ವಿಜಯಪುರ: ವಿಜಯಪುರ ನಗರದ ವಿವಿಧೆಡೆ ಭಿಕ್ಷಾಟನೆಯಲ್ಲಿ ತೊಡಗಿದ ೧೮ ಜನ ಭಿಕ್ಷುಕರನ್ನು ರಕ್ಷಣೆ ಮಾಡಿ ನಗರದ ಅಫಜಲಪೂರ ಟಕ್ಕೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ದಾಖಲು ಮಾಡಿ ಆಶ್ರಯ ಒದಗಿಸಲಾಗಿದೆ.
ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ನಗರ ಸಂಚಾರ ಕೈಗೊಂಡ ಸಂದರ್ಭದಲ್ಲಿ ನಗರದ ವಿವಿಧೆಡೆ ಇರುವ ನಿರಾಶ್ರಿತರು-ಭಿಕ್ಷುಕರನ್ನು ಕಂಡು, ತಕ್ಷಣ ನಿರಾಶ್ರಿತ ಕೇಂದ್ರದ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಭಿಕ್ಷಾಟಣೆಯಲ್ಲಿ ತೊಡಗಿರುವವರನ್ನು ರಕ್ಷಣೆ ಮಾಡಿ, ಆಶ್ರಯ ಒದಗಿಸಲು ಸೂಚನೆ ನೀಡಿದ ಹಿನ್ನಲೆಯಲ್ಲಿ ಶುಕ್ರವಾರದಂದು ವಿಜಯಪುರ ನಗರದ ಲಕ್ಷ್ಮೀ ಗುಡಿ ಹತ್ತಿರ, ಗಾಂಧಿ ಚೌಕ್, ಬಸ್ ನಿಲ್ದಾಣ, ಬಸವೇಶ್ವರ ಸರ್ಕಲ್, ರೇಲ್ವೆ ಸ್ಟೇಶನ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಭಿಕ್ಷಾಟನೆ ಮಾಡುತ್ತಿರುವ ೧೬ ಜನರ ಪುರುಷರು ಹಾಗೂ ೦೨ ಮಹಿಳೆಯರನ್ನು ನಿರಾಶ್ರಿತರ ಪರಿಹಾರ ಕೇಂದ್ರದ ಸಿಬ್ಬಂದಿಗಳು ರಕ್ಷಣೆ ಮಾಡಿ ಆಶ್ರಯ ಒದಗಿಸಿದ್ದಾರೆ.
ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ಭಿಕ್ಷುಕರಿಗೆ ಹಾಸಿಗೆ, ಹೊದಿಕೆ, ಬಟ್ಟೆ, ಆರೋಗ್ಯ ತಪಾಸಣೆ ಮತ್ತು ಬೆಳಿಗ್ಗೆ ಯೋಗಾಸನ, ಉಪಹಾರ, ಊಟ ಒದಗಿಸುತ್ತಿದ್ದು, ಸಂಜೆ ನಿರಾಶ್ರಿತರಿಗೆ ಕ್ರೀಡಾ ಚಟುವಟಿಕೆ, ರಾತ್ರಿ ಸಮಯದಲ್ಲಿ ಮನರಂಜನೆ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಿರಾಶ್ರಿತರಿಗೆ ಹೊಲಿಗೆ ತರಬೇತಿ, ಕಛೇರಿ ಫೈಲ್ ತಯಾರಿಕೆ, ಅಡುಗೆ ಕೋಣೆ, ಊಟದ ಕೋಣೆ, ಪುರುಷರ ವಸತಿ ಗೃಹ, ಮಹಿಳಾ ವಸತಿ ಗೃಹ, ಕಚೇರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಬಗ್ಗೆ ತರಬೇತಿ ಸಹ ಒದಗಿಸಲಾಗುತ್ತಿದೆ.
ನಗರದ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದವರಲ್ಲಿ ಸುಧಾರಣೆ ಕಂಡು ಬಂದಲ್ಲಿ ಕೇಂದ್ರದಿಂದ ಬಿಡುಗಡೆ ಮತ್ತು ಸಂಬಂಧಿಕರ ಸರಿಯಾದ ವಿಳಾಸ ಮಾಹಿತಿ ಒದಗಿಸಿದ್ದಲ್ಲಿ ಅಂತಹವರನ್ನು ಸಂಬಂಧಿಕರಿಗೆ ಒಪ್ಪಿಸಲು ಸಹ ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರದಲ್ಲಿ ಒಟ್ಟು ೨೧ ಜನ ಅಧಿಕಾರಿ-ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುದ್ದು, ಅವರ ಆರೋಗ್ಯ ಚಿಕಿತ್ಸೆಗೆ ಕೇಂದ್ರದ ಆಸ್ಪತ್ರೆಯಲ್ಲಿ ವೈದ್ಯರು-ಶುಶ್ರೂಷಕರು ಲಭ್ಯವಿರುತ್ತಾರೆ. ಈ ಕೇಂದ್ರದಲ್ಲಿ ೧೬೦ ಜನ ಪುರುಷರು ಹಾಗೂ ೩೮ ಜನ ಮಹಿಳೆಯರು ಸೇರಿದಂತೆ ಒಟ್ಟು ೧೯೮ ಭಿಕ್ಷುಕರು-ನಿರಾಶ್ರಿತರಿಗೆ ಆಶ್ರಯ ಒದಗಿಸಲಾಗಿದೆ.
ಸಾರ್ವಜನಿಕರು ಸಹ ನಗರದ ವಿವಿಧೆಡೆ ಇಂತಹ ಭಿಕ್ಷುಕರು, ನಿರಾಶ್ರಿತರು ಕಂಡು ಬಂದಲ್ಲಿ ಭಿಕ್ಷುಕರ ಸಹಾಯವಾಣಿ ಟೋಲ್ ಫ್ರಿ ಸಂಖ್ಯೆ : ೧೦೫೮೧, ಮೊ: ೯೪೮೨೩೦೦೪೦೦ ಗೆ ಕರೆ ಮಾಡಿ ಮಾಹಿತಿ ನೀಡಿದ್ದಲ್ಲಿ ಕೂಡಲೇ ಅವರನ್ನು ರಕ್ಷಣೆ ಮಾಡಿ ಕೇಂದ್ರದಲ್ಲಿ ಆಶ್ರಯ ಒದಗಿಸಲಾಗುತ್ತದೆ ಎಂದು ನಿರಾಶ್ರಿತರ ಕೇಂದ್ರದ ಅಧೀಕ್ಷಕ ಬಸವರಾಜ ನಾಟೀಕಾರ ಅವರು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಡಿಸಿ ನಿರ್ದೇಶನ: ೧೮ ಭಿಕ್ಷುಕರ ರಕ್ಷಿಸಿ ನಿರಾಶ್ರಿತ ಕೇಂದ್ರಕ್ಕೆ ದಾಖಲು
Related Posts
Add A Comment

