ವಿಜಯಪುರ: ಆಲಮಟ್ಟಿ ಆಣೆಕಟ್ಟು ಅಡಿ ಬರುವ ಆಲಮಟ್ಟಿ ಎಡದಂಡೆ ಕಾಲುವೆ, ಚಿಮ್ಮಲಗಿ ಪಶ್ಚಿಮ ಕಾಲುವೆ, ಆಲಮಟ್ಟಿ ಬಲದಂಡೆ ಕಾಲುವೆ, ತಿಮ್ಮಾಪೂರ ಏತ ನಿರಾವರಿ ಯೋಜನೆ ಮತ್ತು ಮರೋಳ ಏತ ನೀರಾವರಿಗೆ ಯೋಜನೆಗಳಿಗೆ ಮುಂಗಾರು ಹಂಗಾಮಿಗೆ ೧೨೦ ದಿನಗಳ ಕಾಲ ನೀರು ಬಿಡುಗಡೆಗೊಳಿಸಲು ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಆಣೆಕಟ್ಟು ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ಅಬಕಾರಿ ಸಚಿವರೂ ಆದ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಆರ್.ಬಿ.ತಿಮ್ಮಾಪುರ ಅವರ ಅಧ್ಯಕ್ಷತೆಯಲ್ಲಿ ಜುಲೈ ೧೬ ರಂದು ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಮುಂಗಾರು ಹಂಗಾಮಿ ಜುಲೈ ೧೭ ರಿಂದ ನವೆಂಬರ್ ೧೩ರವರೆಗೆ ೧೨೦ ದಿನಗಳ ಕಾಲ ನೀರು ಹರಿಸಲಾಗುತ್ತಿದ್ದು, ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಇರುವಾಗ, ನಿರಂತರ ನೀರು ಹರಿಸುವುದು, ಜಲಾಶಯದಲ್ಲಿ ಒಳಹರಿವು ಕ್ಷೀಣಿಸುತ್ತಿರುವ ಪೂರ್ವದಲ್ಲಿ, ಚರ್ಚಿಸಿ ವಾರಾಬಂದಿ ಅನುಷ್ಠಾನ ಕುರಿತು ಕ್ರಮ ವಹಿಸಲು ನಿರ್ಧರಿಸಲಾಗಿದೆ.
ನೀರು ಬಿಡುವ ಸಂದರ್ಭದಲ್ಲಿ ಕಾಲುವೆ ಜಾಲದ ಗೇಟ್‌ಗಳನ್ನು ಹಾನಿ ಮಾಡುವುದು, ಎಸ್ಕೇಪಗಳ ಮೂಲಕ ಹಳ್ಳಕ್ಕೆ ನೀರು ಹರಿಸುವುದು, ಸೈಪನಗಳ ಮೂಲಕ ಮಣ್ಣಿನ ಏರಿಯಲ್ಲಿ ನೀರನ್ನು ಎತ್ತಿಕೊಳ್ಳುವುದು, ಕಾಲುವೆ ಜಾಲದಲ್ಲಿ ಪಂಪುಗಳ ಮೂಲಕ ನೀರನ್ನು ಎತ್ತುವುದನ್ನು ನಿರ್ಬಂಧಿಸಲಾಗಿದೆ. ಇಂತಹ ಘಟನೆ ಕಂಡು ಬಂದಲ್ಲಿ ಸಂಬಂಧಿಸಿದವರೆ ಮೇಲೆ ಕರ್ನಾಟಕ ನೀರಾವರಿ ಕಾಯೆ ೧೯೬೫ರನ್ವಯ ಕ್ರಮ ಕೈಗೊಳ್ಳಲಾಗುವುದು. ರೈತರು ಕೃಷ್ಣಾ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ಪ್ರದೇಶದಲ್ಲಿ ೧೨೦ ದಿನಗಳಲ್ಲಿ ಬರುವ ಲಘು ನೀರಾವರಿ ಬೆಳೆಗಳನ್ನು ಮಾತ್ರ ತಮ್ಮ ಕ್ಷೇತ್ರದ ೮೦ ಪ್ರತಿಶತ ಕ್ಷೇತ್ರಕ್ಕೆ (೬೫ ಪ್ರತಿಶತ ಮುಂಗಾರು ಹಾಗೂ ೧೫ ಪ್ರತಿಶತ ದ್ವಿಋತು) ಬೆಳೆಯಲು ವಿನಂತಿಸಲಾಗಿದ್ದು, ಕಬ್ಬು, ಬಾಳೆ ಮತ್ತು ಭತ್ತದ ಬೆಳೆಗಳನ್ನು ನೀರಾವರಿ ಆಶ್ರಯದಲ್ಲಿ ಬೆಳೆಯುವುದನ್ನು ನಿಷೇಧಿಸಲಾಗಿದ್ದು, ರೈತರು ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸುವ ಮೂಲಕ ಕೃಷ್ಣಾ ಭಾಗ್ಯ ಜಲ ನಿಗಮದೊಂದಿಗೆ ಸಹಕರಿಸುವಂತೆ ಕೃಷ್ಣಾ ಭಾಗ್ಯ ಜಲ ನಿಗಮದ ಆಣೆಕಟ್ಟು ವೃತ್ತದ ಅಧೀಕ್ಷಕ ಅಭಿಯಂತರರಾದ ಬಿ.ಎಸ್.ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
