ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳ ಪರದಾಟ | ಉಮರಜ, ರೇವತಗಾಂವ, ಶಿರಾಡೋಣ, ಹಾಲಳ್ಳಿ ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲ
– ಸಿದ್ರಾಮ ಮಾಳಿ
ರೇವತಗಾಂವ: ತಾಲೂಕಿನ ಬಹುತೇಕ ಗ್ರಾಮಗಳಿಂದ ವಿದ್ಯಾಭ್ಯಾಸಕ್ಕೆ ಹೋಗುವ ವಿದ್ಯಾರ್ಥಿಗಳು ನಿತ್ಯವೂ ಶಾಲಾ-ಕಾಲೇಜಿಗೆ ಬಸ್‌ನಲ್ಲಿ ಹೋಗಬೇಕೆಂದರೆ ಸರ್ಕಸ್ ಮಾಡಬೇಕು. ಇಲ್ಲವಾದರೆ, ತರಗತಿಯೂ ಸಿಗಲ್ಲ, ಮನೆಯಲ್ಲಿ, ಶಾಲಾ, ಕಾಲೇಜುಗಳಲ್ಲಿ ಬೈಸಿಕೊಳ್ಳುವುದು ತಪ್ಪಲ್ಲ!
ತಾಲೂಕಿನ ಬಹುತೇಕ ಗ್ರಾಮಗಳಿಂದ ತಾಲೂಕು ಕೇಂದ್ರಗಳಿಗೆ ವಿದ್ಯಾಭ್ಯಾಸಕ್ಕಾಗಿ ಹೋಗುವ ಸಾವಿರಾರು ವಿದ್ಯಾರ್ಥಿಗಳು ಬೆಳಗ್ಗೆ ಮತ್ತು ಸಾಯಂಕಾಲದ ಸಮಯದಲ್ಲಿ ಎದುರಿಸುತ್ತಿರುವ ನಿತ್ಯದ ಸಮಸ್ಯೆ ಇದು. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ರೈತರು ಹಾಗೂ ಕೂಲಿ ಕಾರ್ಮಿಕರ ಮಕ್ಕಳನ್ನು ನಗರ ಪ್ರದೇಶದಲ್ಲಿನ ಕಾಲೇಜಿಗೆ ಹೋಗುತ್ತಾರೆ. ಬಹುತೇಕರು ಸರಕಾರಿ ಸಾರಿಗೆಯನ್ನೇ ಆಶ್ರಯಿಸಿದ್ದಾರೆ.
ವಿದ್ಯಾರ್ಥಿಗಳು ಹಣ ವ್ಯಯಿಸಿ ಸಾರಿಗೆ ಸಂಸ್ಥೆಯ ಬಸ್ ಪಾಸ್ ಪಡೆದರೂ, ಉಪಯೋಗವಿಲ್ಲದಂತಾಗಿದೆ. ಮಕ್ಕಳಿಗೆ ಬೆಳಗ್ಗೆ ಸಂಚರಿಸುವ ಬಸ್‌ಗಳಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ಸರ್ಕಸ್ ಮಾಡಿಕೊಂಡು ಉಮರಜ, ರೇವತಗಾಂವ, ಶಿರಾಡೋಣ, ಹಾಲಳ್ಳಿ ಗ್ರಾಮಗಳಿಗೆ ಸೇರಬೇಕಾದ ದುಃಸ್ಥಿತಿ ಇದೆ. ಕೆಲವೊಮ್ಮೆ ಬಸ್‌ನ ಬಾಗಿಲಿನಲ್ಲಿ ನೇತಾಡಿಕೊಂಡು ಬಂದ ಹಲವು ಪ್ರಸಂಗಗಳು ಇವೆ.
ನಿಯಂತ್ರಣ ತಪ್ಪಿದರೆ ಅನಾಹುತ ಗ್ಯಾರಂಟಿ: ಇನ್ನು ಶಿರಾಡೋಣದಿಂದ ರೇವತಗಾಂವದವರೆಗೆ ಇರುವುದು ರಸ್ತೆ ಅಷ್ಟಕಷ್ಟೇ. ಬಸ್ ಚಾಲಕನ ನಿಯಂತ್ರಣ ತಪ್ಪದರೆ ದೊಡ್ಡ ಅನಾಹುತವೇ ಸಂಭವಿಸುತ್ತದೆ. ಬೆಳಗ್ಗೆ ಮತ್ತು ಸಾಯಂಕಾಲದ ಸಮಯದಲ್ಲಿ ಉಮರಜದಿಂದ ರೇವತಗಾಂವ, ಶಿರಾಡೋಣ ಮಾರ್ಗವಾಗಿ ಚಡಚಣಕ್ಕೆ ಹೋಗುವಾಗ ಮತ್ತು ಬರುವಾಗ ನೂರಾರು ಜನ ಪ್ರಾಣವನ್ನು ಅಂಗೈಯಲ್ಲಿ ಇಟ್ಟುಕೊಂಡು ಪ್ರಯಾಣಿಸುತ್ತಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಿದರೆ ವಿದ್ಯಾರ್ಥಿಗಳು ಹಾಗೂ ನಾಗರಿಕರ ಪರದಾಟ ತಪ್ಪುತ್ತದೆ ಎಂಬುದು ಪ್ರಯಾಣಿಕರ ಮನವಿ.
ವಿದ್ಯಾರ್ಥಿನಿಯರ ಅಳಲು: ಕಾಲೇಜಿಗೆ ಬರುವ ವಿದ್ಯಾರ್ಥಿನಿಯರು ತಳ್ಳಾಟ, ನೂಕಾಟದಲ್ಲಿ ಸಿಲುಕಿ ಅಸಹನೀಯ ಯಾತನೆ ಅನುಭವಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಿಂದ ಕಷ್ಟಪಟ್ಟು ಕಾಲೇಜಿಗೆ ಬರುವುದೂ ಸಾಕು, ಇಂಥ ಸಂಕಷ್ಟದಲ್ಲಿ ನಿತ್ಯ ಪ್ರಯಾಣಿಸುವುದು ಸಾಕು. ಬಸ್‌ಗಳಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಯಾವುದೇ ಸುರಕ್ಷತೆ ಇಲ್ಲದಂತಾಗಿದೆ ಎಂಬುದು ವಿದ್ಯಾರ್ಥಿನಿಯರ ಅಳಲು.
ಶಾಲಾ ಮಕ್ಕಳ ಪರಿಸ್ಥಿತಿಯಂತೂ ಇನ್ನೂ ಶೋಚನೀಯ, ಕಾಲೇಜು ವಿದ್ಯಾರ್ಥಿಗಳ ನಡುವೆ ಪೈಪೋಟಿ ನಡೆಸಿ ಬ್ಯಾಗ್ ಹೊತ್ತು ಬಸ್‌ಗೆ ಹತ್ತಲು ವಿದ್ಯಾರ್ಥಿಗಳು ಹಿಮಾಲಯ ಪರ್ವತ ಹತ್ತಿದಷ್ಟೇ ಪ್ರಯಾಸ ಪಡಬೇಕಿದೆ. ಕೆಲವು ಕಾಲೇಜು ವಿದ್ಯಾರ್ಥಿಗಳು ಫುಟ್‌ಭೋರ್ಡ್ ಮೇಲೆ ನೇತಾಡಿಕೊಂಡೇ ಪ್ರಯಾಣಿಸಿ ಅಪಾಯಕ್ಕೆ ಆಹ್ವಾನ ನೀಡುವಂತಿದೆ.

