ಕೆಂಭಾವಿ: ಮೊಹರಂ ಹಬ್ಬದ ಕೊನೆಯ ದಿನವಾದ ಬುಧವಾರ ಅಲಾಯಿ ದೇವರನ್ನು ಪಟ್ಟಣದಲ್ಲಿ ವಿಜಂಭಣೆಯಿಂದ ಬೀಳ್ಕೊಡಲಾಯಿತು.
ಹಿಂದೂ- ಮುಸ್ಲಿಂ ಸಮುದಾಯದವರು, ಅಲಾಯಿ ದೇವರಿಗೆ ನೈವೇದ್ಯ ಸಲ್ಲಿಸಿ, ಭಕ್ತಿ ಭಾವ ಮೆರೆದರು.
ಪಟ್ಟಣದ ಜಂಡಾ ಕಟ್ಟಾ ಓಣಿ, ನಾಡಗೌಡ ಓಣಿ, ಖಾಜಿರ ಓಣಿ, ಲಾಲಾಬಂದಿ ಓಣಿ, ಹುಳಬುತ್ತಿ ಓಣಿಗಳ ಮಸೀದಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಲಾಯಿ ದೇವರು ಹೊರಬರುತ್ತಿದ್ದಂತೆ ಸಾರ್ವಜನಿಕರು ಮಸೀದಿಯ ಮುಂದೆ ತೋಡಿದ್ದ ಅಲಾಯಿ ಕುಣಿಯನ್ನು ಮುಚ್ಚಿದರು. ಮುಚ್ಚಿದ ಅಲಾಯಿ ಕುಣಿಯ ಸುತ್ತ ಯುವಕರು, ಹಿರಿಯರು, ಮಕ್ಕಳು, ಹೆಜ್ಜೆ ಹಾಕಿದರು. ಅಲಾಯಿ ಕುಣಿಗೆ ಸಾರ್ವಜನಿಕರು ತಮ್ಮ ಕೈಯಿಂದ ಐದು ಬಾರಿ ಹಿಡಿ ಮಣ್ಣು ಹಾಕಿದರು. ಕೆಲವರು ತಮ್ಮ ಕೊರಳಲ್ಲಿ, ಕೈಯಲ್ಲಿ ಕಟ್ಟಿದ್ದ ಲಾಡಿಯನ್ನು ಮರಕ್ಕೆ ಹಾಕಿ, ನಮಸ್ಕರಿಸಿದರು. ದೇವರಿಗೆ ಮಂಡಾಳು ಎಸೆದು ಭಕ್ತಿ ಮೆರೆದರು. ಭಕ್ತರು ತುಂಬಿದ ಬಿಂದಿಗೆ ನೀರನ್ನು ಪೀರಲ ದೇವರು ಹೊತ್ತವರ ಪಾದಕ್ಕೆ ಸುರಿದು, ನಮಸ್ಕರಿಸಿದರು. ಪುರುಷರು, ಮಹಿಳೆಯರ ವೇಷ ಧರಿಸಿ ಗಮನ ಸೆಳೆದರು.
ಪಟ್ಟಣದ ಅಗಸಿ ಯಿಂದ ಆಂಜನೇಯ ದೇವಸ್ಥಾನದ ಮೂಲಕ, ಬಸವೇಶ್ವರ ವೃತ್ತದ ಮೂಲಕ ಪೀರ್ ಗಳು ಸಂಚರಿಸಿ, ನಂತರ ಹಜರತ್ ಜಚ್ಚಾ ಮಸಾಬಿ ದರ್ಗದ ಆವರಣದಲ್ಲಿ ದಫನ್ ಕಾರ್ಯಕ್ರಮ ನೆರವೇರಿತು.

ಪಟ್ಟಣದ ಹುಳಬುತ್ತಿ ಮಸೀದಿಯಲ್ಲಿ ದೇವರ ಸೇವೆ ಸಲ್ಲಿಸುತ್ತಿರುವ ಹಿರಿಯ ಮುಜಾವರ ಖಾಜಾಹುಸೇನ್ ಹಟ್ಟಿ, ಹಾಗೂ ದೇವರ ಕುದರೆಗಳಾದ ಅಲಿ ವಡಕೇರಿ, ಚಾಂದ್ ಮುಜಾವರ, ಜಿಲ್ಹಾನಿ ಹುಳಬುತ್ತಿ ಇವರನ್ನು ಯೂಥ್ ಕಮಿಟಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹುಸೇನ್ ಭಾಷಾ ಹುಳಬುತ್ತಿ, ಅಬ್ದುಲ್ ನಾಶಿ, ಅಲ್ಲಾಬಕ್ಷ ಸಾಸನೂರ್, ಬಾಬು ಎನ್. ಆರ್, ಬುಡ್ಡೆಸಾಬ ಹುಳಬುತ್ತಿ, ಅಷ್ಪಕಾ ವಡಕೇರಿ, ನಬಿ ಹುಳಬುತ್ತಿ,ಸರ್ದಾರ್ ವಡಕೇರಿ, ನಿಂಗು ವಡಕೇರಿ, ದಸ್ತಗೀರ್ ಹುಳಬುತ್ತಿ, ಶಬ್ಬೀರ್ ವಡಕೇರಿ, ಸಲೀಮ್ ವಡಕೇರಿ, ಮಕ್ತುಮ್ ವಡಕೇರಿ, ಜಮೀಲ್ ಹುಳಬುತ್ತಿ, ಜಮೀಲ್ ವಡಕೇರಿ, ರಫೀಕ್ ಚನ್ನೂರ್, ಬಾಬಾ ಯೊವುರ್, ಸೋಹಿಲ್ ಯೊವುರ್ ಹಾಗೂ ಇತರರು ಇದ್ದರು.

