ಯಾಲಯ)ದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಜೈವಿಕ ತಂತ್ರಜ್ಞಾನ ಮತ್ತು ಸೂಕ್ಷ್ಮಜೀವಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರಾದ ಸುಪ್ರೀತಾ ಆಸ್ಕಿ ಮತ್ತು ರುಚಿತಾ ಕುಂದರಗಿ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಸಂಶೋಧನಾ ಪ್ರಶಸ್ತಿ ಲಭಿಸಿದೆ.
ವಿದ್ಯಾರ್ಥಿನಿಯರು “Assessment of Vitamin D Receptor Gene Expression in Gestational Diabetes Mellitus (GDM) Patient from North Karnataka” ಎಂಬ ಸಂಶೋಧನಾ ಯೋಜನೆಯನ್ನು ಡಾ. ಜಿ. ಎಸ್. ಕಡಕೋಳ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದರು. ರಾಜ್ಯದ ನಾನಾ ವಿಶ್ವವಿದ್ಯಾಲಯಗಳಿಂದ ಆಯ್ಕೆಯಾದ ಸಂಶೋಧನಾ ಯೋಜನೆಗಳ ನಡುವೆ ಇವರ ಯೋಜನೆ ಅತ್ಯುತ್ತಮ ಸಂಶೋಧನಾ ಯೋಜನೆಯಾಗಿ ಆಯ್ಕೆಯಾಗಿದ್ದು, ರಾಜ್ಯಮಟ್ಟದ ಪ್ರಶಸ್ತಿಯನ್ನು ಪಡೆದು ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿದೆ.
ವಿದ್ಯಾರ್ಥಿನಿಯರ ಈ ಸಾಧನೆಗೆ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯ ಕುಲಾಧಿಪತಿ ಬಸನಗೌಡ ಎಂ. ಪಾಟೀಲ, ಸಮಕುಲಾಧಿಪತಿ, ಡಾ. ವೈ. ಎಂ. ಜಯರಾಜ, ಕುಲಪತಿ, ಡಾ. ಅರುಣ ಇನಾಮದಾರ, ಕುಲಸಚಿವ, ಡಾ. ಆರ್. ವಿ. ಕುಲಕರ್ಣಿ, ವೈದ್ಯಕೀಯ ವಿಭಾಗದ ಡೀನ ಹಾಗೂ ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ, ಡೀನ ಅಲೈಡ ಹೆಲ್ತ ಸೈನ್ಸ, ಡಾ. ಎಸ್. ವಿ. ಪಾಟೀಲ ಅನ್ವಯಿಕ ವಿಜ್ಞಾನ ಮತ್ತು ತಂತ್ರಜ್ಞಾನ ಶಾಲೆಯ ಅಧ್ಯಾಪಕರು ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿ, ಮುಂದಿನ ಸಂಶೋಧನಾ ಕಾರ್ಯಗಳಿಗೂ ಇದೇ ರೀತಿಯ ಯಶಸ್ಸು ದೊರೆಯಲಿ ಎಂದು ಶುಭ ಹಾರೈಸಿದ್ದಾರೆ.

