ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಗುರಿ ಮತ್ತು ಸಾಧನೆ ಕುರಿತು ಉಪನ್ಯಾಸ
ಚಿಕ್ಕಪಡಸಲಗಿ: ಇಂದಿನ ಯುವಜನತೆಯಲ್ಲಿ ಸ್ಪಷ್ಟತೆಯ ಗುರಿ, ಛಲ ಇಲ್ಲದಿರುವುದು ಎದ್ದು ಕಾಣುತ್ತಿದೆ. ಈ ಅಂಶ ಗಮನಿಸಿದರೆ ಬಾಲಕರಿಗಿಂತ ಬಾಲೆಯರೆ ಬಹುಪಾಲು ಉತ್ತಮ. ಅವರಲ್ಲಿ ಸ್ವಲ್ಪಮಟ್ಟಿಗಾದರೂ ಗುರಿ ಸಾಧಿಸುವ ನಿಟ್ಟಿನಲ್ಲಿ ಕಲಿಕಾ ಓದು, ಅಭ್ಯಾಸದ ಅಭಿರುಚಿ ಪ್ರಯತ್ನ ಇದೆ ಎಂದು ಹಳಿಯಾಳ ತಾಲೂಕಿನ ಮುರ್ಕವಾಡದ ಸುಕೃತಿ ವಿದ್ಯಾರ್ಥಿಗಳ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಅಕಾಡೆಮಿ ಉಸ್ತುವಾರಿ ಹೊತ್ತಿರುವ ಅನೀಲ ನಾಯ್ಕ ಹೇಳಿದರು.
ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿರುವ ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಮಂಗಳವಾರ ಶಾಲಾ ವಿದ್ಯಾರ್ಥಿಗಳಿಗಾಗಿ “ಗುರಿ ಮತ್ತು ಸಾಧನೆ” ಹಾಗೂ “ವೃತ್ತಿಪರ ಮಾರ್ಗದರ್ಶನ” ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣವೇ ಅಮೃತ. ಈ ಜ್ಞಾನ ವಾಹಿನಿಯ ಸಂಜೀವಿನಿ ಪ್ರತಿ ಮಗುವಿನಲ್ಲಿ ಹುದುಗಿದೆ. ಅದನ್ನು ಸುಪ್ತ, ಸೂಕ್ತ, ಸೂಕ್ಷ್ಮ ದೃಷ್ಟಿಯಿಂದ ಗುರುತಿಸಿ ಪ್ರತಿಭೆಗಳನ್ನು ಹೊರ ತಗೆಯಬೇಕಾಗಿದೆ. ಅದಕ್ಕೆ ಗುಣಾತ್ಮಕ ಶಿಕ್ಷಣದ ಸ್ಪರ್ಶ ನೀಡಿ ಯುವ ಪ್ರತಿಭೆಗಳನ್ನು ಭವಿಷ್ಯತ್ತಿನಲ್ಲಿ ಅರಳಿಸುವಂಥ ಪರಿವರ್ತನಾ ಕೆಲಸ ಕಾರ್ಯಗಳು ಯಥೇಚ್ಛವಾಗಿ ನಡೆಯಬೇಕಾಗಿದೆ ಎಂದರು.
ವಿದ್ಯಾರ್ಥಿಗಳು ನೈಜತೆಯುಳ್ಳಂಥ ನಿಷ್ಟೆವೆಂಬ ವಿಶಿಷ್ಟ ಭಾವ ಬದ್ದತೆಯಿಂದ ಮೈಗೂಡಿಸಿಕೊಳ್ಳಬೇಕು. ಯೋಚಿಸಿ, ಚಚಿ೯ಸಿ ಪ್ರಯತ್ನ ಎಂಬ ಛಲದ ಬೀಜ ಮನದಾಳದಲ್ಲಿ ಬಿತ್ತಿಕೊಳ್ಳಬೇಕು. ಗೆಲುವು ನನ್ನಿಂದ ಸಾಧ್ಯವೇ ಎನ್ನುವ ಅನುಮಾನದ ತೋಳಲಾಟದಿಂದ ಮೊದಲು ಹೊರಬರಬೇಕು. ಗೆಲುವು ನನ್ನಿಂದ ಸಾಧ್ಯವೆಂಬ ಆಚಲ ಆತ್ಮವಿಶ್ವಾಸದ ಭರವಸೆ ಕಣಕಣದಲ್ಲಿರಿಸಿಕೊಂಡರೆ ಕಂಡ ಕನಸಿನ ಗುರಿ ತಲುಪಲು ಸಾಧ್ಯ. ಜೀವನದಲ್ಲಿ ಸತತ ಪ್ರಯತ್ನವಾದಿಗಳಾಗಿ ಶ್ರಮಿಸಿದರೆ ಖಂಡಿತ ತಾವುಗಳು ಸಾಧಕರಾಗುವಿರಿ. ಅದೃಷ್ಟ ನಿಮ್ಮ ಕೈಯಲ್ಲಿದೆ. ಸಾಧನೆಗೊಂದು ಸೂತ್ರ ಇದೆ. ಆ ಗುಟ್ಟನ್ನು ಅರಿತು ಸಾಧನೆಯ ಪಯಣದಲ್ಲಿ ಸಂತೃಪ್ತಿಯಿಂದ ಸಾಗಿ. ಜ್ಞಾನದ ಬೆಳಕಿನಲ್ಲಿ ಸಂಪನ್ನತೆ ಕಾಣಿ ಎಂದು ಮಕ್ಕಳಿಗೆ ಅವರು ಸಲಹೆ ನೀಡಿದರು.
ಸೃಜನಶೀಲ ಕ್ರಿಯೇಟಿವ್ ಮೈಂಡ್ ಮನಸ್ಥಿತಿ ಇಂದಿನ ಶಿಕ್ಷಣ ಕಲಿಕೆಯಲ್ಲಿ ಅತ್ಯಗತ್ಯ. ಆ ಭಾವಪರತೆಯಲ್ಲಿ ಶಾಲಾ ಮಕ್ಕಳು ಉತ್ತಮ ನಡತೆ, ಚಿಂತನೆ, ಯೋಚನೆ, ಧೈರ್ಯ, ನಯವಿನಯ, ಗುರು, ಹಿರಿಯರನ್ನು ಗೌರವಿಸುವಂಥ ಸಕಾರಾತ್ಮಕ ಪ್ರಕ್ರಿಯೆಯ ಸದ್ಗುಣಗಳನ್ನು ಹೊಂದಬೇಕು ಎಂದರು.
ತಂದೆ, ತಾಯಿಗಳ ಭಾವನೆಗಳ ಮೇಲೆ ಎಂದಿಗೂ ಕೆಟ್ಟ ಪರಿಣಾಮ ಬೀರದಿರಿ. ವ್ಯತಿರಿಕ್ತವಾಗಿ ತಲೆ ತಗ್ಗಿಸುವಂಥ ಕೃತ್ಯ ಎಸಗಿ ಧಕ್ಕೆ ತರಬೇಡಿ.ಗುರುಗಳು ಇಟ್ಟ ವಿಶ್ವಾಸಕ್ಕೆ ಹಾಗೂ ಹೆತ್ತವರು ನೀಡಿದ ಮಮತೆಯ ಪ್ರೀತಿ ಗೌರವಿಸಿ ಪುನೀತರಾಗಿ, ಗೌರವ ತಂದು ಕೊಡುವಂಥ ಕೆಲಸಗಳಿಗೆ ಆದ್ಯತೆ ನೀಡಿ. ಸಾಧಕರಾಗಿ, ಸಾಧಕಿಯರಾಗಿ ಕೀತಿ೯ ತರಬೇಕು ಎಂದು ಅನಿಲ ನಾಯ್ಕ ತಮ್ಮ ಉಪನ್ಯಾಸದಲ್ಲಿ ಮಕ್ಕಳಿಗೆ ಮಾಮಿ೯ಕ ಸಲಹೆಗಳನ್ನು ನೀಡಿ, ಮಕ್ಕಳೊಂದಿಗೆ ಸಂವಾದ ನಡೆಸಿದರು.
ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಶ್ರಾಂತ ಶಿಕ್ಷಕ, ಹಿರಿಯ ಮಾರ್ಗದಶಿ೯ ಬಸವರಾಜ ಅನಂತಪುರ, ಅತಿಥಿಗಳಾಗಿ ಜಿ.ಆರ್.ಜಾಧವ, ಗುರುಮಾತೆಯರಾದ ಕವಿತಾ ಅಂಬಿ, ಸಹನಾ ಹತ್ತಳ್ಳಿ, ಪ್ರಶಿಕ್ಷಣಾಥಿ೯ ಅಕ್ಷತಾ ಮೂತ್ತೂರ ವೇದಿಕೆಯಲ್ಲಿದ್ದರು.
ಶಿಕ್ಷಕರಾದ ಲೋಹಿತ ಮಿಜಿ೯ ಸ್ವಾಗತಿಸಿದರು, ಸದಾಶಿವ ಸಿದ್ದಾಪುರ ನಿರೂಪಿಸಿದರು, ಈರಣ್ಣ ದೇಸಾಯಿ ವಂದಿಸಿದರು.

