ವಡವಡಗಿ ನಂದಿ ಮಠದ ಶತಮಾನೋತ್ಸವದ ಸ್ಮರಣ ಸಂಚಿಕೆ ಲೋಕಾರ್ಪಣೆ
ಬಸವನಬಾಗೇವಾಡಿ: ನಾಡಿನಲ್ಲಿ ವಿರಕ್ತಮಠಗಳು ಇರುವುದರಿಂದಾಗಿ ಬಸವಾದಿ ಶರಣರ ತತ್ವ ಸಂದೇಶಗಳು ಉಳಿದುಕೊಂಡಿವೆ. ಪುಸ್ತಕಗಳಿಗೆ ಎಂದಿಗೂ ಸಾವಿಲ್ಲ, ಕೇಡಿಲ್ಲ. ಇವು ಮುಂದಿನ ಪೀಳಿಗೆಗೆ ಇತಿಹಾಸವನ್ನು ತಿಳಿಸಿಕೊಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಈ ದಿಸೆಯಲ್ಲಿ ನಂದಿ ಸಿರಿ ಸ್ಮರಣ ಸಂಚಿಕೆಯು ವಡವಡಗಿ ನಂದಿ ಮಠದ ಇತಿಹಾಸವನ್ನು ತೆರೆದಿಡುತ್ತದೆ ಎಂದು ಮಕ್ಕಳ ಸಾಹಿತಿ ಪ.ಗು.ಸಿದ್ದಾಪೂರ ಹೇಳಿದರು.
ತಾಲೂಕಿನ ಶರಣ ಕ್ಷೇತ್ರ ವಡವಡಗಿ ಗ್ರಾಮದ ನಂದಿ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಂದಿ ಮಠದ ಶತಮಾನೋತ್ಸವ ಸ್ಮರಣ ಸಂಚಿಕೆ ನಂದಿ ಸಿರಿಯನ್ನು ಲೋಕಾರ್ಪಣೆಗೊಳಿಸಿದ ನಂತರ ಮಾತನಾಡಿದ ಅವರು, ಮನುಷ್ಯ ಅಳಿದು ಹೋದರೂ ಪುಸ್ತಕಗಳು ಎಂದಿಗೂ ಅಳಿದು ಹೋಗುವದಿಲ್ಲ. ಅವು ಮುಂದಿನ ಜನಾಂಗಕ್ಕೆ ಗತ ಕಾಲದ ಇತಿಹಾಸವನ್ನು ತಿಳಿಸಿಕೊಡುತ್ತವೆ. ಸಾಹಿತ್ಯದಿಂದ ಮನುಷ್ಯನು ನೆಮ್ಮದಿ ಜೀವನ ಮಾಡಬಹುದು. ೧೨ ನೇ ಶತಮಾನದ ಶರಣರು ಜನರ ಸರಳ ಕನ್ನಡ ಭಾಷೆಯಲ್ಲಿ ವಚನಗಳನ್ನು ರಚಿಸುವ ಮೂಲಕ ಸಮಾಜದಲ್ಲಿರುವ ಮೂಢನಂಬಿಕೆ, ಸಮಾಜದ ಸುಧಾರಣೆಗೆ ಶ್ರಮಿಸಿದರು. ಬಸವೇಶ್ವರರು ರಚಿಸಿರುವ ಕಳಬೇಡ, ಕೊಲಬೇಡ…..ಎಂಬ ಸಪ್ತಸೂತ್ರದ ವಚನದಲ್ಲಿರುವ ಸಂದೇಶವನ್ನು ಪ್ರತಿಯೊಬ್ಬರೂ ಪಾಲಿಸಿದರೆ ಇಡೀ ಸಮಾಜ ಸುಂದರವಾಗಿ,ನೆಮ್ಮದಿಯಿಂದ ಇರುತ್ತದೆ ಎಂದರು.
ನಂದಿ ಸಿರಿ ಸ್ಮರಣ ಸಂಚಿಕೆ ಕುರಿತು ಡಾ.ಸಂಗಮೇಶ ಮೇತ್ರಿ ಮಾತನಾಡಿ, ವಡವಡಗಿ ಗ್ರಾಮವು ಒಂದು ಸಾವಿರ ವರ್ಷದ ಇತಿಹಾಸ ಹೊಂದಿದೆ. ನಂದಿ ಮಠವು ಒಂದು ನೂರು ವರ್ಷದ ಇತಿಹಾಸವನ್ನು ಹೊಂದಿದೆ. ನಂದಿ ಮಠದ ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಯು ವಿವಿಧ ಲೇಖಕರಿಂದ ಉತ್ತಮ ಲೇಖನಗಳನ್ನು ಬರೆಸುವ ಮೂಲಕ ಒಂದು ವಿಶ್ವವಿದ್ಯಾಲಯ ಮಾಡುವಷ್ಟು ಕೆಲಸವನ್ನು ಮಾಡಿದ್ದಾರೆ. ಇದೊಂದು ಸಂಶೋದತ್ಮಾಕ ಸ್ಮರಣ ಸಂಚಿಕೆಯೆಂದರೆ ತಪ್ಪಾಗಲಾರದು. ಈ ಮಠದ ಕುರಿತು ಡಾಕ್ಟರೇಟ್ ಮಾಡುವವರಿಗೆ ಇದು ತಲಸ್ಪರ್ಶಿ ಅವಲೋಕನ ಗ್ರಂಥವಾಗಿ ಹೊರಹೊಮ್ಮಿದೆ ಎಂದರು.
ಸಾನಿಧ್ಯ ವಹಿಸಿದ್ದ ನಂದಿ ಮಠದ ವೀರಸಿದ್ಧ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ಪಡೇಕನೂರದ ಮಲ್ಲಿಕಾರ್ಜುನ ಸ್ವಾಮೀಜಿ, ಚಡಚಣದ ಷಡಕ್ಷರ ಸ್ವಾಮೀಜಿ, ನಂದಿ ಸಿರಿ ಸಂಚಿಕೆಯ ಪ್ರಧಾನ ಸಂಪಾದಕ ಬಾಳನಗೌಡ ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ದಾನಿ ಶಿವಣ್ಣ ಬ್ಯಾಕೋಡ, ಸಾಹಿತಿ ಈರಣ್ಣ ಬೆಕಿನಾಳ ಇದ್ದರು.
ಇದೇ ಸಂದರ್ಭದಲ್ಲಿ ಸ್ಮರಣ ಸಂಚಿಕೆಯ ಲೇಖಕರನ್ನು, ದಾನಿಗಳನ್ನು ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು.
ವೈ.ಎಸ್.ಗಂಗಶೆಟ್ಟಿ ಸ್ವಾಗತಿಸಿದರು. ಶೇಖರಗೌಡ ಉದಾನಗೌಡ್ರ ನಿರೂಪಿಸಿದರು. ಮಂಜುನಾಥ ಬಶೆಟ್ಟಿ ವಂದಿಸಿದರು.