– ಚೇತನ ಶಿವಶಿಂಪಿ
ಮುದ್ದೇಬಿಹಾಳ: ಮಕ್ಕಳ ಸಂತೋಷಕ್ಕಾಗಿ ಪಾಲಕರು ಏನೆಲ್ಲ ಮಾಡಲು ಮುಂದಾಗುತ್ತಾರೆ. ಮಕ್ಕಳ ಸಂತೋಷದಲ್ಲಿ ತಮ್ಮ ಏನೇ ಕಷ್ಟಗಳಿದ್ದರೂ ಮರೆಯುತ್ತಾರೆ. ಇಲ್ಲೊಬ್ಬ ತರಬೇತುದಾರ ತನ್ನ ಮಕ್ಕಳ ಸಂತೋಷದ ಜೊತೆಗೆ ಸಾರ್ವಜನಿಕರಿಗೂ ಅನುಕೂಲವಾಗುವಂತೆ ಉಚಿತ ತರಬೇತಿ ನೀಡುವ ಮೂಲಕ ಮಾದರಿಯ ಕಾರ್ಯ ಮಾಡುತ್ತಿದ್ದಾರೆ.
ದುಡ್ಡು ಕೊಟ್ಟು ತಮ್ಮ ಮಕ್ಕಳಿಗೆ ತರಬೇತಿ ನೀಡಿ ಅಂದರೆ ಬೇಸರ ಪಟ್ಟುಕೊಳ್ಳುವ ಸಧ್ಯದ ಕಾಲಘಟ್ಟದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೇ ಮಕ್ಕಳಿಗೆ ಉಚಿತ ಕರಾಟೆ ಮತ್ತು ಸ್ಕೆಟಿಂಗ್ ತರಬೇತಿ ನೀಡುವ ಮೂಲಕ ತನ್ನಲ್ಲಿರುವ ವಿದ್ಯೆಯನ್ನು ಧಾರೆ ಎರೆದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಕರಾಟೆ ಶಿಕ್ಷಕ ಶಿವಕುಮಾರ ಶಾರದಳ್ಳಿ.
ಶಾರದಳ್ಳಿ ಮೂಲತಃ ನಾರಾಯಣಪುರದವರು. ಮುದ್ದೇಬಿಹಾಳ ಪಟ್ಟಣದಲ್ಲಿ ವಾಸವಾಗಿ ಸಾಕಷ್ಟು ವರ್ಷಗಳಾಗಿವೆ. ಖಾಸಗಿ ಶಾಲೆಯೊಂದರಲ್ಲಿ ಕರಾಟೆ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರದು ಸೌಮ್ಯ ಸ್ವಭಾವ. ಇವರಿಗೆ ಇಬ್ಬರು ಮಕ್ಕಳು. ದೊಡ್ಡವಳು ಮಗಳಾದರೆ ಚಿಕ್ಕವನು ಮಗ. ಇವರಿಬ್ಬರಿಗೂ ದಿನಂಪ್ರತಿ ಬೆಳಿಗ್ಗೆ ಕರಾಟೆ ಮತ್ತು ಸ್ಕೆಟಿಂಗ್ ತರಬೇತಿ ಪ್ರಾರಂಭಿಸಿಸುತ್ತಿದ್ದಂತೆ ಹಲವರು ನಮ್ಮ ಮಕ್ಕಳಿಗೂ ತರಬೇತಿ ನೀಡುತ್ತೀರಾ ಅಂದಾಗ ಯಾವುದೇ ಫಲಾಪೇಕ್ಷೆ ಬಯಸದೇ ತರಬೇತಿ ಪ್ರಾರಂಭಿಸಿದ್ದಾರೆ.
ಸಧ್ಯ ಇವರ ಬಳಿ ತರಬೇತಿ ಪಡೆದುಕೊಳ್ಳುತ್ತಿರುವ ಮಕ್ಕಳ ಸಂಖ್ಯೆ ೩೦ಕ್ಕೇರಿದೆ. ಇದರಲ್ಲಿ ಯಾವ ಮಗುವಿನಿಂದಲೂ ಒಂದು ರೂಪಾಯಿಯನ್ನು ಪಡೆಯುತ್ತಿಲ್ಲ. ಬೆಳಿಗ್ಗೆ ೬ಗಂಟೆಗೆ ತಮ್ಮ ಮಕ್ಕಳನ್ನು ಕರೆತಂದು ಬಿಟ್ಟರೆ ಸಾಕು ತರಬೇತಿ ನೀಡುತ್ತಾರೆ.
ಓಡುತ್ತಿರುವ ಯುಗದಲ್ಲಿ ಮೊಬೈಲ್ ಗೇಮ್‌ಗಳ ಹಿಂದೆ ಬಿದ್ದು ಹಾಳಾಗುತ್ತಿರುವ ಮಕ್ಕಳು ಇಂತಹ ತರಬೇತಿ ಪಡೆಯುವದರಿಂದ ದೈಹಿಕ ಬೆಳವಣಿಗೆ ಮತ್ತು ಆತ್ಮಸ್ಥೆöÊರ್ಯ ಹೆಚ್ಚುವದರ ಜೊತೆಗೆ ಬಲಿಷ್ಠ ಭಾರತ ನಿರ್ಮಾಣಕ್ಕೆ ಬುನಾದಿ ಅಂತಾರೆ ಕೆಲ ಪಾಲಕರು.

” ಮೊದಲು ನನ್ನ ಮಕ್ಕಳಿಗೆ ತರಬೇತಿ ನೀಡುತ್ತಿದ್ದೆ. ಅದನ್ನ ನೋಡಿದ ಹಲವರು ನಮ್ಮ ಮಕ್ಕಳಿಗೂ ತರಬೇತಿ ನೀಡಿ ಅಂದಾಗ ತುಂಬಾ ಖುಷಿ ಆಯಿತು. ಸಧ್ಯ ೩೦ ಮಕ್ಕಳಿಗೆ ತರಬೇತಿ ನೀಡುತ್ತಿದ್ದೇನೆ. ನನಗೆ ಹಣದ ಮೇಲೆ ವ್ಯಾಮೋಹ ಇಲ್ಲ. ಇನ್ನೂ ಹೆಚ್ಚು ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸುವ ಗುರಿ ನನ್ನದು.”
– ಶಿವಕುಮಾರ ಶಾರದಳ್ಳಿ. ತರಬೇತುದಾರ.
ನಮ್ಮ ಇಬ್ಬರು ಮಕ್ಕಳು ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ತರಬೇತಿ ಪ್ರಾರಂಭಿಸುತ್ತಿದ್ದಂತೆ ಅವರಲ್ಲಿನ ಉತ್ಸಾಹ, ಲವಲವಿಕೆ ಹೆಚ್ಚಾಗಿದೆ. ೭ಗಂಟೆಯವರೆಗೆ ಮಲಗುವ ಮಕ್ಕಳು ಸಧ್ಯ ತಾವೇ ಬೇಗ ಎದ್ದು ನನ್ನನ್ನು ಎಚ್ಚರಿಸಿ ಗ್ರೌಂಡ್ ಗೆ ಕರೆದುಕೊಂಡು ಹೋಗುತ್ತಾರೆ. ಈ ಬದಲಾವಣೆಗೆ ಎಷ್ಟು ಹಣ ಕೊಟ್ಟರೂ ಕಡಿಮೆ.”
– ಅಬ್ದುಲರಜಾಕ ಡೊಣೂರ. ಪಾಲಕರು.
” ಹಣ ಪಡೆಯದೇ ತರಬೇತಿ ನೀಡುತ್ತಿರುವ ಇವರ ಸೇವೆ ನಿಜಕ್ಕೂ ಶ್ಲಾಘನೀಯ. ಏನೆಲ್ಲ ಗಳಿಸಲು ಸಾಧ್ಯವಿರುವ ಸಧ್ಯದ ಕಾಲಘಟ್ಟದಲ್ಲಿ ಆರೋಗ್ಯ ಗಳಿಸುವದು ಕಷ್ಟದ ಕೆಲಸ. ಇಂತಹ ಕಷ್ಟದ ಕಾರ್ಯವನ್ನು ಅತೀ ಸುಲಭವಾಗಿ ಮತ್ತು ಉಚಿತವಾಗಿ ನಮ್ಮ ಮಕ್ಕಳಿಗೆ ನೀಡುತ್ತಿರೋದು ಬಲಿಷ್ಠ ಭಾರತಕ್ಕೆ ಬುನಾದಿಯಾಗಿದೆ.”
– ಸುನೀಲ ಹವಾಲ್ದಾರ. ಪಾಲಕರು.

