ದುರ್ವಾಸನೆಯುಕ್ತ ಶಾಲಾ ಪರಿಸರ | ಡೆಂಗ್ಯೂ-ಮಲೇರಿಯಾ ಭೀತಿ | ಮೂಲಸೌಕರ್ಯಗಳ ಕೊರತೆ | ಸ್ಪಂದಿಸದ ಅಧಿಕಾರಿಗಳು

– ಇಂದುಶೇಖರ ಮಣೂರ
ವಿಜಯಪುರ: ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಸೌಲಭ್ಯ ಉಂಟು, ಆದರೆ ಕುಡಿಯಲು – ತೊಳೆಯಲು ನೀರಿಲ್ಲ. ವಿಶಾಲ ಮೈದಾನವುಂಟು, ತಡೆಗೋಡೆ (ಕಂಪೌಂಡ್) ಇಲ್ಲ. ಶೌಚಾಲಯ ಉಂಟು, ಬಳಕೆಯಲ್ಲಿಲ್ಲ. ಇನ್ನು ಶಾಲಾ ಆವರಣದ ಪರಿಸರದಲ್ಲಿ ಸ್ವಚ್ಛತೆಯಂತೂ ಇಲ್ಲ.. ಇಲ್ಲ.. ಇಲ್ಲ. ಹೀಗೆ ’ಇಲ್ಲ’ಗಳ ಸಾಮ್ರಾಜ್ಯದಲ್ಲಿ ನರಳುತ್ತಿರುವ ಶಾಲೆಯೊಂದು ಜಿಲ್ಲೆಯ ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದಲ್ಲಿರುವುದು ಮಾತ್ರ ’ಹೌದು’.
ಓತಿಹಾಳ ಗ್ರಾಮದ ಸರಕಾರಿ ಪ್ರೌಡಶಾಲೆ ಸುಮಾರು ೮ ಎಕರೆ ಪ್ರದೇಶವನ್ನು ಹೊಂದಿದೆ. ಬಹುಶಃ ಜಿಲ್ಲೆಯಲ್ಲಿ ಇಷ್ಟೊಂದು ವಿಶಾಲವಾದ ವಿಸ್ತೀರ್ಣ ಹೊಂದಿದ ಶಾಲೆ ಬೇರೊಂದು ಇರಲಿಕ್ಕಿಲ್ಲ. ಇದೊಂದೇ ಈ ಶಾಲೆಗಿರುವ ಹೆಗ್ಗಳಿಕೆ. ಉಳಿದಂತೆ ಈ ಶಾಲಾ ಮಕ್ಕಳು ಅನುಭವಿಸುತ್ತಿರುವ ಸಮಸ್ಯೆಗಳೂ ಸಹ ವಿಶಾಲವಾಗಿವೆ.
ಓತಿಹಾಳ ಗ್ರಾಮದಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ಸುಮಾರು ೧೫೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ೮, ೯ ಮತ್ತು ೧೦ ನೇ ತರಗತಿಗಳ ಕಲಿಕೆಗೆ ಅವಕಾಶವಿದೆ. ಆದರೆ ಇಲ್ಲಿಯ ಮಕ್ಕಳಿಗೆ ನಿರಾತಂಕವಾಗಿ ವಿದ್ಯಾಭ್ಯಾಸ ಮಾಡುವ ವಾತಾವರಣ ಮಾತ್ರ ಇಲ್ಲಿಲ್ಲ. ಈ ಶಾಲೆಯ ಪರಿಸರ ಶೋಚನೀಯವಾಗಿದೆ. ಈ ಶಾಲೆಗೆ ಕಂಪೌಂಡೇ ನಿರ್ಮಾಣವಾಗಿಲ್ಲ. ೩ ವರ್ಷಗಳ ಹಿಂದೆ ಗ್ರಾಮ ಪಂಚಾಯತಿಯು ಇಲ್ಲಿ ಕಂಪೌಂಡ್ ಕಾಮಗಾರಿ ಶೇ.೨೫ ರಷ್ಟು ಮಾತ್ರ ಮಾಡಿ ಕೈತೊಳೆದುಕೊಂಡಿದೆ.
ಇನ್ನು ಶಾಲಾ ಆವರಣದಲ್ಲಿ ಶಾಲಾ ಕಟ್ಟಡಕ್ಕೆ ಹೊಂದಿಕೊಂಡೇ ಸದಾಕಾಲ ಕೊಳಚೆ ನೀರು ನಿಂತು ಇದು ಗ್ರಾಮದ ಹಂದಿಗಳಿಗೆ ವಿಹಾರ ತಾಣವಾಗಿ ಮಾರ್ಪಟ್ಟಿದೆ. ಸೊಳ್ಳೆಗಳ ಸಂತಾನೋತ್ಪತ್ತಿ ಕೇಂದ್ರವಾಗಿದೆ. ರಾಜ್ರಾದ್ಯಂತ ಡೆಂಗ್ಯೂ, ಮಲೇರಿಯಾ ಮಾರಿ ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಇಲ್ಲಿಯ ಮಕ್ಕಳು ಮತ್ತು ಶಿಕ್ಷಕರ ಆರೋಗ್ಯ ಎಷ್ಟರಮಟ್ಟಿಗೆ ಸುರಕ್ಷಿತ ಎಂಬುದನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಂಭೀರವಾಗಿ ಯೋಚಿಸಬೇಕಿದೆ. ಸಾಂಕ್ರಾಮಿಕ ರೋಗ ಹರಡುವ ಮುನ್ನವೇ ಅವರು ಕ್ರಮ ಕೈಗೊಳ್ಳಬೇಕಿದೆ.
ಶಾಲಾ ಕಿಟಕಿಗಳ ಪಕ್ಕದಲ್ಲೇ ಕೊಳಚೆ ನೀರಿನ ಸಂಗ್ರಹವಿರುವುದರಿಂದ ಅದರ ದುರ್ವಾಸನೆಯಂತೂ ತಡೆಯಲಸಾಧ್ಯವಾಗಿದೆ. ಇದರಿಂದ ಶಿಕ್ಷಕರು ಮತ್ತು ಮಕ್ಕಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ತುರ್ತಾಗಿ ಇಲ್ಲಿಯ ಗಾಪಂ ಅಧಿಕಾರಿಗಳು ಈ ಸಮಸ್ಯೆಗೆ ಮುಕ್ತಿ ನೀಡಬೇಕಿದೆ.
ಇನ್ನು ಶಾಲೆಯಲ್ಲಿ ಶೌಚಾಲಯವಿದ್ದರೂ ನೀರಿನ ಸೌಲಭ್ಯವಿರದ ಕಾರಣ ವಿದ್ಯಾರ್ಥಿಗಳ ಪಾಲಿಗೆ ಅದು ಇದ್ದೂ ಇಲ್ಲದಂತಾಗಿದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ದೇಹಬಾಧೆ ತೀರಿಸಿಕೊಳ್ಳಲು ಶಾಲೆಯ ಮುಂದಿನ ಬಯಲನ್ನೇ ಆಶ್ರಯಿಸಿದ್ದಾರೆ. ಆದರೆ ಇಲ್ಲಿ ಓದುತ್ತಿರುವ ಅಂದಾಜು ೭೦ ಕ್ಕೂ ಅಧಿಕ ಹೆಣ್ಣುಮಕ್ಕಳು ಏನು ಮಾಡಬೇಕು? ಅವರು ನಿತ್ಯ ಮೌನವಾಗಿ ಚಿತ್ರಹಿಂಸೆ ಅನುಭವಿಸುತ್ತಲೇ ಸಮಯ ತಳ್ಳುವಂತಾಗಿದೆ. ಇಂತಹ ಸೂಕ್ಷ್ಮತೆಗಳು ಸಂಬಂಧಿಸಿದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಅರ್ಥವಾಗುವುದಾದರೂ ಯಾವಾಗ? ಎಂಬ ಪ್ರಶ್ನೆ ವಿದ್ಯಾರ್ಥಿನಿಯರದ್ದು.
ಮುಖ್ಯವಾಗಿ ಈ ಶಾಲೆಯಲ್ಲಿ ಮಕ್ಕಳು ತಮ್ಮ ದಾಹ ತೀರಿಸಿಕೊಳ್ಳಲು ಅಗತ್ಯವಾದ ಜೀವಜಲವೇ ಇಲ್ಲಿಲ್ಲ. ದಾಹವಾದಾಗ ಮತ್ತು ಬಿಸಿಯೂಟ ಸೇವಿಸಿದ ಬಳಿಕ ಶಾಲೆಯಾಚೆ ಕೊಂಚ ದೂರದಲ್ಲಿರುವ ಕೊಳವೆ ಬಾವಿಗೆ ಹೋಗಿ ಕೈಪಂಪ್ ಹೊಡೆದು ನೀರು ಕುಡಿಯಬೇಕು. ತಟ್ಟೆಯನ್ನು ಸಹ ಅಲ್ಲಿಗೇ ತೆಗೆದುಕೊಂಡು ಹೋಗಿ ತೊಳೆಯಬೇಕು. ಕೈಪಂಪ್ ಕೆಟ್ಟರಂತೂ ಈ ಮಕ್ಕಳ ಪರಿಸ್ಥಿತಿ ಯಾರಿಗೂ ಬೇಡ..
ಕಳೆದ ಹಲವಾರು ವರ್ಷಗಳಿಂದ ಶಾಲಾ ಆವರಣದಲ್ಲಿ ಕೊಳವೆ ಬಾವಿ ನಿರ್ಮಿಸಿ ಮಕ್ಕಳಿಗೆ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಿಕೊಡುವಂತೆ ಹಿಂದೆ ಅಧಿಕಾರದಲ್ಲಿದ್ದ ಶಾಸಕ ರಮೇಶ ಭೂಸನೂರ ಮತ್ತು ಸಚಿವ ದಿ. ಎಂ.ಸಿ.ಮನಗೂಳಿ ಅವರಿಗೂ ಹಲವು ಬಾರಿ ಮನವಿ ಸಲ್ಲಿಸಿ ಅಲವತ್ತುಕೊಂಡರೂ ಅವರು ಆಗ ನೀಡಿದ ಭರವಸೆ ಕೇವಲ ಭರವಸೆಯಾಗಿಯೇ ಉಳಿಯಿತು. ಇನ್ನು ಈಗ ಅಧಿಕಾರದಲ್ಲಿರುವ ಶಾಸಕ ಅಶೋಕ ಮನಗೂಳಿಯವರಿಗೆ ಮೌಖಿಕವಾಗಿ ಮನವಿ ಮಾಡಿಕೊಂಡಿದ್ದು ಅವರು ಮಾಡಿಕೊಡುವ ಭರವಸೆ ನೀಡಿದ್ದು ಕಾರ್ಯರೂಪಕ್ಕೆ ಬರುವ ಕುರಿತು ಕಾದು ನೋಡಬೇಕಿದೆ ಎನ್ನುತ್ತಾರೆ ಗ್ರಾಮದ ಶಿವಾನಂದ ಎಸ್. ಸಾಲಿಮಠ, ಕಿರಣಕುಮಾರ ನಾಟೀಕಾರ, ಸುನೀಲಕುಮಾರ ಮಣೂರ, ಶಾಂತಗೌಡ ಬಿರಾದಾರ, ಶಿವಪುತ್ರ ಬೂದಿಹಾಳ ಸೇರಿದಂತೆ ಹಲವು ಗ್ರಾಮಸ್ಥರು.
ಇನ್ನಾದರೂ ಈ ಶಾಲೆಯ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ, ಪಾಲಕರೊಂದಿಗೆ ಗ್ರಾಮಸ್ಥರು ಪ್ರತಿಭಟನೆಯ ಮಾರ್ಗ ಹಿಡಿಯುವ ಮುನ್ನವೇ ಎಚ್ಚೆತ್ತು ಈ ’ಇಲ್ಲ’ಗಳ ಸಾಮ್ರಾಜ್ಯವನ್ನು ಪತನಗೊಳಿಸಿ, ಮಕ್ಕಳಿಗೆ ಅನುಕೂಲ ಕಲ್ಪಿಸಿಕೊಡಬೇಕೆಂಬುದು ಗ್ರಾಮಸ್ಥರ ಒಕ್ಕೊರಲಿನ ಆಗ್ರಹವಾಗಿದೆ.

” ನಾನು ಕಾರ್ಯ ನಿಮಿತ್ತ ಇತ್ತೀಚೆಗೆ ಶಾಲಾ ಕಚೇರಿ ಮತ್ತು ತರಗತಿ ಕೋಣೆಗೆ ಹೋದಾಗ ಅಲ್ಲಿಯ ದುರ್ವಾಸನೆ ಸಹಿಸಲಸಾಧ್ಯವಾಗಿ ಮೂಗು ಮುಚ್ಚಿಕೊಂಡೇ ಇರಬೇಕಾಯ್ತು. ಇಲ್ಲಿ ಶಿಕ್ವಕರು ಹಾಗೂ ಮಕ್ಕಳು ಈ ಕೆಟ್ಟ ವಾಸನೆಯನ್ನು ಅದ್ಹೇಗೆ ಸಹಿಸಿಕೊಳ್ತಾರೆಂಬುದನ್ನು ನೆನೆಸಿಕೊಂಡರೇನೇ ಸಂಕಟವಾಗುತ್ತೆ. ಕ್ರಿಯಾಶೀಲರೆನಿಸಿಕೊಂಡಿರುವ ಶಾಸಕ ಅಶೋಕ ಮನಗೂಳಿ ಕೂಡಲೇ ಇಲ್ಲಿ ಕೊಳವೆ ಬಾವಿ ಕೊರೆಸಿ ನೀರಿನ ಅನುಕೂಲ ಮಾಡಿಕೊಡಬೇಕು.”
– ಶಿವಾನಂದ ಎಸ್.ಸಾಲಿಮಠ
ಗ್ರಾಮಸ್ಥರು, ಓತಿಹಾಳ

” ಓತಿಹಾಳ ಪ್ರೌಢಶಾಲೆಯ ಆವರಣದಲ್ಲಿರುವ ಗಲೀಜು, ಹಂದಿಗಳ ಹಾವಳಿ ನೋಡಲು ಅಸಹ್ಯವಾಗಿದೆ. ಅದರ ಗಬ್ಬು ವಾಸನೆಯಲ್ಲಿಯೇ ಮಕ್ಕಳು ವ್ಯಾಸಂಗ ಮಾಡಬೇಕು. ಶಿಕ್ಷಕರು ಈ ಕೆಟ್ಟ ಪರಿಸರದಲ್ಲಿಯೇ ತರಗತಿ ನಿರ್ವಹಣೆ ಮಾಡಬೇಕು. ಹೀಗಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈವರೆಗೂ ಇದಕ್ಕೆ ಕ್ಯಾರೇ ಎನ್ನದಿರುವುದು ದುರದೃಷ್ಟಕರ.”
– ಪ್ರವೀಣ ಹಾಲಹಳ್ಳಿ
ಸಾಮಾಜಿಕ ಹೋರಾಟಗಾರರು, ಸಿಂದಗಿ

“ಶಾಲಾ ಆವರಣದಲ್ಲಿ ಹರಡಿರುವ ಕೊಳಚೆ ನೀರಿನ ದುರ್ವಾಸನೆ ತಡೆಯಲು ಹಾಗೂ ಡೆಂಗ್ಯೂ ಮೊದಲಾದ ರೋಗ ಹರಡದಂತೆ ಮುಂಜಾಗೃತೆ ವಹಿಸಲು ಶಾಲಾ ಆವರಣಕ್ಕೆ ನೀರು ಹರಿದು ಬರುವುದನ್ನು ನಿಲ್ಲಿಸಲು ಬಂದಾಳ ಗ್ರಾಪಂ ಅಧ್ಯಕ್ಷರು ಮತ್ತು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಇದೇ ಜು.೭ ರಂದು ಮನವಿ ಸಲ್ಲಿಸಿರುವೆ. ಅದಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.”
– ಡಿ.ಬಿ.ದೊಡಮನಿ
ಮುಖ್ಯ ಗುರು, ಸರಕಾರಿ ಪ್ರೌಢಶಾಲೆ, ಓತಿಹಾಳ

