ವಿಜಯಪುರ: ವಿವೇಕಾನಂದರ ಶೈಕ್ಷಣಿಕ ತತ್ವವು ಸಾಮಾನ್ಯ ಜೀವನ ತತ್ವವನ್ನು ಆಧರಿಸಿದ್ದು, ಅದು ಜೀವನ ಕಟ್ಟುವ ವಿಚಾರಗಳ ಸಮೀಕರಣವಾಗಿದೆ. ಪ್ರತಿಯೊಬ್ಬರೂ ಪರಿಪೂರ್ಣತೆಯ ಶಿಕ್ಷಣ ಪಡೆದು ಮಾನವೀಯತೆಯ ವಿಕಾಸ ಹೊಂದಬೇಕು ಎಂದು ಸಾಹಿತಿ ಸಂತೋಷ ಬಂಡೆ ಹೇಳಿದರು.
ಅವರು ನಗರದ ಎಸ್ ಎಸ್ ಪ್ರೌಢ ಶಾಲೆಯಲ್ಲಿ ಮಂಗಳವಾರದಂದು ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ‘ಪ್ರಸ್ತುತ ಶಿಕ್ಷಣದಲ್ಲಿ ವಿವೇಕಾನಂದರ ವಿಚಾರಗಳು’-ಚಿಂತನಗೋಷ್ಠಿ ಹಾಗೂ ‘ಮನ-ಮನಕ್ಕೂ ವಿವೇಕ ಅಭಿಯಾನ’ ಮತ್ತು ‘ರಾಷ್ಟ್ರ ಜಾಗೃತಿ ಪುಸ್ತಕ ವಿತರಣಾ ಸಮಾರಂಭ’ದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು.
ಶಿಕ್ಷಣವು ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಬಲವಾದ ಭಾವನೆಯನ್ನು ಬೆಳೆಸಬೇಕು.
ಶಿಕ್ಷಣವು ಸೃಜನಶೀಲತೆ, ಸ್ವಂತಿಕೆ, ಶ್ರೇಷ್ಠತೆಗೆ ಒತ್ತು ನೀಡಿ, ಆತ್ಮವಿಶ್ವಾಸ ಬೆಳೆಸುವಂತಾಗಬೇಕು ಎಂಬ ವಿವೇಕಾನಂದರ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಡಳಿತಾಧಿಕಾರಿ ಪ್ರೊ.ಆಯ್ ಎಸ್ ಕಾಳಪ್ಪನವರ, ಶಿಕ್ಷಣವು ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು. ಅದು ಎಲ್ಲರಲ್ಲಿ ಧೈರ್ಯ ತುಂಬಿ, ಜೀವನದ ಗಹನ ಸವಾಲುಗಳನ್ನು ಎದುರಿಸಬಲ್ಲ ಶಕ್ತಿಯಾಗಬೇಕು ಎಂಬ ವಿವೇಕಾನಂದರ ಕನಸನ್ನು ನನಸು ಮಾಡುವತ್ತ ನಾವೆಲ್ಲರೂ ಸಂಕಲ್ಪ ಮಾಡಬೇಕಾಗಿದೆ ಎಂದು ಹೇಳಿದರು.
ಉಪಪ್ರಾಚಾರ್ಯ ಕೆ ಬಿ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಿತವ ನಾಡಿಗೆ ಬೆಳಕಾಗಬೇಕು. ದೇಶದ ಕಠಿಣ ಸಂದರ್ಭಗಳಲ್ಲಿ ಜೊತೆಯಾಗಿ ನಿಲ್ಲಬಲ್ಲ ಸಾಮರ್ಥ್ಯ ತೋರಿದಾಗ ವಿವೇಕಾನಂದರ ಶೈಕ್ಷಣಿಕ ವಿಚಾರ ಅನುಪಾಲಿಸಿದಂತೆ ಆಗುತ್ತದೆ ಎಂದು ಹೇಳಿದರು.
ಫೌಂಡೇಶನ್ ಅಧ್ಯಕ್ಷ ಸುನೀಲ ಜೈನಾಪುರ ಮಾತನಾಡಿ,
ವಿವೇಕಾನಂದರ ಶೈಕ್ಷಣಿಕ ಆಲೋಚನೆ ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಮಾರ್ಗಸೂಚಿಯಾಗಿದೆ. ಸಾಮರಸ್ಯದಿಂದ ಸಂಯೋಜಿಸಿದ ಶಿಕ್ಷಣ ಪದ್ದತಿ ಅನುಸರಿಸಿದಾಗ ಸುಸ್ಥಿರ ದೇಶ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಫೌಂಡೇಶನ್ ವತಿಯಿಂದ ರಾಷ್ಟ್ರ ಜಾಗೃತಿ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಪ್ರಾಚಾರ್ಯ ಡಾ.ಜಿ ಡಿ ಅಕಮಂಚಿ ವಿತರಿಸಿ, ಮಾತನಾಡಿ, ಸ್ವಾಮಿ ವಿವೇಕಾನಂದರ ಚಿಂತನೆಗಳು ಎಲ್ಲ ವರ್ಗ, ಜಾತಿ, ಧರ್ಮದ ಜನರಿಗೆ ಸದಾ ಪ್ರೇರಣೆ ನೀಡುತ್ತವೆ ಎಂದು ಹೇಳಿದರು.
ಉಪನ್ಯಾಸಕ ಅಮರೇಶ ಸಾಲಕ್ಕಿ ಕಾರ್ಯಕ್ರಮ ನಿರ್ವಹಿಸಿದರು. ಡಿ ಕೆ ರಾಠೋಡ ಸ್ವಾಗತಿಸಿದರು. ಸಂತೋಷ ಹೆಗಡೆ ವಂದಿಸಿದರು.
ಶಿಕ್ಷಕರಾದ ಬಸವರಾಜ ಬಿರಾದಾರ, ಎಸ್ ಬಿ ನಾಲವರ, ಎಸ್ ಎಸ್ ಲಮಾಣಿ, ತ್ರಿವೇಣಿ ಜಾನಕರ ಹಾಗೂ ಸತೀಶ ನಾಗಠಾಣ, ಶಶಿಕಾಂತ ಸಂಗಣ್ಣವರ ಸೇರಿದಂತೆ ಸಂಸ್ಥೆಯ ಶಿಕ್ಷಕ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

