ಡಾ ಯಂಕನಗೌಡ ಪಾಟೀಲ, ಮಾಲಹಳ್ಳಿ
ಕೆಂಭಾವಿ: ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಮಾನ್ಸೂನ್ ಮಾರುತಗಳು ಹೆಚ್ಚು, ಕಡಿಮೆಯಾಗುತ್ತಿದ್ದು. ಸುರಪುರ ತಾಲೂಕಿನ ಕೆಂಭಾವಿ ವಲಯದ ಬಹುತೇಕ ಗ್ರಾಮಗಳಲ್ಲಿ ಮುಂಗಾರು ಹಂಗಾಮಿನ ಮಳೆಗಳು ಚೆನ್ನಾಗಿ ಬಂದ ಪ್ರಯುಕ್ತ ತೊಗರಿ, ಹತ್ತಿ, ಬೆಳೆಗಳ ಬಿತ್ತನೆ ಕಾರ್ಯ ಮಾಡಿದ ಮಳೆಯಾಶ್ರಿತ ಪ್ರದೇಶದ ರೈತರು
ಇದೀಗ ವರುಣನ ಕೃಪೆಗಾಗಿ ಮುಗಿಲು ಕಡೆ ಮುಖ ಮಾಡುವಂತಾಗಿದೆ.
ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಪೂರ್ಣಗೊಂಡ ಒಂದೆರಡು ವಾರಗಳು ಕಳೆದಿವೆಯಾದರೂ, ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬರುತ್ತಿಲ್ಲ, ಮಳೆ ಬಾರದಿದ್ದರೆ ಬೆಳೆಗಳು ಸಂಪೂರ್ಣ ಒಣಗಿ ಹೋಗುವ ಭೀತಿ ಇದೀಗ ಎದುರಾಗಿದೆ. ವಲಯಾದ್ಯಂತ ಬರಿ ಮೋಡ ಮುಸುಕಿದ ವಾತಾವರಣ, ಮಳೆಯ ಹನಿಗಳು ಧರೆಗೆ ಇಳಿಯುತ್ತಿಲ್ಲ, ಧರೆಯು ತಣ್ಗಾಗುತ್ತಿಲ್ಲ, ತೇವಾಂಶ ಸಾಕಾಗಿದೆ ಬೆಳೆಗಳು ಒಣಗುತ್ತಿವೆ, ” ಹೊಲಕ್ಹೋದರೆ ಹೊಲದಾಗ ಕಾಲು ನಿಲ್ಲುತ್ತಿಲ್ಲ. ಎಡೆ ಹೊಡೆದು, ಕಳೆ ತಗೆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೈಯಲ್ಲಿದ್ದ ಸಾವಿರಾರು ರೂಪಾಯಿ ಸಾಲದೆ, ಸಾಲ-ಸೋಲ ಮಾಡಿ ಬೀಜ, ರಸಗೊಬ್ಬರ, ಗಳೆದ ಬಾಡಿಗೆ ಕೊಟ್ಟು ಕೈ ಸುಟ್ಟುಕೊಂಡಿವಿ” ಅಂತಾರೆ ಅನ್ನದಾತರು.
ಸದ್ಯದ ಪರಿಸ್ಥಿತಿ ನೋಡಿದರೆ ಮಳೆಯಾಶ್ರಿತ ಪ್ರದೇಶದ ಕೃಷಿಕರು ಆರ್ಥಿಕ ಸಂಕಷ್ಟ ಸಿಲುಕುವುದರಲ್ಲಿ ಸಂದೇಹವಿಲ್ಲ. ಆತಂಕದಲ್ಲಿರುವ ಅನ್ನದಾತರನ್ನು ಮಳೆರಾಯ ಕೈ ಹಿಡಿತಾನೋ, ಬಿಡ್ತಾನೋ, ಎಂಬ ಚಿಂತೆ ಕಾಡುತೈತಿ, ಮಣ್ಣಿನ ಮಕ್ಕಳ ಕಣ್ಣಿರು ಕಪ್ಪಾಳಕ್ಕೆ ಬಂದಾವ, ಮಳೆಯನ್ನೇ ನಂಬಿ ಬಿತ್ತನೆ ಮಾಡಿದ ರೈತರ ಗೋಳು ಹೇಳತೀರದಾಗಿದೆ.
ಮುನಿಸಿಕೊಂಡ ಮಳೆರಾಯ ಇನ್ನಾದರೂ ಕೃಪೆ ತೋರಲಿ, ಮಣ್ಣಿನ ಮಕ್ಕಳ ಬವಣೆ ದೂರು ಮಾಡಲಿ ಎಂಬುದೇ ಜನಸಾಮಾನ್ಯರ ಪ್ರಾರ್ಥನೆಯಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

