ಉದಯರಶ್ಮಿ ದಿನಪತ್ರಿಕೆ
ಇಂಡಿ: ನಗರದ ಹೊಸೂರು ಕುಟುಂಬದ ವತಿಯಿಂದ ಹಜ್ ಯಾತ್ರೆ ನೆರವೇರಿಸಿ ಮರಳಿದ ಯಾತ್ರಿಕರು ಹಾಗೂ ನಿವೃತ್ತ ಶಿಕ್ಷಕರಿಗೆ ಆತ್ಮೀಯ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ನಗರದ ಶಿಕ್ಷಕ ಅಬುತಾಲಿಬ್ ಹೊಸೂರು ಅವರು ಕಳೆದ ಮೂವತ್ತು ವರ್ಷಗಳಿಂದ ಇಂಡಿ ನಗರದಿಂದ ಹಜ್ ಯಾತ್ರೆ ನೆರವೇರಿಸಿ ಬಂದ ಹಾಜಿಗಳನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಊಟೋಪಚಾರ ನೀಡಿ, ಸನ್ಮಾನಿಸುವ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಈ ವರ್ಷವೂ ಅದೇ ಸಂಪ್ರದಾಯದಂತೆ ಹಜ್ ಯಾತ್ರಿಕರಿಗೆ ಗೌರವ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿವೃತ್ತರಾದ ಶಿಕ್ಷಕರನ್ನೂ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮೌಲಾನಾ ಜಿಯಾವುಲ್ ಹಕ್ ಉಮರಿ ಅವರು, “ಹೊಸೂರು ಕುಟುಂಬವು ಪ್ರತಿವರ್ಷ ಹಜ್ ಯಾತ್ರಿಕರನ್ನು ಗೌರವಿಸುವ ಕಾರ್ಯವನ್ನು ನಿಸ್ವಾರ್ಥವಾಗಿ ನಡೆಸಿಕೊಂಡು ಬರುತ್ತಿದೆ. ಹಜ್ ಇಸ್ಲಾಂ ಧರ್ಮದ ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿದ್ದು, ಆರ್ಥಿಕವಾಗಿ ಸಾಮರ್ಥ್ಯವಿರುವ ಪ್ರತಿಯೊಬ್ಬ ಮುಸ್ಲಿಮರ ಮೇಲೂ ಅದು ಕಡ್ಡಾಯವಾಗಿದೆ. ಹಜ್ ನೆರವೇರಿಸಿ ಮರಳಿದವರು ಹೊಸ ಜೀವನ ಆರಂಭಿಸಿದಂತಾಗುತ್ತದೆ. ಅಂತಹ ಯಾತ್ರಿಕರನ್ನು ಮನೆಗೆ ಆಹ್ವಾನಿಸಿ ಊಟೋಪಚಾರ ನೀಡಿ ಸನ್ಮಾನಿಸುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಬುತಾಲಿಬ್ ಹೊಸೂರು, ಮಹಿಬೂಬ್ ಗೌಂಡಿ, ಶಿಕ್ಷಕರ ಸಂಘದ ಅಧ್ಯಕ್ಷ ಅಲ್ತಾಫ್ ಬೋರಮಣಿ, ಅಲ್ಲಾಬಕ್ಷ ವಾಲೀಕಾರ, ಅಸ್ಲಾಂ ಪಟೇಲ್, ಬಾಬುಲಾಲ್ ಮುಜಾವರ್, ಇಲಿಯಾಸ್ ಬೋರಮಣಿ, ಹಸನ್ ಮುಜಾವರ್, ಬಶೀರ್ ಇನಾಮದಾರ್, ಇಸಾಕ್ ಮುಲ್ಲಾ, ಟಿಪ್ಪು ಸುಲ್ತಾನ್ ಹೊಸೂರು, ಅಲ್ಫಾಜ್ ಹೊಸೂರು, ರಫೀಕ್ ಬೋರಮಣಿ, ರಸೂಲ್ ಶೇಖ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

