ಸಿಂದಗಿ: ಜಮಖಂಡಿಯ ಹಿರಿಯ ಜಾನಪದ ವಿದ್ವಾಂಸ ಡಾ.ಸಂಗಮೇಶ ಬಿರಾದಾರ ಅವರಿಗೆ ೨೦೨೪ ನೆಯ ಸಾಲಿನ ‘ದೇಸಿ ಸನ್ಮಾನ’ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸಿಂದಗಿಯ ನೆಲೆ ಪ್ರಕಾಶನ ಸಂಸ್ಥೆಯ ಅಂಗ ಸಂಸ್ಥೆಯಾದ ‘ಎಂ.ಎಂ.ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ ಪ್ರಶಸ್ತಿ ಇದಾಗಿದ್ದು ಪ್ರತಿ ವರ್ಷ ನವೆಂಬರ ತಿಂಗಳ ಮೊದಲ ರವಿವಾರದಂದು ಸಿಂದಗಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗುತ್ತದೆ. ಪ್ರಶಸ್ತಿ ಪುರಸ್ಕೃತರಿಗೆ ರೂ.೧೧೦೦೦ ನಗದು ನೀಡುವುದರ ಜೊತೆಗೆ ಪುರಸ್ಕೃತರ ಜೀವನ ಸಾಧನೆಯನ್ನು ತಿಳಿಸುವ ಒಂದು ಗ್ರಂಥವನ್ನು ಬರೆಯಿಸಿ ಅರ್ಪಿಸಲಾಗುವುದು ಎಂದು ಸಂಚಾಲಕ ಡಾ.ಚನ್ನಪ್ಪ ಕಟ್ಟಿ ಹೇಳಿದ್ದಾರೆ. ನಾಡಿನ ಹಿರಿಯ ಜಾನಪದ ವಿದ್ವಾಂಸ ಡಾ.ಶ್ರೀರಾಮ ಇಟ್ಟಣ್ಣವರ ಹಾಗೂ ಬಿ.ಎಲ್.ಡಿ.ಇ.ಸಂಸ್ಥೆಯ ಡಾ.ಎಂ.ಎಸ್.ಮದಭಾವಿ ಅವರು ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.
ಹಿನ್ನೆಲೆ: ಡಾ.ಸಂಗಮೇಶ ಬಿರಾದಾರ ಅವರು ಮೂಲತಃ ಜಮಖಂಡಿ ತಾಲೂಕಿನ ತುಂಗಳ ಗ್ರಾಮದವರು. ಪ್ರಚಾರ ಮತ್ತು ಪ್ರಸಿದ್ಧಿಗಳಿಂದ ದೂರವಿದ್ದು, ಜಾನಪದ ಸೇರಿದಂತೆ ಕವಿತೆ, ವಿಮರ್ಶೆ, ಜೀವನ ಚರಿತ್ರೆ, ಸಂಪಾದನೆ ಮುಂತಾದ ಕ್ಷೇತ್ರಗಳಲ್ಲಿ ಅವರು ಸಾಧನೆಗೈದಿದ್ದಾರೆ. ಗ್ರಾಮ ಪರಿಸರದಲ್ಲಿ ಜನಿಸಿ ಬೆಳೆದ ಅವರಿಗೆ ಜಾನಪದ ಅಧ್ಯಯನ ಆಸಕ್ತಿಯ ಕ್ಷೇತ್ರವಾಗಿತ್ತು. ‘ಚಾಪ ಹಾಕತೀವ ಡಪ್ಪಿನ ಮ್ಯಾಲ ಎನ್ನುವ ಹೆಸರಿನ ಮೂರು ಸಂಪುಟಗಳನ್ನು ನಾಡಿನ ಜಾನಪದ ಲೋಕಕ್ಕೆ ಅರ್ಪಿಸಿದ್ದಾರೆ. ‘ತೇರದಾಳದ ಲಾವಣಿಕಾರರು ಅವರ ಮತ್ತೊಂದು ಮಹತ್ವದ ಕೃತಿ. ಇಂಥ ವಿದ್ವಾಂಸರಿಗೆ ಪ್ರಶಸ್ತಿ ನೀಡಲು ಪ್ರತಿಷ್ಠಾನ ಹೆಮ್ಮೆ ಪಡುತ್ತದೆ ಎಂದು ಸಂಚಾಲಕ ಡಾ.ಚನ್ನಪ್ಪ ಕಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಜಾನಪದ ವಿದ್ವಾಂಸ ಸಂಗಮೇಶ ಬಿರಾದಾರ ಗೆ ‘ದೇಸಿ ಸನ್ಮಾನ’ ಪ್ರಶಸ್ತಿ
Related Posts
Add A Comment

