ಇಂಡಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಆರೋಪ
ಇಂಡಿ: ಶೋಷಿತ, ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಹೇಳುವ ರಾಜ್ಯ ಸರಕಾರ, ಆ ಜನಾಂಗದ ಶ್ರೇಯೋಭಿವೃದ್ದಿಗೆ ಮಿಸಲಿಟ್ಟಿರುವ ಹಣವನ್ನು ನುಂಗಿ ಭ್ರಷ್ಟಾಚಾರದಲ್ಲಿ ಮುಳುಗಿ ಚಾಂಪಿಯನ್ ಆಗಿದ್ದಾರೆ. ಒಂದು ವೇಳೆ ಭ್ರಷ್ಟಾಚಾರದಲ್ಲಿ ಪಾಲುದಾರಿಕೆ ಇಲ್ಲವೆಂದರೆ ಸಿಬಿಐ ತನಿಖೆಗೆ ನೀಡಿ ಎಂದು ಸಂಸದ ರಮೇಶ್ ಜಿಗಜಿಣಗೆ ರಾಜ್ಯ ಸರಕಾರಕ್ಕೆ ಸವಾಲು ಹಾಕಿದರು.
ಅವರು ಬುಧವಾರ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಬಿಜೆಪಿ ಇಂಡಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ನೂತನ ಸಂಸದರಿಗೆ ಸನ್ಮಾನ ಹಾಗೂ ಕಾರ್ಯಕಾರಣಿ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಾವು ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಮುಖಂಡರು ಎಂದು ಸಾರಿ ಹೇಳಿಕೊಳ್ಳುತ್ತೀರಿ, ಅವರ ಅಭಿವೃದ್ಧಿ ಮಾಡಬೇಕು ಎಂಬುದನ್ನು ಮರೆತು ಅವರಿಗಾಗಿ ಮೀಸಲಿಟ್ಟ ಹಣವನ್ನೇ ಗುಳುಂ ಮಾಡುತ್ತೀರಿ, ನೀವೆಲ್ಲ ಅಹಿಂದ ನಾಯಕರಾ ಎಂದು ಪ್ರಶ್ನಿಸಿದರು.
ಶೀಘ್ರದಲ್ಲಿಯೇ ಅಕ್ಕಲಕೋಟ-ವಿಜಯಪೂರ ರಾಷ್ಟೀಯ ಹೆದ್ದಾರಿ ಕಾಮಗಾರಿಗೆ ಪೂಜೆ ನೆರವೇರಿಸಲಾಗುವುದು ಎಂದರು.
ಮಾಜಿ ವಿ.ಪ ಸದಸ್ಯ ಅರುಣ ಶಹಾಪೂರ ಮಾತನಾಡಿ, ಸಂಸದ ರಮೇಶ ಜಿಗಿಜಿಣಗಿ ಅವರು ರಾಜಕೀಯದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ಅವರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲರು, ಇಂಡಿ ತಾಲೂಕಿನವರಾದ ಅಪ್ಪು ಪಟ್ಟಣಶೆಟ್ಟಿ ಹಾಗೂ ವಿಠ್ಠಲ ಕಟಕ ದಂಡ ಅವರನ್ನು ಶಾಸಕರನ್ನಾಗಿ ಮಾಡಿದ್ದು ಇದೇ ಜಿಗಜಿಣಗಿಯವರು ಎಂದ ಅವರು ಜಿಲ್ಲೆಗೆ ೧ ಲಕ್ಷಕ್ಕೂ ಅಧಿಕ ಕೋಟಿ ಹಣವನ್ನು ತಂದು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ, ಅವರಿಗೆ ರಾಜಕಾರಣದಲ್ಲಿ ಇನ್ನೂ ಸಹ ಭವಿಷ್ಯವಿದೆ ಎಂದರು.
ಬಿಜೆಪಿ ಮುಖಂಡ ಕಾಸೂಗೌಡ ಬಿರಾದಾರ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಮಾತನಾಡಿ, ರಮೇಶ್ ಜಿಗಜಿಣಗಿ ಅವರ ಗೆಲುವಿಗೆ ಶ್ರಮಿಸಿದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ತಿಳಿಸಿ, ಜಿಗಜಿಣಗಿ ಸಾಹೇಬರಿಗೆ ಸಚಿವ ಸ್ಥಾನ ಸಿಗಬೇಕಾಗಿತ್ತು. ಅವರ ರಾಜಕೀಯ ಹಿರಿತನಕ್ಕೆ ಪಕ್ಷದಲ್ಲಿ ಗುರುತಿಸುವ ಕಾರ್ಯ ಮಾಡಬೇಕಾಗಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಬೆಲೆ ಏರಿಕೆ ಮಾಡುವುದಲ್ಲದೆ ಬ್ರಷ್ಟಾಚಾರದಲ್ಲಿ ಮುಳಗಿ ಹೋಗಿದೆ. ಸ್ಥಳೀಯ ಶಾಸಕರು ಅಭಿವೃಧ್ಧಿ ವಿಷಯದಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಮತಗಳು ಬಂದ ಸ್ಥಳದಲ್ಲಿ ಕಾಲುವೆ ನೀರು ಹರಿಸುತ್ತಿಲ್ಲ ಅದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಮುಖಂಡ ಶೀಲವಂತ ಉಮರಾಣಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ್, ಮರೆಪ್ಪ ಗಿರಣಿ ವಡ್ಡರ ಮಾತನಾಡಿದರು.
ವೇದಿಕೆಯಲ್ಲಿ ಶಂಕರಗೌಡ ಪಾಟೀಲ್ ಡೋಮನಾಳ, ಅನೀಲ ಜಮಾದಾರ, ಸಿದ್ದಲಿಂಗ ಹಂಜಗಿ, ಅಣ್ಣಪ್ಪ ಖೈನೂರ, ರಾಜಕುಮಾರ ಸಗಾಯಿ, ಮುತ್ತಪ್ಪ ಪೋತೆ, ಶ್ರೀಶೈಲಗೌಡ ಪಾಟೀಲ್, ಅಶೊಕಗೌಡ ಪಾಟೀಲ, ಸಿದ್ದು ಡಂಗಾ, ಅಯೂಬ ನಾಟಿಕಾರ, ಮಲ್ಲು ವಾಲಿಕಾರ, ರವಿ ವಗ್ಗೆ, ಸುನಂದಾ ವಾಲಿಕಾರ್, ಎಸ್.ಜೆ. ವಾಲೀಕಾರ, ಸಿದ್ದಪ್ಪ ಗುನ್ನಾಪೂರ, ಚನ್ನುಗೌಡ ಪಾಟೀಲ ಇದ್ದರು.
ಶ್ರೀಪತಿಗೌಡ ಬಿರಾದಾರ, ಹಣಮಂತ್ರಾಯಗೌಡ ಬಿರಾದಾರ, ವಿಜಯಲಕ್ಷ್ಮಿ ರೂಗಿಮಠ, ಅನಸೂಯಾ ಮದರಿ, ಶಾಮಲಾ ಬಗಲಿ, ಭೌರಮ್ಮ ನಾವಿ, ದೇವೆಂದ್ರ ಕುಂಬಾರ, ರಾಜಶೇಖರ ಯರಗಲ್, ನಾಗೇಶ ಹೆಗಡ್ಯಾಳ, ಧಾನಯ್ಯ ಮಠ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

