ಮುದ್ದೇಬಿಹಾಳ: ಸನ್ಮಾನಗಳು ಸಾಧಕರಿಗೆ ನೀಡುವ ಕಿರೀಟಗಳಲ್ಲ. ಅವರ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಸನ್ಮಾನ ಸ್ವೀಕರಿಸಿದ ವ್ಯಕ್ತಿಯ ಸಮಾಜಮುಖಿ ಕಾರ್ಯಗಳು ಇತರರಿಗೆ ಮಾದರಿಯಾಗಬೇಕೆ ಹೊರತು ಮಾರಕವಾಗಬಾರದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಉದ್ಯಾನವನದಲ್ಲಿ ಹಸಿರು ತೋರಣ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಹಸಿರು ತೋರಣ ಬಳಗದ ಸಂಘಟಿತ ಪ್ರಯತ್ನದಿಂದಾಗಿ ಪಟ್ಟಣದಲ್ಲಿ ಉದ್ಯಾನವನಗಳು ಜೀವಂತವಾಗಿವೆ. ಪಟ್ಟಣದ ಹಲವು ಸ್ಥಳಗಳು, ರಸ್ತೆಗಳಲ್ಲಿ ಸುಂದರವಾದ ಗಿಡಗಳು ಬೆಳೆಯುವಂತೆ ಬಳಗ ಕೆಲಸ ಮಾಡುತ್ತಿದೆ. ಕೆರೆ ಸುತ್ತಮುತ್ತಲಿನ ಆವರಣದಲ್ಲಿ ಸ್ವಚ್ಛಗೊಳಿಸುವ ಕೆಲಸ, ತಾಲ್ಲೂಕು ಆಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರೂರ ಗುಡ್ಡದಲ್ಲಿ ಗಿಡಗಳನ್ನು ನೆಡಲು ಸಹ ಬಳಗ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಇದೇ ವೇಳೆ ಮತ್ತೋರ್ವ ಸನ್ಮಾನಿತ ದಿ ಕರ್ನಾಟಕ ಕೋ.ಆಪ್ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿದರಕುಂದಿ ಮಾತನಾಡಿ, ಸಾರ್ವಜನಿಕರು ಮಾಡುವ ಸನ್ಮಾನಗಳು ನಮ್ಮನ್ನು ಅಹಂಕಾರದಿಂದ ಬೀಗುವಂತೆ ಮಾಡದೇ ಸಮಾಜಕ್ಕೆ ಇನ್ನಷ್ಟು ಏನಾದರೂ ಕೊಡುಗೆ ನೀಡುವ ಹೆಚ್ಚಿನ ಜವಾಬ್ದಾರಿ ನೆನಪಿಸುತ್ತವೆ. ಹಸಿರು ತೋರಣ ಬಳಗದ ಸದಸ್ಯರ ನಿರಂತರ ಪ್ರಯತ್ನದಿಂದಾಗಿ ಮುದ್ದೇಬಿಹಾಳ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಒಳ್ಳೆಯ ಪರಿಸರ ಸ್ನೇಹಿ ವಾತಾವರಣ ನಿರ್ಮಾಣವಾಗಿದೆ. ಬಳಗದ ಸದಸ್ಯರ ನಿಸ್ವಾರ್ಥ ಸೇವೆ ಎಲ್ಲರಿಗೂ ಮಾದರಿಯಾಗಿವೆ ಎಂದರು.
ಸಭೆಯಲ್ಲಿ ತಾಲ್ಲೂಕು ವೈದ್ಯರ ಸಂಘದ ಅಧ್ಯಕ್ಷರಾಗಿ ನೇಮಕಗೊಂಡ ಡಾ.ವಿಜಯಕುಮಾರ್ ಗೂಳಿ, ಪುರಸಭೆ ನಾಮನಿರ್ದೇಶಿತ ಸದಸ್ಯರಾದ ಗೋಪಿ ಮಡಿವಾಳರ, ಸಂತೋಷ ನಾಯ್ಕೋಡಿ, ಹರೀಶ್ ಬೇವೂರ, ಅಶೋಕ ಪಾದಗಟ್ಟಿ, ಲಲಿತಾ ಇಲಕಲ್ಲ ಹಾಗೂ ಶ್ರೀ ಸಂಗಮೇಶ್ವರ ಬ್ಯಾಂಕ್ ನೂತನ ಅಧ್ಯಕ್ಷ ರಾಮನಗೌಡ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಡಾ.ವೀರೇಶ ಇಟಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಸಿರು ತೋರಣ ಗೆಳೆಯರ ಬಳಗದ ಮಾಜಿ ಅಧ್ಯಕ್ಷ ಕೆ.ಆರ್.ಕಾಮಟೆ, ಅಶೋಕ ರೇವಡಿ, ಬಿ.ಎಸ್.ಮೇಟಿ, ರವಿ ಗೂಳಿ, ರಾಜಶೇಖರ ಕಲ್ಯಾಣಮಠ, ಕಾರ್ಯದರ್ಶಿ ಬಿ.ಎಚ್.ಬಳಬಟ್ಟಿ, ಉಪಾಧ್ಯಕ್ಷ ಬಸವರಾಜ ಬಿಜ್ಜೂರ, ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ, ತಾಲ್ಲೂಕು ಪಂಚಾಯತ ಮಾಜಿ ಸದಸ್ಯ ಶ್ರೀಶೈಲ ಮರೋಳ, ಮಲ್ಲಿಕಾರ್ಜುನ ಬಾಗೇವಾಡಿ, ಸುರೇಶ ಕಲಾಲ, ಅಮರೇಶ ಬಾಗೇವಾಡಿ, ಜಿ.ಎಂ.ಹುಲಗಣ್ಣಿ, ಬಿ.ಎಂ.ಪಲ್ಲೇದ, ವೀರೇಶ ಹಂಪನಗೌಡ್ರ, ರವಿ ತಡಸದ, ಡಾ.ಸಿ.ಕೆ.ಶಿವಯೋಗಿಮಠ, ವಿಲಾಸ ದೇಶಪಾಂಡೆ, ಬಿ.ಎ.ನಾಡಗೌಡ, ವೀರೇಶ ಢವಳಗಿ, ಪುಟ್ಟು ಕಡಕೋಳ, ವಿಶ್ವನಾಥ ನಾಗಠಾಣ, ಅಕ್ಕಮ್ಮ ಕೂಡಗಿ, ವಿನಯ ಹಿರೇಮಠ ಸೇರಿದಂತೆ ಮತ್ತಿತರರು ಇದ್ದರು.
ಬಳಗದ ಮಾಜಿ ಅಧ್ಯಕ್ಷ ನಾಗಭೂಷಣ ನಾವದಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಮಹಾಬಲೇಶ್ವರ ಗಡೇದ ನಿರೂಪಿಸಿದರು. ಕಾರ್ಯದರ್ಶಿ ಬಿ.ಎಚ್.ಬಳಬಟ್ಟಿ ವಂದಿಸಿದರು.
” ಮುಂದಿನ ವಾರವೇ ಕನ್ನಡ ಸಾಹಿತ್ಯ ಅಭಿಮಾನಿಗಳ ಸಭೆ ಕರೆದು ಎಲ್ಲರ ಅಭಿಪ್ರಾಯ ಪಡೆದು ಕನ್ನಡದ ಸಾಹಿತ್ಯದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತೇನೆ. ಕನ್ನಡದ ತೇರು ಎಳೆಯಲು ಎಲ್ಲರೂ ಕೈ ಜೋಡಿಸಿ.”
– ಕಾಮರಾಜ ಬಿರಾದಾರ
ಕಸಾಪ ಅಧ್ಯಕ್ಷರು, ಮುದ್ದೇಬಿಹಾಳ

