ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಪ್ರೀತಿಯ ಐಶ್ವರ್ಯ
ತಂಗಾಳಿ ತೀಡುತ್ತಿದ್ದ ಚೆಂದದ ಮುಸ್ಸಂಜೆಯಲ್ಲಿ ಕಾಲೇಜಿನ ಸಾಂಸ್ಕೃತಿಕ ಸಮಾರಂಭದಲ್ಲಿ ನಿನ್ನಂದದ ವರ್ಷಧಾರೆ ಕಣ್ಣು ತುಂಬುತ್ತಿತ್ತು. ಶರತ್ಕಾಲದ ಪೂರ್ಣಚಂದಿರನ ನಾಚಿಸುವ ಮೊಗ, ಕೆಂದುಟಿಯಂಚಿನ ನಗು, ಶಿಲ್ಪಿ ಕೆತ್ತಿದ ಮೈಮಾಟ, ಕವಿಯ ಕಲ್ಪನೆಗೂ ಸಿಗದ ಅಪರೂಪದ ರೂಪ ರಾಶಿ ಅತ್ತಿಂದಿತ್ತ ಇತ್ತಿಂದಿತ್ತ ಓಡಾಡುತ್ತಿತ್ತು. ಬಂಗಾರದ ಮೈಬಣ್ಣಕ್ಕೆ ನವಿಲು ರಂಗಿನ ಮೈಸೂರು ಸಿಲ್ಕ್ ಸೀರೆಯುಟ್ಟು, ಬೆನ್ನಿಗೆ ತೋಳಿಗೆ ಡಿಸೈನ್ ಮಾಡಿಸಿದ ನೀಲಿಬಣ್ಣದ ರವಿಕೆ ತೊಟ್ಟಿದ್ದೆ. ಕೂದಲಿಗೆ ಫ್ರೆಂಚ್ ಜಡೆ ಹೆಣೆದು ಅಲ್ಲಲ್ಲಿಗೆ ಬೀಟ್ಸ್ ಹಾಕಿದ್ದೆ. ಕೈಯಲ್ಲಿ ಹಸಿರು ಚುಕ್ಕಿಯ ಬಳೆಗಳ ಕೊನೆಯಲ್ಲಿ ಹೊಳೆಯುವ ಬಂಗಾರ ಬಳೆಗಳ ಸದ್ದಿನೊಂದಿಗೆ ಬರುತ್ತಿದ್ದ ನಿನ್ನ ಕಂಡಾಗ ಒಂದು ಕ್ಷಣ ಮೈಮರೆತೆ. ಝುಳು ಝುಳು ಹರಿಯುವ ನದಿಯ ನಾದಕೆ, ನವಿಲು ಗರಿ ಬಿಚ್ಚಿ ಆಡುವ ಚೆಂದ ಕಣ್ಣಿಗೆ ಬೀಳುತ್ತಿತ್ತು. ಪ್ರೀತಿಗಾಗಿ ಕಾದ ನನ್ನ ಮನದ ಕುಲುಮೆಯಲ್ಲಿ ಬಗೆಬಗೆಯ ಬಯಕೆಗಳ ಚಿತ್ತಾರ ಮೂಡಿಸಿತ್ತು. ತುಟಿಯಂಚಿನ ಸವಿಯನ್ನು ಸವಿಯುತ್ತ ಕೈಬೆರಳು ಹಿಡಿದು ಜೊತೆಯಾಗಿ ಜೀವನಪೂರ್ತಿ ಸಾಗುವ ಹಂಬಲದ ಕನಸಿನ ಅರಮನೆ ಕಟ್ಟತೊಡಗಿತ್ತು ಹರೆಯದ ಹೃದಯ.
ನಿನ್ನ ಚೆಲುವಿನ ದರ್ಶನಕ್ಕೆ ಕಾಲೇಜಿನ ಹೈಕಳೆಲ್ಲ ಸ್ತಬ್ಧವಾಗಿ ನಿಂತಂತ್ತಿತ್ತು. ದುಂಬಿ ಹೂವನ್ನು ಕಾಡುವಂತೆ ನಿನ್ನನ್ನು ಕಾಡಬೇಕೆನಿಸಿತು. ಮಾತಾಡಿಸಲು ಹಪಹಪಿಸುವ ತುಡಿತ ಒಂದು ಕಡೆಯಾದರೆ ಯುಗಯುಗಗಳ ದಾಹ ತಣಿಸುವ ಅಮೃತ ನೀನು ಎಂದು ಹೇಳುತ್ತಿತ್ತು ಮನಸ್ಸು ಇನ್ನೊಂದೆಡೆ. ನಿನ್ನುಸಿರಿನ ಲಯದಲ್ಲಿ ನನ್ನುಸಿರು ಬೆರೆಯಬೇಕೆಂದು ಹೃದಯ ಬಡಿತ ತನ್ನ ಲಯ ತಪ್ಪಿಸಿಕೊಂಡು ಕುಣಿಯುತ್ತ ನುಡಿದಿತ್ತು. ನನ್ನ ರೆಪ್ಪೆಯಲ್ಲಿ ಅಡಗಿಸಿಕೊಂಡು ನಿನ್ನ ಕಾಯುವೆ ಎಂದಿತ್ತು ಕಣ್ಣು.
ನಿನ್ನ ಚೆಲುವಿನ ರೂಪ ಮನದ ಕನ್ನಡಿಯಲ್ಲಿ ಅಚ್ಚೊತ್ತಿ ನಿಂತಿತ್ತು. ಕೇಶರಾಶಿಯ ತಂಗಾಳಿಯಲ್ಲಿ ತೇಲುವ ಆಸೆ ಹೊತ್ತು ತಂದಿತ್ತು. ರಾತ್ರಿಯೆಲ್ಲ ನಿನ್ನದೇ ಜಪವಾದ್ದರಿಂದ ನಿದ್ರಾದೇವಿ ಹತ್ತಿರ ಸುಳಿಯಲೇ ಇಲ್ಲ. ಅದ್ಯಾವಾಗಲೋ ತಡವಾಗಿ ನನಗೆ ಗೊತ್ತಿಲ್ಲದೇ ಆವರಿಸಿಕೊಂಡಿದ್ದಳು ನಿದ್ರಾರಾಣಿ.. ಹೀಗಾಗಿ ಅಂದು ಏಳುವುದು ತಡವಾಯಿತು. ಯಾರೋ ಜೋರಾಗಿ ಬಾಗಿಲು ಬಡೆದ ಸದ್ದಿಗೆ ಎಚ್ಚರವಾಯಿತು. ದೃಷ್ಟಿ ಗೋಡೆಯ ಮೇಲಿದ್ದ ಗಡಿಯಾರದ ಮೇಲೆ ಬಿತ್ತು. ಮುಳ್ಳು ಆಗಲೇ ಒಂಭತ್ತು ಗಂಟೆ ತೋರುತ್ತಿತ್ತು. ಇನ್ನರ್ಧ ಗಂಟೆಯಲ್ಲಿ ನಿತ್ಯ ಕರ್ಮಗಳನ್ನು ಮುಗಿಸಿ ಕಾಲೇಜಿನಲ್ಲಿರಬೇಕೆಂದು ತಟ್ಟನೆ ಹಾಸಿಗೆಯಿಂದ ಎದ್ದೆ. ಗಡಿಬಿಡಿಯಲ್ಲಿ ಹಾಸ್ಟೆಲ್‌ನಲ್ಲಿ ಟಿಫನ್ ಮಾಡದೇ ಕಾಲೇಜಿನ ಕ್ಯಾಂಪಸ್ ಬಳಿಯಿದ್ದೆ.

ಅದೇ ಸಮಯದಲ್ಲಿ ಸುಂದರ ಪಾರಿವಾಳದಂತಿದ್ದ ನೀನು ಕಣ್ಣಿಗೆ ಬಿದ್ದೆ. ಸ್ಕೂಟಿಯಲ್ಲಿ ಬಂದಿದ್ದರಿಂದ ಹೆಲ್ಮೆಟ್ಟಿನಿಂದಾಗಿ ಕೂದಲು ಕೆದರಿತ್ತು. ಅವಸರವಸರವಾಗಿ ಮುಂದೆ ಬಂದೆ. ಅಲ್ಲೇ ನಿಂತಿದ್ದ ಕಾರಿನ ಗಾಜಿನಲ್ಲಿ ನಿನ್ನ ಬಿಂಬ ನೋಡುತ್ತ ದಟ್ಟವಾದ ಕಪ್ಪು ಕೇಶರಾಶಿ ಬಿಚ್ಚಿ ಮತ್ತೆ ಸರಿಯಾಗಿ ಕ್ಲಿಪ್ ಹಾಕಿದ್ದೆ. ಲೋಕವನ್ನೇ ಮರೆತಂತೆ ನಿನ್ನನ್ನು ನೋಡುತ್ತ ಕಳೆದುಹೋದೆ. ನೀನು ಮಾತ್ರ ಆತುರಾತುರವಾಗಿ ಕ್ಲಾಸಿನ ರೂಮಿನೊಳಕ್ಕೆ ಹೊಕ್ಕೆ. ನಿನ್ನನ್ನು ಹಿಂಬಾಲಿಸಿದ ನಾನೂ ಕ್ಲಾಸಿನಲ್ಲಿದ್ದೆ. ಅಂದಿನ ಪಾಠ ಎಲ್ಲ ತಲೆ ಮೇಲೆ ಹಾರಿಹೋಗಿತ್ತು. ಇಡೀ ಪಿರಿಯಡ್ ನಿನ್ನ ಮುಗ್ಧತೆಯ ಹಾವಭಾವ ಕದ್ದುಮುಚ್ಚಿ ನೋಡುವುದರಲ್ಲೇ ಕಳೆದಿದ್ದೆ. ನಡುವೆ ನೀನು ನನ್ನತ್ತ ಓರೆಗಣ್ಣಲ್ಲಿ ನೋಡಿದಾಗ ಹಾರ್ಟಬೀಟ್ ಆಕಾಶಕ್ಕೆ ಮುಟ್ಟಿತ್ತು. ‘ಕಳ್ಳ ಸಿಕ್ಕು ಬಿದ್ದ’ ಎಂದಂತಿದ್ದ ನಿನ್ನ ನೋಟ ಮುಖದಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು. ಅದು ಮೊದಲ ಅನುಭವವಾದರೂ ಅದರಲ್ಲಿ ಏನೋ ಒಂದು ಹಿತವಿತ್ತು. ಹೇಳಿಕೊಳ್ಳಲಾಗದ ಸಂತೋಷವಿತ್ತು.
ಪಿರಿಯಡ್ ಮುಗಿಯುವಷ್ಟರಲ್ಲಿ ಹತ್ತೂವರೆ ಹೊಡೆದಿತ್ತು. ಹೊಟ್ಟೆ ತಾಳ ಹಾಕುತ್ತಿತ್ತು. ಶನಿವಾರವಾದ್ದರಿಂದ ಕಾಲೇಜಿನ ಕ್ಯಾಂಟೀನಿಗೆ ಬೀಗ ಬಿದ್ದಿತ್ತು. ತುಂಟ ನಗು ಬೀರುತ್ತ ಅಕ್ಕರೆ ತೋರುತ್ತ, ’ನನಗೆ ಗೊತ್ತು ಆಕಾಶ ನೀವೂ ಟಿಫನ್ ಮಾಡಿಲ್ಲ. ಅಮ್ಮ ಇವತ್ತು ಇಡ್ಲಿ ಚಟ್ನಿ ಕಟ್ಟಿದ್ದಾರೆ. ಬನ್ನಿ ಕೂಡಿ ಟಿಫನ್ ಮಾಡೋಣ ಎಂದಾಗ ಆಕಾಶ ಮೂರೇಗೇಣು ಉಳಿದಿತ್ತು. ಹಸಿದ ಹೊಟ್ಟೆ, ಬಾಯಿಯಿಂದ ತುಂಬಾ ತುಂಬಾ ಧನ್ಯವಾದ ಎಂದು ಹೇಳಿಸಿತ್ತು. ಈ ನನ್ನ ಮನದರಸಿ ಹೀಗೆ ನನ್ನ ಜೊತೆಗೆ ಕೊನೆವರೆಗೂ ಬಾಳ ಗೆಳತಿಯಾದರೆ ಎಷ್ಟು ಸೊಗಸು ಎಂದು ಮನಸ್ಸು ಹೇಳಿತ್ತು. ಆದರೆ ಇದುವರೆಗೂ ನನ್ನ ಭಾವನೆಯನ್ನು ಎಂದೂ ನಿನ್ನ ಬಳಿ ಹೇಳದೇ ನಿನಗೆ ಗೊತ್ತಾಗುವುದಾದರೂ ಹೇಗೆ?

ನಿನಗೆ ಹೇಳದೇ ಕೇಳದೇ ನಾನು ಮಾತ್ರ ಹುಚ್ಚನಂತೆ ನಿನ್ನ ಪ್ರೀತಿಸುತ್ತಿದ್ದೆ. ನಿನ್ನ ನೋಡದಿದ್ದರೆ ಹುಚ್ಚು ಹಿಡಿದಂತೆ ಅನಿಸುತ್ತಿತ್ತು. ನೀನಿಲ್ಲದ ರವಿವಾರ ಒಂದು ಯುಗವನ್ನು ಕಳೆದಂತೆ ಅನಿಸುತ್ತಿತ್ತು. ನಿನ್ನ ನಗುವ ಸುಂದರ ಮೊಗವ ಕಾಣುವ ಭಾಗ್ಯ ಸೋಮವಾರ ಸಿಗುತ್ತಿತ್ತು ದೇಹ ಮಾತ್ರ ಹಾಸ್ಟೆಲಿನಲ್ಲಿ ಇರುತ್ತಿತ್ತು. ಹೃದಯ ನಿನ್ನ ಇರುವಿಕೆಯನ್ನು ಅನುಭವಿಸುತ್ತಿತ್ತು. ಕಣಕಣದಲ್ಲೂ ನೀನೇ ಬೆರೆತು ನನ್ನ ಉಸಿರಾಗಿ ಬಿಟ್ಟಂತೆ ಭಾಸವಾಗುತ್ತಿತ್ತು. ನೀನಿಲ್ಲದೇ ನಾನಿಲ್ಲ ಎಂಬ ನಿರ್ಧಾರಕ್ಕೆ ಮನಸ್ಸು ಬಂದಿತ್ತು. ನನ್ನೆದೆಯಲ್ಲಿ ನೀನು ಮನೆ ಮಾಡಿದ ವಿಷಯವನ್ನು ಪಾರ್ಕಿನಲ್ಲಿ ಭೇಟಿಯಾಗಿ ಹೇಳಿಬಿಡಬೇಕೆಂದು ಮನಸ್ಸು ಬಿಡದೇ ಕಾಯುತ್ತಿತ್ತು. ಸದಾ ನಿನ್ನದೇ ಯೋಚನೆಯಲ್ಲಿ ಕಳೆದು ಹೋಗಿರುತ್ತಿದ್ದ ನನ್ನ ಕಂಡ ಗೆಳೆಯರು ‘ಐಶು ಐಶೂ’ ಎಂದು ಕಾಲೆಳೆಯುತ್ತಿದ್ದರು.
ನೀನು ಪ್ರೀತಿಗೆ ಒಪ್ಪಿದ್ದು ನಿಧಿ ಸಿಕ್ಕಷ್ಟು ಖುಷಿ ತಂದಿತ್ತು. ನನ್ನಲ್ಲಿದ್ದ ಧೈರ್ಯವನ್ನೆಲ್ಲ ಒಟ್ಟುಗೂಡಿಸಿ ನಿನ್ನನ್ನು ಸಮುದ್ರ ತೀರಕೆ ಕರೆದಿದ್ದೆ. ಹೊಂಬಣ್ಣದ ಸಂಜೆ ಸಮುದ್ರದ ತೀರದ ಮರಳರಾಶಿಯಲ್ಲಿ ನಿನ್ನ ಹೆಜ್ಜೆಗಳನ್ನು ಅನುಸರಿಸುತ್ತಿದ್ದವು ಕಾಲುಗಳು. ಮೋಡಗಳ ಮರೆಯಿಂದ ಇಣುಕುತ್ತಿದ್ದ ಸೂರ್ಯನಂತೆ ನಿನ್ನ ತುಂಬಿದೆದೆಯ ಸೀಳು ಇಣುಕುತ್ತಿತ್ತು. ಆ ಕ್ಷಣ ಎದೆಯಲ್ಲಿ ಒಂದು ವಿನೂತನ ಪುಳಕ ಉಂಟಾಗಿತ್ತು. ಮೊದಲ ಸಲ ಹತ್ತಿರ ಬಂದಾಗ ಹೃದಯದ ಒಳಗೆ ಏನೋ ಹೊಸ ನಡುಕ ಉಂಟಾಗಿತ್ತು. ಕಣ್ಣುಗಳು ಕಲೆತಿದ್ದವು. ಇಬ್ಬರಿಗೂ ಅರಿವಿಲ್ಲದೇ ಕೈಬೆರಳುಗಳು ಹೆಣೆದುಕೊಂಡಿದ್ದವು. ಮೊದಲ ಸ್ಪರ್ಶದಲ್ಲಿ ನಾಚಿಕೆಯಿಂದ ಕಣ್ಣುಮುಚ್ಚಿದಾಗ ಹೊಸ ಲೋಕವೇ ತೆರೆದಂತಾಯಿತು.
ಜಗದ ಎಲ್ಲ ಯೋಚನೆಗಳು ಮರೆತು ಹೋದವು. ಇಬ್ಬರ ಉಸಿರು ಒಬ್ಬರಿಗೊಬ್ಬರಿಗೆ ತಾಕುತ್ತಿತ್ತು. ಕ್ರಮೇಣ ಇಬ್ಬರ ನಡುವಿನ ಅಂತರ ಕರಗಿತ್ತು. ಮೆಲ್ಲಗೆ ನೀ ಹೆಗಲ ಮೇಲೆ ಕೈ ಇಟ್ಟಾಗ ಕನಸುಗಳೆಲ್ಲ ನನಸಾದಂತೆ ಅನಿಸಿತು. ಸಂಜೆ ಚಂದಿರ ನಮ್ಮಿಬ್ಬರ ನೋಡಿ ನಗುತ್ತಿದ್ದ. ತಂಗಾಳಿಯು ಇಬ್ಬರನ್ನು ಮತ್ತಷ್ಟು ಸನಿಹ ತಂದಿತ್ತು. ನಾಚಿಕೆಯಿಂದ ಕೆಂಪೇರಿದ ಕೆನ್ನೆಯನ್ನು ನವಿರಾಗಿ ಸವರಿದೆ. ಆಗ ಇಬ್ಬರ ಎದೆಯ ಬಡಿತ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಮೆಲ್ಲನೆ ಹೆಜ್ಜೆ ಇಟ್ಟು ಕಣ್ಣು ಮುಚ್ಚಿ ಎದೆಗೆ ಒರಗಿದಾಗ ಮೈಯಿಂದ ಸೂಸಿದ ಮುಡಿದ ಮಲ್ಲೆಯ ಸುವಾಸನೆ ನನ್ನನ್ನು ಆವರಿಸಿತು. ಅಧರಗಳ ಮೇಲಿನ ತೇವ ನೋಡುತ್ತಿದ್ದರೆ ತಡೆಯಲಾರದೇ ಸಿಹಿದುಟಿಗಳಿಗೆ ಬಿಡದೇ ಮುತ್ತಿಕ್ಕಬೇಕೆನಿಸಿತ್ತು. ಮೊದಲ ಚುಂಬನದ ಬಿಸಿಗೆ ಇಬ್ಬರ ದೇಹದಲ್ಲಿ ಸಣ್ಣದೊಂದು ನಡುಕ ತಾನಾಗಿಯೇ ಮೂಡಿತ್ತು. ಮಾತಿಲ್ಲದ ಆ ಪ್ರೀತಿ ಕಂಡು ದೂರದ ಚಂದಿರ ನಾಚಿ ನಗುತ್ತಿದ್ದ.
ಮೊದಲ ಸಲದ ಚುಂಬನ ಸವಿದು ನಾಲ್ಕು ವರ್ಷಗಳೇ ಕಳೆದಿವೆ. ಇಬ್ಬರೂ ಈಗ ಕೆಲಸದಲ್ಲಿದ್ದೇವೆ. ಮನೆಯಲ್ಲಿ ಮದುವೆಗೆ ಹಸಿರು ನಿಶಾನೆ ಸಿಕ್ಕು ದಾಂಪತ್ಯ ಬಂಧನದಲ್ಲಿ ಬಂಧಿಯಾಗಲು ತುದಿಗಾಲಲ್ಲಿದ್ದೇವೆ. ಸುಖ ದುಃಖಗಳ ಆಚೆಗಿನ ದಾಹ ತಣಿಸುವ ಪ್ರೇಮ ಲೋಕದಲ್ಲಿ ತೇಲುವಾಸೆ. ನಿನ್ನ ಹೆಗಲ ಮೇಲಿನ ಸುಖದ ಸುಪ್ಪತ್ತಿಗೆಯಲ್ಲಿ ನನ್ನನ್ನು ನಿನ್ನಲ್ಲಿ ಕಳೆದುಕೊಳ್ಳುವ ಆಸೆ ತೀವ್ರಗೊಳ್ಳುತ್ತಿದೆ. ನಿನ್ನ ಪಾದದ ಧೂಳಿಗೆ ಹೂಗನಸುಗಳ ಹಾಸಿ, ನಿನ್ನ ಸೌಂದರ್ಯದ ಮಹಾಸಾಗರದಲ್ಲಿ ಸಂಪೂರ್ಣವಾಗಿ ಮುಳುಗಿ ಮರಳಿ ದಡ ಸೇರದಂತೆ ಕರಗಿಹೋಗಬೇಕೆಂಬ ಹಂಬಲ ಹೆಚ್ಚಾಗುತ್ತಿದೆ. ಪ್ರಥಮ ಮಿಲನದ ಶುಭ ಮುಹೂರ್ತದಲ್ಲಿ ನಾಚಿಕೆಯ ಮುಸುಕಿನಲ್ಲಿ ನೀ ಕರಗುತಿರಲು ಹೃದಯ ವೀಣೆ ತಾನೇ ಮಿಡಿದು ಮೌನವೇ ಪ್ರೇಮಕಾವ್ಯ ನುಡಿಸುವ ಸುಂದರ ಕ್ಷಣಕ್ಕೆ ಕಾಯುತ್ತಿದ್ದೇನೆ ಬಂದು ಬಿಡು ಬೇಗ..
ಇಂತಿ ನಿನ್ನ ಪ್ರೀತಿಯ
ಆಕಾಶ


